

ಹುಬ್ಬಳ್ಳಿ: ಸ್ಥಿರಾಸ್ತಿಗಳ ಮಾರುಕಟ್ಟೆ ಮೌಲ್ಯಕ್ಕೆ ಹತ್ತಿರ ಇರುವಂತೆ ಪರಿಷ್ಕೃತ ಮಾರ್ಗಸೂಚಿ ದರ ನಿರ್ಧಾರ ಮಾಡಿದ್ದೇವೆ. ಮಾರುಕಟ್ಟೆ ಮೌಲ್ಯಕ್ಕಿಂತ ಹೆಚ್ಚಾಗಿರುವ ಮಾರ್ಗಸೂಚಿ ದರವನ್ನು ಕಡಿಮೆ ಮಾಡಲು ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು.
ಹುಬ್ಬಳ್ಳಿ ನಗರ ತಹಸೀಲ್ದಾರ ಕಚೇರಿಗೆ ಗುರುವಾರ ಭೇಟಿ ನೀಡಿದ ಸಂದರ್ಭದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸ್ಟಾಂಪ್ ಡ್ಯೂಟಿ ಆಕ್ಟ್ ಪ್ರಕಾರ ಪ್ರತಿ ವರ್ಷ ಮಾರ್ಗಸೂಚಿ ದರ ಏರಿಕೆ ಮಾಡಬೇಕೆಂದಿದೆ. ಕಳೆದ ಐದು ವರ್ಷಗಳಿಂದ ಮಾರ್ಗಸೂಚಿ ದರ ಪರಿಷ್ಕರಣೆ ಮಾಡಿರಲಿಲ್ಲ. ಬಹಳಷ್ಟು ಕಡೆ ಮಾರುಕಟ್ಟೆ ಮೌಲ್ಯ ಹಾಗೂ ಮಾರ್ಗಸೂಚಿ ದರದಲ್ಲಿ ಅಜಗಜಾಂತರ ವ್ಯತ್ಯಾಸವಿದೆ. ಆದರೆ, ಸ್ಥಿರಾಸ್ತಿಗಳ ಮಾರುಕಟ್ಟೆ ಮೌಲ್ಯಕ್ಕೆ ಸರಿಸಮಾನವಾಗಿ ಮಾರ್ಗಸೂಚಿ ದರ ಏರಿಕೆ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಕಂದಾಯ ಇಲಾಖೆಯ ಆಡಳಿತದಲ್ಲಿ ಸುಧಾರಣೆಯಾಗದೇ ರಾಜ್ಯಾಡಳಿತದಲ್ಲಿ ಬದಲಾವಣೆ ತರಲು ಸಾಧ್ಯವಿಲ್ಲ. ಜನಪರವಾಗಿ ಕೆಲಸ ಮಾಡುವ ಅಧಿಕಾರಿಗಳನ್ನು ಗುರುತಿಸಿ ಸವೋತ್ತಮ ಅಧಿಕಾರಿ ಪ್ರಶಸ್ತಿ ನೀಡುವ ಬಗ್ಗೆ ಚಿಂತಿಸಲಾಗಿದೆ. ಈ ಬಗ್ಗೆ ಮಾರ್ಗಸೂಚಿಗಳನ್ನು ಸಿದ್ಧಪಡಿಸಬೇಕಿದೆ. ಅದೇ ರೀತಿ ತಪ್ಪು ಮಾಡುವ ಅಧಿಕಾರಿಗಳ ಮೇಲೆ ಶಿಸ್ತು ಕ್ರಮ ಜರುಗಿಸಲಾಗುವುದು. ಹಿಂದಿನ ಸರ್ಕಾರದ ಅವಧಿಯಲ್ಲಿ ಬಾಕಿ ಉಳಿದಿದ್ದ 180 ಅಧಿಕಾರಿಗಳ ಮೇಲಿನ ಶಿಸ್ತು ಕ್ರಮದ ಕಡತಗಳನ್ನು ನಾವು ಅಧಿಕಾರಕ್ಕೆ ಬಂದ ಮೇಲೆ ವಿಲೇ ಮಾಡಿದ್ದೇವೆ ಎಂದರು.