ನಿಜ ಹೇಳಿದ ಮಗುವಿನ ಬೆಂಬಲಕ್ಕೆ ನಾವಿದ್ದೇವೆ

We support the child who told the truth.
ವಿಜಯಪುರದ ಬಿಜೆಪಿ ಕಚೇರಿಯಲ್ಲಿ ವಿಧಾನ ಪರಿಷತ್​ ಮಾಜಿ ಸದಸ್ಯ ಅರುಣ ಶಹಾಪುರ ಸುದ್ದಿಗೋಷ್ಠಿ ನಡೆಸಿದರು. ಸುರೇಶ ಬಿರಾದಾರ, ಈರಣ್ಣ ರಾವೂರ, ವಿಜಯ ಜೋಷಿ ಇದ್ದಾರೆ.
Published on

ವಿಜಯಪುರ: ರಾಜ್ಯದಲ್ಲಿ ಹದಗೆಟ್ಟಿರುವ ಶಿಕ್ಷಣ ವ್ಯವಸ್ಥೆ ಸರಿಪಡಿಸುವ ಬದಲು "ಶಿಕ್ಷಣ ಸಚಿವರಿಗೆ ಸರಿಯಾಗಿ ಕನ್ನಡವೇ ಬರಲ್ಲ' ಎಂದು ನಿಜ ಹೇಳಿದ ಮಗುವಿನ ಮೇಲೆ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡಿರುವ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರ ನಡೆ ಖಂಡನೀಯ ಎಂದು ವಿಧಾನ ಪರಿಷತ್​ ಮಾಜಿ ಸಚಿವ ಅರುಣ ಶಹಾಪುರ ತಿಳಿಸಿದರು.

ಶಿಕ್ಷಣ ವ್ಯವಸ್ಥೆ ಸಂಪೂರ್ಣ ಹಳ್ಳ ಹಿಡಿದಿದೆ. ಸರ್ಕಾರಿ ಶಾಲೆಗಳ ಸ್ಥಿತಿ ಶೋಚನೀಯವಾಗಿದೆ. ಶಿಕ್ಷಕರಿಗೆ ಬೋಧನೆ ಬಿಟ್ಟು ಎಲ್ಲ ಜವಾಬ್ದಾರಿ ನೀಡಲಾಗಿದೆ.

ಮಕ್ಕಳ ಶೈಕ್ಷಣಿಕ ಗುಣಮಟ್ಟ ಕುಸಿಯುತ್ತಿದೆ. ಆ ನಿಟ್ಟಿನಲ್ಲಿ ಗಮನ ಹರಿಸುವುದು ಬಿಟ್ಟು ಮಗುವಿನ ಹೇಳಿಕೆಯನ್ನೇ ಗಂಭೀರವಾಗಿ ತೆಗೆದುಕೊಂಡು ಕ್ರಮಕ್ಕೆ ಮುಂದಾಗುವುದಾದರೆ ಆ ಮಗುವಿನ ಬೆಂಬಲಕ್ಕೆ ನಾವಿದ್ದೇವೆ ಎಂಬ ಸಾಂತ್ವನದ ನುಡಿ ನಾವು ಹೇಳಬೇಕಾಗುತ್ತದೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಅವರು ಎಚ್ಚರಿಸಿದರು.

ರಾಜ್ಯದಲ್ಲಿ ಶಿಕ್ಷಕರು ಶಿಕ್ಷಣವನ್ನು ಹೊರತುಪಡಿಸಿ ಉಳಿದೆಲ್ಲ ಕಾರ್ಯಗಳನ್ನು ನಿಭಾಯಿಸಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಚಿಕ್ಕೆ, ಬಾಳೆ ಹಣ್ಣು, ಮೊಟ್ಟೆ ತಿನ್ನುವವರ ಸಹಿ ಪಡೆದು ದಾಖಲೆ ನಿರ್ವಹಣೆ ಮಾಡುವುದು, ಆನ್​ಲೈನ್​ಗೆ ಅಪ್​ಲೋಡ್​ ಮಾಡುವುದೇ ಶಿಕ್ಷಕರ ಮಹತ್ತರ ಜವಾಬ್ದಾರಿಯಾಗಿದೆ.

ಇದರಿಂದ ಮಕ್ಕಳ ಕಲಿಕೆಗೆ ಹಿನ್ನಡೆಯಾಗುತ್ತಿದೆ ಎಂದ ಶಹಾಪುರ, ಬೋಧಕೇತರ ಸಿಬ್ಬಂದಿಗೆ ಈ ಜವಾಬ್ದಾರಿ ನೀಡಿ ಇಲ್ಲವೆ ಎಲ್ಲ ಬೋಧಕ ಸಿಬ್ಬಂದಿಯನ್ನು ಬೋಧಕೇತರ ಎಂದಾದರೂ ಮಾಡಿಬಿಡಿ ಎಂದು ಹರಿಹಾಯ್ದರು.

