

ಮೈಸೂರು; ಕಡಿಮೆ ಭೂಮಿಯಲ್ಲಿ ಕಡಿಮೆ ನೀರು ಬಳಸಿಕೊಂಡು ಹೆಚ್ಚು ಆಹಾರ ಉತ್ಪಾದನೆ ಮಾಡುವ ಸ್ಮಾರ್ಟ್ ಕೃಷಿಯತ್ತ ಇಡೀ ದೇಶ ಮುಖ ಮಾಡಬೇಕಿದೆ ಎಂದು ಗುರುಗ್ರಾಮನಲ್ಲಿರುವ ಎನ್‌ಎಬಿಎಲ್ ಅಧ್ಯಕ್ಷ, ಕನ್ನಡಿಗ ಪ್ರೊ.ಎಸ್.ಅಯ್ಯಪ್ಪನ್ ಹೇಳಿದರು.
ಭಾರತೀಯ ಆಹಾರ ವಿಜ್ಞಾನಿಗಳ ಮತ್ತು ತಂತ್ರಜ್ಞರ ಸಂಘದ (ಎಎಫ್‌ಎಸ್‌ಟಿಐ) ಸಹಯೋಗದಲ್ಲಿ ನಗರದ ಕೇಂದ್ರೀಯ ಆಹಾರ ತಾಂತ್ರಿಕ ಸಂಶೋಧನಾ ಸಂಸ್ಥೆಯಲ್ಲಿ(ಸಿಎಫ್‌ಟಿಆರ್‌ಐ) ಆಯೋಜಿಸಿದ್ದ 9ನೇ ಅಂತಾರಾಷ್ಟ್ರೀಯ ಆಹಾರ ಸಮ್ಮೇಳನದ ಸಮಾರೋಪ ಕಾರ್ಯಕ್ರಮದಲ್ಲಿ ‘ಹವಾಮಾನ ಬದಲಾವಣೆ ಮತ್ತು ಸುಸ್ಥಿರ ಆಹಾರ ಉತ್ಪಾದನೆ’ ಕುರಿತು ಸಮಾರೋಪ ಭಾಷಣ ಮಾಡಿದರು.
ಸಣ್ಣ ಹಿಡುವಳಿದಾರು ಸ್ಮಾರ್ಟ್ ಕೃಷಿಗೆ ಆದ್ಯತೆ ನೀಡಬೇಕು. ದೇಶದ ರೈತರಲ್ಲಿ 5 ಎಕರೆಗಿಂತ ಕಡಿಮೆ ಜಮೀನು ಹೊಂದಿರುವ ಸಣ್ಣ ಹಿಡುವಳಿದಾರರ ಪ್ರಮಾಣವೇ ಶೇ.85ರಷ್ಟು. ಮುಂಬರುವ ದಿನಗಳಲ್ಲಿ ಇದು ಶೇ.90ಕ್ಕೆ ಏರಿಕೆಯಾಗಲಿದೆ. ಆದ್ದರಿಂದ ಸಣ್ಣ ರೈತರು ಕಡಿಮೆ ಭೂಮಿಯಲ್ಲಿ, ಕಡಿಮೆ ನೀರು ಬಳಕೆ ಮಾಡಿಕೊಂಡು ಹೆಚ್ಚಿನ ಪ್ರಮಾಣದಲ್ಲಿ ಆಹಾರ ಉತ್ಪಾದಿಸಬೇಕು. ಇದುವೇ ಭವಿಷ್ಯದ ಸವಾಲು ಎಂದರು.
ಕಳೆದ 150 ವರ್ಷಗಳಲ್ಲಿ ಆಗಿರುವಷ್ಟು ಹವಾಮಾನ ಬದಲಾವಣೆ ಕೇವಲ 15 ವರ್ಷದಲ್ಲಿ ಆಗಿದೆ. ಹವಾಮಾನ ವೈಪರೀತ್ಯ ತ್ವರಿತಗತಿಯಲ್ಲಿ ಪರಿವರ್ತನೆಯಾಗುತ್ತಿರುವುದು ಕಳವಳಕಾರಿ. ಇದನ್ನು ಗಮನದಲ್ಲಿ ಇಟ್ಟುಕೊಂಡು ಕೃಷಿ ಸಂಶೋಧನೆ, ವಿಜ್ಞಾನ-ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಬೇಕಿದೆ ಎಂದು ಸಲಹೆ ನೀಡಿದರು.
