ತಪ್ಪುಗಳನ್ನು ಸರಿಪಡಿಸಿಕೊಂಡಿದ್ದೇವೆ

niraani
Published on

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ: ವಿಧಾನಸಭೆ ಚುನಾವಣೆ ವೇಳೆ ಕೆಲವು ತಪ್ಪುಗಳು ಆಗಿದ್ದವು. ಫಲಿತಾಂಶದ ಬಳಿಕ ಆತ್ಮಾವಲೋಕನ ನಡೆಸಿ ತಪ್ಪುಗಳನ್ನು ಸರಿಪಡಿಸಿಕೊಂಡಿದ್ದೇವೆ. ಪಕ್ಷದ ಕೇಂದ್ರ ಮತ್ತು ನಾಯಕರು ಎಲ್ಲವನ್ನು ಸರಿ ಮಾಡಿದ್ದಾರೆ ಎಂದು ಬಿಜೆಪಿ ಮುಖಂಡ, ಮಾಜಿ ಸಚಿವ ಮುರುಗೇಶ ನಿರಾಣಿ ಹೇಳಿದರು.

ಹುಬ್ಬಳ್ಳಿಯಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ 25 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿತ್ತು. ಈ ಬಾರಿ ಜೆಡಿಎಸ್ ಜತೆ ಮೈತ್ರಿ ಸಾಧಿಸಿದ್ದು ಎಲ್ಲ 28 ಕ್ಷೇತ್ರಗಳಲ್ಲಿ ಬಿಜೆಪಿ ಗೆಲ್ಲಲಿದೆ ಎಂದರು.

ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರು ಲಿಂಗಾಯತ ನಾಯಕರನ್ನು ಹತ್ತಿಕ್ಕಿದ್ದಾರೆ ಎಂಬುದಕ್ಕೆ ಯಾವುದೇ ಆಧಾರವಿಲ್ಲ. ಕ್ಷೇತ್ರದಲ್ಲಿ ಲಿಂಗಾಯತ ಶಾಸಕರು ಹೆಚ್ಚಿಗೆ ಇದ್ದಾರೆ. ಶಿರಹಟ್ಟಿಯ ಶ್ರೀ ಫಕೀರ ದಿಂಗಾಲೇಶ್ವರ ಸ್ವಾಮೀಜಿ ಅವರು ಜೋಶಿ ಅವರಿಗೆ ಆಶೀರ್ವಾದ ಮಾಡುತ್ತಾರೆ ಎಂಬ ವಿಶ್ವಾಸವಿದೆ ಎಂದು ಹೇಳಿದರು.

ಪಂಚಮ ಸಾಲಿ ಸಮಾಜದ ನಾಯಕರಿಗೆ ಹಿಂದಿನಿಂದಲೂ ರಾಜಕೀಯವಾಗಿ ಉತ್ತಮ ಸ್ಥಾನಮಾನ ನೀಡದ ಕಾರಣ ಹರಿಹರದ ಶ್ರೀ ವಚನಾನಂದ ಸ್ವಾಮೀಜಿ ಅವರು ಮುನಿಸಿಗೊಂಡಿದ್ದಾರೆ. ಏ. 14ರಂದು ಸಮಾಜದ ಎಲ್ಲ ನಾಯಕರು ಹರಿಹರ ಪೀಠಕ್ಕೆ ಭೇಟಿ ನೀಡಿ ಚರ್ಚೆ ನಡೆಸಲಿದ್ದೇವೆ ಎಂದರು.

ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು ಶ್ರೀ ದಿಂಗಾಲೇಶ್ವರ ಸ್ವಾಮೀಜಿಯ ಬಗ್ಗೆ ಏನು ಮಾತನಾಡಿದ್ದಾರೆ ಎಂಬುದು ನನಗೆ ಗೊತ್ತಿಲ್ಲ. ಆದರೆ, ಯಾರೇ ಆದರೂ ಸ್ವಾಮೀಜಿಯ ಅವರ ಬಗ್ಗೆ ಹಗುರವಾಗಿ ಮಾತನಾಡುವುದು ಸರಿಯಲ್ಲ ಎಂದರು.

ಸುದ್ದಿಗೋಷ್ಠಿಯಲ್ಲಿ ಹು-ಧಾ ಮಹಾನಗರ ಜಿಲ್ಲಾ ಬಿಜೆಪಿ ಅಧ್ಯಕ್ಷ ತಿಪ್ಪಣ್ಣ ಮಜ್ಜಗಿ, ಪ್ರಧಾನ ಕಾರ್ಯದರ್ಶಿ ದತ್ತಮೂರ್ತಿ ಕುಲಕರ್ಣಿ, ವೀರಣ್ಣ ಸವಡಿ, ರಮೇಶ ಪಾಟೀಲ, ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net