ಸದ್ಯ ಸರ್ಕಾರಿ ಶಾಲೆಗಳ ಸ್ಥಿತಿ ಹೇಗಾಗಿದೆ ಎಂದರೆ ಸರ್ಕಾರದ ಯೋಜನೆಗಳನ್ನು ಜಾರಿಗೊಳಿಸುವ ಪ್ಲಾಟ್​ಫಾಮ್​ರ್ಗಳಾಗಿವೆ. ಹೀಗಾಗಿ "ಶಾಲೆಗಳನ್ನು ಶಾಲೆಗಳಾಗಿ ಉಳಿಸಿ&ಶಿಕ್ಷಕರನ್ನು ಬೋಧಕ ಸಿಬ್ಬಂದಿಯನ್ನಾಗಿ ಮಾತ್ರ ಉಳಿಸಿ' ಎಂಬ ಅಭಿಯಾನ ನಡೆಸಲಾಗುವುದು. ಶ್ರೀದಲ್ಲಿಯೇ ಬಿಜೆಪಿ ರಾಜ್ಯ ನಾಯಕರ ಗಮನಕ್ಕೆ ತಂದು ಶಿಕ್ಷಕರ ನೇಮಕಾತಿ, ಸಮರ್ಪಕವಾಗಿ ಸಂಬಳ ನೀಡುವುದು, ಸರ್ಕಾರಿ ಶಾಲೆಗಳ ಕಟ್ಟಡಗಳ ದುರಸ್ತಿ ಸೇರಿದಂತೆ ಸಮಗ್ರ ಅಭಿವೃದ್ಧಿಗಾಗಿ ಧರಣಿ ಹಮ್ಮಿಕೊಳ್ಳಲಾಗುವುದು ಎಂದರು.

ಸರ್ಕಾರ ಕಲಿಕೆಯಲ್ಲಿ ಹಿಂದುಳಿದ ಮಕ್ಕಳಿಗೆ ವಿದ್ಯಾಸಿಂಚನೆ ಯೋಜನೆ ಜಾರಿಗೊಳಿಸಿದೆ. ಅದರ ಪಠ್ಯಪುಸ್ತಕ ಕೊಟ್ಟು ಅದನ್ನೂ ಸಹ ಹೆಚ್ಚುವರಿಯಾಗಿ ಬೋಧಿಸಬೇಕೆಂದು ಸೂಚಿಸಿದೆ. ಆದರೆ ಆ ಶಿಕ್ಷಕರಿಗೆ ಸೂಕ್ತ ತರಬೇತಿ ಇಲ್ಲ. 1008 ಪೂರ್ವ ಪ್ರಾಥಮಿಕ ಶಾಲೆ ಆರಂಭಿಸಲಾಗಿದೆ. ಆದರೆ, ಮಾರ್ಗದರ್ಶಕ ಕೈಪಿಡಿ ನೀಡಿಲ್ಲ, ಬೋಧನೆಗೆ ಶಿಕ್ಷಕರಿಲ್ಲ.

ಕರ್ನಾಟಕದಲ್ಲಿ ಪೂರ್ವ ಪ್ರಾಥಮಿಕ ತರಬೇತಿ ವ್ಯವಸ್ಥೆಯೇ ಇಲ್ಲ. ಸಂಬಳಕ್ಕೆ ಸಂಬಂಧಿಸಿದಂತೆ ಸ್ಪಷ್ಟತೆ ಇಲ್ಲ. ತಕ್ಷಣ ಸ್ಪಷ್ಟತೆ ಕೊಡಬೇಕು. ದೀಪಾವಳಿ ಮುಗಿದರೂ ಸರ್ಕಾರಿ ನೌಕರರಿಗೆ ಡಿಎ ನೀಡಿಲ್ಲ. ಹೀಗಾಗಿ ಕೂಡಲೇ ಡಿಎ ಹಣ ಕೊಡಬೇಕೆಂದು ಆಗ್ರಹಿಸಲಾಗುವುದು ಎಂದರು.

ಮುಖಂಡರಾದ ಸುರೇಶ ಬಿರಾದಾರ, ಈರಣ್ಣ ರಾವೂರ, ರಾಜು ವಾಲಿ, ಸಂಪತ್ತ ಕುವಳ್ಳಿ, ವಿಜಯ ಜೋಷಿ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net