ಹವಾಮಾನ ಬದಲಾವಣೆಯ ನೇರ ಪರಿಣಾಮ ಕೃಷಿ ಮೇಲಾಗುತ್ತಿದೆ. ಲಭ್ಯ ಇರುವ ನೀರಿನ ಬಳಕೆ ಮೇಲೆ ಒತ್ತಡ ಹೆಚ್ಚಾಗಿದೆ. ನೀರಾವರಿಗೆ ಹೆಚ್ಚಿನ ಪ್ರಮಾಣದಲ್ಲಿ ನೀರು ವಿನಿಯೋಗವಾಗುತ್ತಿದೆ. 2050ರ ಹೊತ್ತಿಗೆ ವಿವಿಧ ಕ್ಷೇತ್ರಗಳು, ಕೈಗಾರಿಕೆಗಳಿಗೆ ದೊಡ್ಡ ಪ್ರಮಾಣದಲ್ಲಿ ನೀರು ಪೂರೈಕೆ ಮಾಡುವ ಸವಾಲು ಎದುರಾಗಲಿದೆ. ಇದರಿಂದ ನೀರಿನ ಕೊರತೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ಆದ್ದರಿಂದ ಕೃಷಿಯಲ್ಲೂ ನೀರಿನ ನಿರ್ವಹಣೆ ಪದ್ಧತಿ ಅಳವಡಿಕೆ ಮಾಡಿಕೊಳ್ಳುವುದು ತುರ್ತು ಅಗತ್ಯವಾಗಿದೆ ಎಂದರು.
ಪರಿಣಾಮಕಾರಿ ನೀರಿನ ನಿರ್ವಹಣೆಗಾಗಿ 4-5 ಎಕರೆಯಷ್ಟು ಕಡಿಮೆ ಜಮೀನಿನಲ್ಲೇ ಸಮಗ್ರ ಕೃಷಿ ಮತ್ತು ಮಿಶ್ರ ಕೃಷಿ ಪದ್ಧತಿಯನ್ನು ಅಳವಡಿಸಿಕೊಳ್ಳಬೇಕು. ಇದರಿಂದ ಕೃಷಿ, ಅದನ್ನು ಅವಲಂಬಿಸಿರುವ ರೈತರಿಗೂ ಲಾಭವಾಗಲಿದೆ ಎಂದರು.
ಕೃಷಿಯಲ್ಲಿ ಈಗಾಗಲೇ ಹಸಿರು ಕ್ರಾಂತಿ ಮಾಡಲಾಗಿದೆ. ಆದರೆ, ಇದು ಇಷ್ಟಕ್ಕೆ ಸಾಲದು ಮತ್ತು ಇಷ್ಟಕ್ಕೆ ನಿಲ್ಲಬಾರದು. ಮತ್ತೊಂದು ಹಸಿರು ಕ್ರಾಂತಿಗೆ ಭಾರತ ಸಜ್ಜಾಗಬೇಕು. ಅದು ನಿರಂತರ ಪ್ರಕ್ರಿಯೆಯಂತೆ ಮುಂದುವರಿದುಕೊಂಡು ಹೋಗಬೇಕಿದೆ. ಆಗ ಮಾತ್ರ ಕೃಷಿಯಲ್ಲಿ ಸುಸ್ಥಿರ ಪ್ರಗತಿ ಕಾಣಲು ಸಾಧ್ಯ. ಅದಕ್ಕಾಗಿ ಕೃಷಿ ವಿಜ್ಞಾನಿಗಳು, ತಜ್ಞರು, ಆಡಳಿತ ವ್ಯವಸ್ಥೆ ಅಣಿಯಾಗಬೇಕು ಎಂದು ಕರೆಕೊಟ್ಟರು.
