ಸಮಾಜಕ್ಕೆ ತಾಂತ್ರಿಕ ನಿಪುಣರನ್ನು ನೀಡುತ್ತಿದ್ದೇವೆ

isro
Published on

ಹುಬ್ಬಳ್ಳಿ: ಕೆಎಲ್​ಇ ಸಂಸ್ಥೆಯು ಅನೇಕ ವರ್ಷಗಳಿಂದ ಗುಣಮಟ್ಟದ ತಾಂತ್ರಿಕ ಜನರನ್ನು ಸೃಷ್ಟಿಸುತ್ತಿದೆ. ಉನ್ನತ ಶಿಕ್ಷಣದ ಮೂಲಕ ಸಮಾಜಕ್ಕೆ ತಾಂತ್ರಿಕ ನಿಪುಣರನ್ನು ನೀಡುತ್ತಿರುವ ಬಗ್ಗೆ ನಮಗೆ ಹೆಮ್ಮೆ ಇದೆ ಎಂದು ಸಂಸ್ಥೆಯ ಕಾರ್ಯಾಧ್ಯಕ್ಷ ಡಾ. ಪ್ರಭಾಕರ ಕೋರೆ ಹೇಳಿದರು.

ಇಲ್ಲಿಯ ಕೆಎಲ್​ಇ ತಾಂತ್ರಿಕ ವಿಶ್ವವಿದ್ಯಾಲಯದ ಬಯೋಟೆಕ್ ಆಡಿಟೋರಿಯಂನಲ್ಲಿ ಶನಿವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ)ಯಲ್ಲಿ ಹಾಗೂ ಅದರ ಕಾರ್ಯ ಚಟುವಟಿಕೆಯ ಭಾಗವಾಗಿರುವ ಕಂಪನಿಗಳಲ್ಲಿ ಇಂಜಿನಿಯರ್ ಹಾಗೂ ವಿಜ್ಞಾನಿಗಳಾಗಿ ಕಾರ್ಯನಿರ್ವಹಿಸುತ್ತಿರುವ ಬಿವಿಬಿ ಇಂಜಿನಿಯರಿಂಗ್ ಕಾಲೇಜ್ (ಇಂದಿನ ಕೆಎಲ್​ಇ ತಾಂತ್ರಿಕ ವಿವಿ)ನ ಹಳೇ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಮಾತನಾಡಿದ ಅವರು, ನಮ್ಮಲ್ಲಿ ಕಲಿತವರು ಇಸ್ರೊದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವುದು ನಮಗೆ ಅಭಿಮಾನದ ಸಂಗತಿ ಎಂದರು.

ಇಂಜಿನಿಯರಿಂಗ್ ಶಿಕ್ಷಣವು ಬೆಂಗಳೂರು, ಮೈಸೂರಿಗೆ ಸೀಮಿತವಾಗಿದ್ದ ಕಾಲದಲ್ಲಿ ಕೆಎಲ್​ಇ ಸಂಸ್ಥೆಯು ಈ ಭಾಗದಲ್ಲಿ ಇಂಜಿನಿಯರಿಂಗ್ ಕಾಲೇಜ್​ಗಳನ್ನು ತೆರೆದು ಸಾಕಷ್ಟು ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿದೆ. ನಾವು ಲಿಂಗಾಯತರಿಗೆ ಮಾತ್ರ ಶಿಕ್ಷಣ ಕೊಟ್ಟಿಲ್ಲ. ಜಾತ್ಯಾತೀತವಾಗಿ ಎಲ್ಲರಿಗೂ ಶಿಕ್ಷಣ ಕೊಟ್ಟಿದ್ದೇವೆ. ಕೆಎಲ್​ಇ ಸಂಸ್ಥೆಯ ನಿರ್ವತೃರಾದ ಸಪ್ತಋಷಿಗಳು ಶಿಕ್ಷಣದಿಂದ ಮಾತ್ರ ಸಮಾಜ ಉದ್ಧಾರವಾಗಲು ಸಾಧ್ಯವೆಂದು ನಂಬಿ, 1915ರಲ್ಲಿ ಬೆಳಗಾವಿಯಲ್ಲಿ ಶಾಲೆಯೊಂದನ್ನು ತೆರೆದಿದ್ದರು. ಇಂದು 300ಕ್ಕೂ ಹೆಚ್ಚು ಶಿಕ್ಷಣ ಸಂಸ್ಥೆಗಳನ್ನು ನಡೆಸುತ್ತಿದ್ದೇವೆ ಎಂದರು.

ಇಸ್ರೊ ಹಾಗೂ ಅದರ ಕಾರ್ಯ ಚಟುವಟಿಕೆಯ ಭಾಗವಾಗಿರುವ ಕಂಪನಿಗಳಲ್ಲಿ ಇಂಜಿನಿಯರ್ ಹಾಗೂ ವಿಜ್ಞಾನಿಗಳಾಗಿ ಕಾರ್ಯನಿರ್ವಹಿಸುತ್ತಿರುವ ಬಿವಿಬಿ ಇಂಜಿನಿಯರಿಂಗ್ ಕಾಲೇಜ್​ನ ಹಳೇ ವಿದ್ಯಾರ್ಥಿಗಳಾದ ರಂಗನಾಥ ಎಕ್ಕುಂಡಿ, ದಿಲೀಪ ಶಿರೋಳಿಕರ್, ಕೆ.ಎಚ್. ನವಲಗುಂದ, ಶ್ರೇಯಲಾ ರತ್ನಾಕರ, ಹನುವಂತರಾಯ ಬೆಲೂರಗಿ, ಸಂಧ್ಯಾ ಕಾಮತ, ಅಬ್ದುಲ್ ರೆಹಮಾನ ಖಾನ್, ಪ್ರಮೋದಾ ಹೆಗಡೆ, ಮಿಲಿಂದ ಉಂಡಾಲೆ, ಶಾಂತಲಾ ಎಸ್. ಎಚ್., ಪ್ರಶಾಂತ ಎ.ಆರ್., ಮಲ್ಲಿಕಾರ್ಜುನ ಖಾನಾಪುರಿ, ಅಭಿಷೇಕ ದೇಶಪಾಂಡೆ, ರಾಮ ಕೆರೂರ, ಡಿ.ಆರ್. ಸುಬ್ರಹ್ಮಣ್ಯ, ಅನಿಲಕುಮಾರ ಎಂ. ಹಾಗೂ ಮೊಹಮ್ಮದ್ ರಫೀಕ್ ಅವರನ್ನು ಸನ್ಮಾನಿಸಲಾಯಿತು.

ಕೆಎಲ್​ಇ ಸಂಸ್ಥೆಯ ಹಿರಿಯ ನಿರ್ದೇಶಕ ಶಂಕರಣ್ಣ ಮುನವಳ್ಳಿ, ಕೆಎಲ್​ಇ ತಾಂತ್ರಿಕ ವಿವಿ ಕಾರ್ಯನಿರ್ವಾಹಕ ಡೀನ್ ಪೊ›. ಬಿ.ಎಲ್. ದೇಸಾಯಿ ಇದ್ದರು. ವಿವಿ ಕುಲಪತಿ ಡಾ. ಅಶೋಕ ಶೆಟ್ಟರ್ ಸ್ವಾಗತಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net