

ಮೈಸೂರು: ಮನುಷ್ಯ ಭೂಮಿ ಮೇಲೆ ನಿರಂತರವಾಗಿ ಬದುಕಬೇಕಾದರೆ ಪ್ರತಿಯೊಂದು ಜೀವರಾಶಿ ಹಾಗೂ ಪ್ರಕೃತಿಯ ಬಗ್ಗೆ ಕಾಳಜಿ ವಹಿಸಬೇಕು. ಭೂಮಿಯ ಮಹತ್ವ ಅರಿತು ದುರುಪಯೋಗ ಮಾಡದೆ ಇದ್ದಾಗ ಮಾತ್ರ ಮನುಷ್ಯನ ಉಳಿವು ಸಾಧ್ಯ ಎಂದು ದೇಶದ ಋಷಿ ಮುನಿಗಳು ತಿಳಿಸಿದ್ದಾರೆ. ಋಷಿ ಮುನಿಗಳು ಹೇಳಿದ ರೀತಿಯಲ್ಲಿ ನಾವು ಬದುಕಬೇಕು ನಡೆಸಿದರೆ ಭೂಮಿಯ ಎಲ್ಲ ಜೀವರಾಶಿಗಳು ಉಳಿಯಲು ಸಾಧ್ಯವಾಗುತ್ತದೆ ಎಂದು ಇಸ್ರೋ ಮಾಜಿ ಅಧ್ಯಕ್ಷರೂ ಆಗಿರುವ 14ನೇ ಅಖಿಲ ಕರ್ನಾಟಕ ವಿಜ್ಞಾನ ಸಮ್ಮೇಳನಾಧ್ಯಕ್ಷ ಎ.ಎಸ್. ಕಿರಣ್ ಕುಮಾರ್ ಹೇಳಿದರು.
ರಾಜ್ಯ ವಿಜ್ಞಾನ ಪರಿಷತ್, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಪ್ರೋತ್ಸಾಹಕ ಸೊಸೈಟಿ, ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ ಹಾಗೂ ಮೈಸೂರು ವಿಶ್ವವಿದ್ಯಾಲಯ ಸಂಯುಕ್ತಾಶ್ರಯದಲ್ಲಿ ಮುಕ್ತ ವಿವಿಯ ಘಟಿಕೋತ್ಸವ ಭವನದಲ್ಲಿ ಮೂರು ದಿನಗಳ ಕಾಲ ಹಮ್ಮಿಕೊಂಡ 14ನೇ ಅಖಿಲ ಕರ್ನಾಟಕ ವಿಜ್ಞಾನ ಸಮ್ಮೇಳನ ವನ್ನು ಗುರುವಾರ ಉದ್ಘಾಟಿಸಿ ಮಾತನಾಡಿದರು.
ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ಹವಾಮಾನ ವೈಪರೀತ್ಯ ಈ ಹಿಂದೆ ಕಡಿಮೆ ಇತ್ತು. ಹಾಗಾಗಿ ಅಲ್ಪಾವಧಿ ಹಾಗೂ ದೀರ್ಘಾವಧಿಯ ನಿಖರ ವಾದ ಹವಾಮಾನ ವರದಿಯನ್ನು ನೀಡಲಾಗುತಿತ್ತು. ಆದರೆ, ಪ್ರಸಕ್ತ ವರ್ಷ ಪಾಶ್ಚಿಮಾತ್ಯ ರಾಷ್ಟ್ರಗಳಲ್ಲೂ ಹವಾಮಾನ ವೈಪರೀತ್ಯ ಕಂಡು ಬಂದಿದ್ದು, ಅಲ್ಲಿನ ವಿಜ್ಞಾನಿಗಳಿಗೂ ಹವಾಮಾನದ ಕುರಿತು ನಿಖರ ಮಾಹಿತಿ ನೀಡಲು ಸಾಧ್ಯವಾಗುತ್ತಿಲ್ಲ. ವಿಜ್ಞಾನ, ತಂತ್ರಜ್ಞಾನ ಕ್ಷೇತ್ರ ಸಾಕಷ್ಟು ಬೆಳವಣಿಗೆ ಹೊಂದಿದೆ. ಇದರಿಂದ ಮನುಷ್ಯರಿಗೆ ಸಾಕಷ್ಟು ಅನುಕೂಲವಾಗಿದೆ. ಆದರೆ, ಈ ಕ್ಷೇತ್ರದಿಂದ ಸಮಸ್ಯೆ, ಸವಾಲುಗಳು ಸಹ ಎದುರಾಗುತ್ತಿದೆ. ಅದಕ್ಕೆಲ್ಲ ನಾವು ಉತ್ತರವನ್ನು ಕಂಡುಕೊಳ್ಳಬೇಕು. ಅಲ್ಲದೆ ಈ ಕ್ಷೇತ್ರ ಉಂಟು ಮಾಡುತ್ತಿರುವ ಅನಾಹುತಕ್ಕೂ ಪರಿಹಾರ ಕಂಡುಕೊಳ್ಳಬೇಕು ಎಂದರು.
ವೇದಿಕೆಯಲ್ಲಿ ವಿಧಾನ ಪರಿಷತ್ ಸದಸ್ಯ ಡಾ.ಡಿ. ತಿಮ್ಮಯ್ಯ, ಮೈಸೂರು ವಿಶ್ವವಿದ್ಯಾಲಯ ಕುಲಪತಿ ಡಾ. ಜಿ. ಹೇಮಂತ ಕುಮಾರ್, ಕುವೆಂಪು ವಿಶ್ವ ವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ.ಪಿ. ವೆಂಕಟರಾಮಯ್ಯ, ಸಂಘದ ಅಧ್ಯಕ್ಷ ಗಿರೀಶ ಬಿ. ಕಡ್ಲೇವಾಡ, ಗೌರವ ಕಾರ್ಯದರ್ಶಿ ಸಿ. ಕೃಷ್ಣೇಗೌಡ, ಖಜಾಂಚಿ ಈ.ಬಸವರಾಜ್, ಸ್ಥಾಪಕ ಸದಸ್ಯೆ ಶ್ರೀಮತಿ ಹರಿಪ್ರಸಾದ್, ಜಿಲ್ಲಾಧ್ಯಕ್ಷ ಡಾ. ಆರ್. ಶೇಖರ್ ನಾಯಕ್, ಸಮ್ಮೇಳನದ ರಾಜ್ಯ ಸಂಯೋಜಕ ಎ.ಎನ್. ಮಹೇಶ್ ಹಾಗೂ ಇತರರು ಇದ್ದರು.