ಕೃಷಿ ಕುರಿತು ಸಮಾಜದ ಅನಾದರ ಸರಿಯಲ್ಲ. ರೈತರಿಗೆ ಘನತೆ ಮತ್ತು ಗೌರವ ತಂದುಕೊಡಬೇಕಿದೆ. ಆಗ ಮಾತ್ರ ಯುವಜನರನ್ನು ಈ ಕ್ಷೇತ್ರದತ್ತ ಆಕರ್ಷಿಸಲು ಮತ್ತು ಹೊಸ ಬದಲಾವಣೆ ತರಲು ಸಾಧ್ಯ. ಆದ್ದರಿಂದ ರೈತರನ್ನೂ ಆಹಾರ ಉತ್ಪಾದನೆ, ಸಂಸ್ಕರಣೆ ಸೇರಿದಂತೆ ಕೃಷಿ ಸಂಬಂಧಿತ ಕೈಗಾರಿಕೆಗಳು, ವಾಣಿಜ್ಯ ಚಟುವಟಿಕೆಗಳಲ್ಲಿ ಪಾಲುದಾರರಾಗಿ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
ದೇಶದಲ್ಲಿ ವಾರ್ಷಿಕ ಶೇ.70ರಷ್ಟು ನವೋದ್ಯಮ ಸ್ಥಾಪನೆಯಾಗಿದೆ. ಈ ಪೈಕಿ ಕೃಷಿ ನವೋದ್ಯಮ ಪಾಲು ಕೇವಲ ಶೇ.10ರಷ್ಟು. ಬೇರೆ ಕ್ಷೇತ್ರಗಳ ವಿವಿಧ ಕೈಗಾರಿಕಾ ಕಂಪನಿಗಳು ಕೃಷಿಯತ್ತ ಬರಬೇಕು. ತಮ್ಮಲ್ಲಿರುವ ವಿನೂತನ ತಂತ್ರಜ್ಞಾನವನ್ನು ಕೃಷಿರಂಗದಲ್ಲೂ ಬಳಕೆ ಮಾಡಿ ಲಾಭದಾಯಕ ಮಾಡಬೇಕಿದೆ ಎಂದರು.
ಶಾಲಾ ಹಂತದಲ್ಲೇ ಮಕ್ಕಳಿಗೆ ಕೃಷಿಯನ್ನು ಪರಿಚಯಿಸಬೇಕು. ಅದಕ್ಕಾಗಿ ವಿದ್ಯಾಲಯದ ಆವರಣದಲ್ಲಿ ಕೈತೋಟ, ನರ್ಸರಿ, ಕೃಷಿ ಚಟುವಟಿಕೆಯನ್ನು ಹುಟ್ಟುಹಾಕಬೇಕು ಎಂದರು.
ಚಂದ್ರಯಾನ-3 ಯೋಜನೆ ಯಶಸ್ವಿಯಾಗಿದ್ದು ಆಹಾರ ಭದ್ರತೆಯಿಂದ. ಆಹಾರ ಕೊರತೆಯಿಂದ ಬಳಲುತ್ತಿದ್ದ ಭಾರತದಲ್ಲಿ ಆಹಾರ ಉತ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸಿ ಆಹಾರ ಭದ್ರತೆ ಕಲ್ಪಿಸಿಕೊಡಲಾಗಿದೆ. ಇದು ಸಣ್ಣ ಸಾಧನೆಯಲ್ಲ. ಬೇರೆ ದೇಶಗಳೂ ಈಗಲೂ ಆಹಾರ ಕೊರತೆಯಿಂದ ಬಸವಳಿದಿವೆ. ಭಾರತ ಈ ವಿಷಯದಲ್ಲಿ ಗುರಿ ಸಾಧಿಸಿದ್ದರಿಂದ ಬೇರೆ ಕ್ಷೇತ್ರಗಳ ಪ್ರಗತಿಗೆ ಗಮನ ಕೊಡಲಾಯಿತು. ಇದಕ್ಕೆ ಆಹಾರ ವಿಜ್ಞಾನಿಗಳು, ತಂತ್ರಜ್ಞಾನಿಗಳು ಕಾರಣ ಎಂದು ಬಣ್ಣಿಸಿದರು.
ಸಿಎಫ್‌ಟಿಆರ್‌ಐ ನಿರ್ದೇಶಕಿ ಶ್ರೀದೇವಿ ಅನ್ನಪೂರ್ಣ ಸಿಂಗ್, ತಂಜಾವೂರಿನ ಎನ್‌ಐಎಫ್‌ಟಿಇಎಂ ನಿರ್ದೇಶಕ ಪ್ರೊ.ವಿ.ಪಳನಿಮುತ್ತು, ತೆಲಂಗಾಣದ ‘ವೇಗವರ್ಧಿತ ಬೆಳೆ ಸುಧಾರಣೆ’ ಜಾಗತಿಕ ಸಂಶೋಧನಾ ಕಾರ್ಯಕ್ರಮದ ನಿರ್ದೇಶಕ ಡಾ.ಸೀನ್ ಮಯೇಸ್, ಎಎಫ್‌ಎಸ್‌ಟಿಐ ಅಧ್ಯಕ್ಷ ಡಾ.ಎನ್.ಭಾಸ್ಕರ್, ಸಮ್ಮೇಳನ ಸಂಯೋಜಕ ಡಾ.ಸುರೇಶ್ ಡಿ.ಸಖರೆ ಇನ್ನಿತರರಿದ್ದರು.