ಇತರರ ತಪ್ಪಿಗಿಂತ ನಮ್ಮ ಹೊಣೆಗಾರಿಕೆಯ ಅರಿವಿರಬೇಕು; ಡಾ.ವಿಜಯಲಕ್ಷ್ಮಿ ದೇಶಮಾನೆ ಅಭಿಮತ

deshmane
Published on

ಬೆಂಗಳೂರು: ಬೇರೆಯವರ ತಪ್ಪನ್ನು ಹುಡುಕುವುದಕ್ಕಿಂತ, ನಮ್ಮ ಹೊಣೆಗಾರಿಕೆಯನ್ನು ಅರಿತುಕೊಳ್ಳುವುದು ಮುಖ್ಯ ಎಂದು ಖ್ಯಾತ ಕ್ಯಾನ್ಸರ್ ಸರ್ಜನ್ ಪದ್ಮಶ್ರೀ ಡಾ.ವಿಜಯಲಕ್ಷ್ಮಿ ದೇಶಮಾನೆ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದ್ದಾರೆ.

ತಾತಗುಣಿಯಲ್ಲಿರುವ ಜ್ಯೋತಿ ಇನ್‌ಸ್ಟಿಟ್ಯೂಟ್ ಆಫ್ ಕಾಮರ್ಸ್ ಅಂಡ್ ಮ್ಯಾನೇಜ್ಮೆಂಟ್ ಕಾಲೇಜು, ಮತ್ತು ಜ್ಯೋತಿ ಸಂಜೆ ಕಾಲೇಜಿನಲ್ಲಿ ಗುರುವಾರ ಏರ್ಪಡಿಸಿದ್ದ 2025-26ನೇ ಶೈಕ್ಷಣಿಕ ಸಾಲಿನ ಉದ್ಘಾಟನೆ ಹಾಗೂ ಪದ್ಮಶ್ರೀ ಪ್ರಶಸ್ತಿಗೆ ಭಾಜನರಾಗಿದ್ದಕ್ಕೆ ನೀಡಿದ ಗೌರವ ಸನ್ಮಾನ ಸ್ವೀಕರಿಸಿ ಮಾತನಾಡಿದರು.

ವಿದ್ಯಾರ್ಥಿಗಳು ಯಾವ ಸಂಸ್ಥೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಾರೆ ಎಂಬುದು ಭವಿಷ್ಯದ ದೃಷ್ಟಿಯಿಂದ ಬಹಳ ಪ್ರಮುಖ. ಒಂದೇ ವರ್ಷದಲ್ಲಿ ಸಂಸ್ಥೆಯ ಆದರ್ಶ, ಶಿಸ್ತು, ಮತ್ತು ಮೌಲ್ಯಾಧಾರಿತ ಶಿಕ್ಷಣವನ್ನು ಹೇಗೆ ಕಲಿಸುತ್ತಾರೆ ಎಂಬುದು ತಿಳಿಯುತ್ತದೆ. ಆ ನಿಟ್ಟಿನಲ್ಲಿ ಜ್ಯೋತಿ ಶಿಕ್ಷಣ ಸಂಸ್ಥೆ ಉತ್ತಮ ರೀತಿಯಲ್ಲಿ ವಿದ್ಯಾರ್ಥಿಗಳ ಭವಿಷ್ಯವನ್ನು ರೂಪಿಸುತ್ತಿದೆ. ಉತ್ತಮ ಪರಿಸರದಲ್ಲಿ ಕಲಿಯುವ ಅವಕಾಶ ಎಲ್ಲರಿಗೂ ಸಿಗುವುದಿಲ್ಲ. ಅಂತಹ ಅವಕಾಶ ಸಿಕ್ಕಿರುವ ನೀವುಗಳು ಅದನ್ನು ಸದುಪಯೋಗಪಡಿಸಿಕೊಂಡು, ಭವಿಷ್ಯದ ಶ್ರೇಷ್ಟ ಭಾರತದ ನಿರ್ಮಾಣಕ್ಕೆ ಶ್ರಮಿಸಬೇಕು ಎಂದು ಕರೆ ನೀಡಿದರು.

ಸಮಯ ವ್ಯರ್ಥ ಮಾಡದೇ, ಪ್ರತಿ ಕ್ಷಣವನ್ನೂ ಸದುಪಯೋಗ ಪಡಿಸಿಕೊಂಡರೆ, ಯಶಸ್ಸನ್ನು ನಮ್ಮದಾಗಿಸಿಕೊಳ್ಳುವಲ್ಲಿ ಸಂದೇಹವೇ ಇಲ್ಲ. ಅದಲ್ಲದೇ ತಾನು ಯಾವ ಕೆಲಸವನ್ನು ಮಹತ್ತರವಾದ ಉದ್ದೇಶಕ್ಕಾಗಿ ಮಾಡುತ್ತಿಲ್ಲ ಕರ್ಮಣ್ಯೇವಾಧಿಕಾರಸ್ತೇ ಮಾಫಲೇಷು ಕದಾಚನ ಎಂಬ ವಾಕ್ಯದಂತೆ ನನ್ನೆಲ್ಲಾ ಕೆಲಸಗಳ ಫಲಾಪೇಕ್ಷೆಯನ್ನು ನಾನು ನಂಬುವ ಕೃಷ್ಣನಿಗೆ ಬಿಟ್ಟಿದ್ದೇನೆ ಎಂಬ ತಾತ್ವಿಕ ಸಂದೇಶವನ್ನೂ ತಿಳಿಸಿದ ಡಾ.ದೇಶಮಾನೆಯವರ ಪ್ರೇರಣಾದಾಯಕ ಭಾಷಣ ಮತ್ತು ಸರಳತೆ ಹಾಜರಿದ್ದ ವಿದ್ಯಾರ್ಥಿಗಳಿಗೆ ಮತ್ತು ಸಿಬ್ಬಂದಿಗೆ ಉತ್ಸಾಹ ಮೂಡಿಸಿತು.

ಕಾರ್ಯಕ್ರಮದಲ್ಲಿ ಸಂಸ್ಥೆಯ ಮುಖ್ಯಸ್ಥರಾದ ಬಿ.ವಿ. ಸೀತಾ, ಟ್ರಸ್ಟಿಗಳಾದ ಎಂ. ನರಸಿಂಹನ್,ಎನ್. ನಮಿತಾ, ಕಾರ್ಯನಿರ್ವಾಹಕ ನಿರ್ದೇಶಕ ಕೆ.ರಾಜೇಶ್, ಶೈಕ್ಷಣಿಕ ನಿರ್ದೇಶಕ ಪ್ರೊ. ಬಿ.ಎಸ್.ಲಕ್ಷ್ಮಣ್ ಪ್ರಸಾದ್, ಪ್ರಾಂಶುಪಾಲರಾದ ಡಾ. ಎಸ್.ಸತ್ಯೇಶ್ವರ್, ಸಂಜೆ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ವಲ್ಲಭ್ ಮಹಾಲೆ ಹಾಗೂ ಸಿಬ್ಬಂದಿಗಳು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net