ಪ್ರತಿ ಗ್ರಾಮಗಳಲ್ಲಿ ಉಚಿತ ಯೋಗ ಕೇಂದ್ರ

baba ramdev
Published on

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ:

ಕರ್ನಾಟಕದಲ್ಲಿ 1,200ಕ್ಕೂ ಹೆಚ್ಚು ಉಚಿತ ಯೋಗ ಕೇಂದ್ರಗಳನ್ನು ನಡೆಸಲಾಗುತ್ತಿದೆ. ರಾಜ್ಯದ ಪ್ರತಿ ವಾರ್ಡ್, ಗ್ರಾಮಗಳಲ್ಲಿ ಉಚಿತ ಯೋಗ ಕೇಂದ್ರ ಸ್ಥಾಪಿಸಲು ಸಂಕಲ್ಪ ಮಾಡಿದ್ದೇವೆ ಎಂದು ಪತಂಜಲಿ ಯೋಗ ಪೀಠ (ಹರಿದ್ವಾರ)ದ ಸಂಸ್ಥಾಪಕ, ಯೋಗ ಗುರು ಬಾಬಾ ರಾಮದೇವ ಹೇಳಿದರು.

ಇಲ್ಲಿಯ ಉದ್ಯಮಿ ರಮೇಶ ಬಾಫಣಾ ನಿವಾಸಕ್ಕೆ ಗುರುವಾರ ಖಾಸಗಿ ಭೇಟಿ ನೀಡಿದ ಸಂದರ್ಭದಲ್ಲಿ ಮಾತನಾಡಿರುವ ಅವರು, ಸಂಪೂರ್ಣ ಕರ್ನಾಟಕವನ್ನು ರೋಗಮುಕ್ತವಾಗಿಸುವ ಯೋಗಮಯ ಕರ್ನಾಟಕ ಅಭಿಯಾನಕ್ಕೆ ಎಲ್ಲರೂ ಸಹಕರಿಸಬೇಕು ಎಂದು ಮನವಿ ಮಾಡಿದರು.

ಬಾಫಣಾ ಪಾರಿವಾರದವರು ಹುಬ್ಬಳ್ಳಿ-ಧಾರವಾಡ ಮತ್ತು ಉತ್ತರ ಕರ್ನಾಟಕದ ಜನರಿಗೆ ಉತ್ತಮ ಆರೋಗ್ಯ ಒದಗಿಸುವ ಸಂಕಲ್ಪದೊಂದಿಗೆ ಪತಂಜಲಿ ವೆಲ್​ನೆಸ್ ಸೆಂಟರ್ ಪ್ರಾರಂಭಿಸಿದ್ದಾರೆ. ಹರಿದ್ವಾರದಲ್ಲಿ ಲಭ್ಯವಿರುವ ಎಲ್ಲ ವೈದ್ಯಕೀಯ ಸೌಲಭ್ಯಗಳು ಇಲ್ಲಿ ಲಭ್ಯವಿದೆ. ಮುಂಬರುವ ದಿನಗಳಲ್ಲಿ ಪತಂಜಲಿ ವೆಲ್​ನೆಸ್ ಸೆಂಟರ್​ಅನ್ನು ಕರ್ನಾಟಕದ ಪ್ರತಿ ಜಿಲ್ಲೆಗಳಲ್ಲಿ ಪ್ರಾರಂಭಿಸಲು ನಿರ್ಧರಿಸಿದ್ದೇವೆ ಮತ್ತು 5 ಸಾವಿರಕ್ಕಿಂತ ಹೆಚ್ಚಿನ ಜನಸಂಖ್ಯೆ ಇರುವ ಹಳ್ಳಿಗಳಲ್ಲಿ ಪತಂಜಲಿ ಸ್ಟೋರ್​ಗಳನ್ನು ತೆರೆಯಲಾಗುವುದು ಎಂದರು.

ಪತಂಜಲಿ ಯೋಗ ಪೀಠದ ಸಹ ಸಂಸ್ಥಾಪಕ ಆಚಾರ್ಯ ಬಾಲಕೃಷ್ಣ, ಉಕಚಂದ್ ಬಾಫಣಾ, ಗೌತಮ ಬಾಫಣಾ, ಮುಖೇಶ ಬಾಫಣಾ, ಹಿತೇಶ ಬಾಫಣಾ, ರಿಷಬ್ ಬಾಫಣಾ, ಯುವರಾಜ್ ಬಾಫಣಾ, ನಿಖಿಲ್ ಮೆಹ್ತಾ, ಸುರೇಶ ಮೆಹ್ತಾ, ಕಮಲಾ ದೇವಿ, ಸುರೇಖಾ ಸುಶೀಲಾ, ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net