ರಾಷ್ಟ್ರಪ್ರೇಮದ ಬಗ್ಗೆ ರಾಜಿ ಇಲ್ಲದ ಮನಸ್ಥಿತಿ ಬೆಳೆಸಿಕೊಳ್ಳಬೇಕು : ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ

HDK
Published on

ಮೈಸೂರು: ಬಂಕಿಮ ಚಂದ್ರ ಚಟರ್ಜಿ ರಚಿಸಿದ ‘ವಂದೇ ಮಾತರಂ’ ಗೀತೆಗೆ 150 ವರ್ಷ ತುಂಬಿದ ಶುಭ ಸಂದರ್ಭದಲ್ಲಿ ನಾವೆಲ್ಲರೂ ರಾಷ್ಟ್ರಪ್ರೇಮದ ಬಗ್ಗೆ ರಾಜಿ ಇಲ್ಲದ ಮನಸ್ಥಿತಿಯನ್ನು ಬೆಳೆಸಿಕೊಳ್ಳಬೇಕು ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಕರೆ ನೀಡಿದರು.

‘ವಂದೇ ಮಾತರಂ’ ಗೀತೆಗೆ 150 ವರ್ಷ ತುಂಬಿದ ಸಂದರ್ಭದಲ್ಲಿ ನವದೆಹಲಿಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಶುಕ್ರವಾರ ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡಿದರು. ಇದೇ ಸಂದರ್ಭ ಕೇಂದ್ರ ಸಚಿವರಾದ ಕುಮಾರಸ್ವಾಮಿ ನಗರದ ಬೆಮೆಲ್ನಲ್ಲಿ ಆಯೊಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದರು.

ನರೇಂದ್ರ ಮೋದಿ ಅವರ ನೇರಪ್ರಸಾರದ ಕಾರ್ಯಕ್ರಮದಲ್ಲಿ ನಾನು ಸಂತೋಷದಿಂದ ಭಾಗಿಯಾದೆ. ಒಂದೂವರೆ ಶತಮಾನ ಕಳೆದರೂ ಎಲ್ಲ ಭಾರತೀಯರ ಹೃನ್ಮನಗಳಲ್ಲಿ ಈ ಗೀತೆ ಅಜರಾಮರವಾಗಿದೆ. ಸ್ವಾತಂತ್ರೃ ಹೋರಾಟದಲ್ಲಿ ಈ ಗೀತೆ ಪ್ರಮುಖ ಪಾತ್ರ ವಹಿಸಿದೆ ಎಂದರು.

ಛಿದ್ರವಾಗಿದ್ದ ಭಾರತವನ್ನು ಒಗ್ಗೂಡಿಸಿದ ವಂದೇ ಮಾತರಂ ಗೀತೆಯೂ 150 ವರ್ಷ ಕಳೆದರೂ ಜನರ ಅಚ್ಚುಮೆಚ್ಚಿನ ಗೀತೆಯಾಗಿದೆ. ಆ ಗೀತೆಯನ್ನು ಕೇಳುತ್ತಿದ್ದರೆ ಮೈ ರೋಮಾಂಚನ ಆಗುತ್ತದೆ. ದೇಶಾದ್ಯಂತ ವರ್ಷಪೂರ್ತಿ ವಂದೇ ಮಾತರಂ ಸ್ಮರಣಾರ್ಥ ಕಾರ್ಯಕ್ರಮ ಆಯೋಜಿಸಲಾಗುವುದು. ಯುವ ಜನರು ಈ ಮಹಾನ್ ಗೀತೆಯಲ್ಲಿರುವ ಆದರ್ಶ ಅಂಶಗಳನ್ನು ಮನನ ಮಾಡಿಕೊಂಡು ರಾಷ್ಟ್ರಪ್ರೇಮ ಬೆಳೆಸಿಕೊಳ್ಳಬೇಕು ಎಂದು ಕರೆ ನೀಡಿದರು.

ಈ ಸಂದರ್ಭ ಶಾಸಕ ಜಿ.ಡಿ ಹರೀಶ್ ಗೌಡ ಹಾಗೂ ಸಂಸ್ಥೆಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net