

ಮೈಸೂರು: ಪರಿಶಿಷ್ಟರಿಗೆ ಮೀಸಲಾತಿ ಹೆಚ್ಚಿಸುವ ಮೂಲಕ ನುಡಿದಂತೆ ನಡೆದುಕೊಂಡಿದ್ದೇವೆ ಸಾರಿಗೆ ಸಚಿವ ಬಿ.ಶ್ರೀರಾಮುಲು ಹೇಳಿದರು.
ಪರಿಶಿಷ್ಟ ಪಂಗಡದ ಸಮಾವೇಶ ಸಂಬಂಧ ನಗರ ಬಿಜೆಪಿ ಕಚೇರಿಯಲ್ಲಿ ಗುರುವಾರ ಆಯೋಜಿಸಿದ್ದ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ನ.20 ರಂದು ಬಳ್ಳಾರಿಯಲ್ಲಿ ಆಯೋಜಿಸಿರುವ ಪರಿಶಿಷ್ಟ ಪಂಗಡದ ಸಮಾವೇಶ, ರಾಜ್ಯ, ರಾಷ್ಟ್ರಕ್ಕೆ ಹೊಸ ಸಂದೇಶ ನೀಡಬೇಕು. ಜತೆಗೆ ನಮ್ಮ ಸಮುದಾಯದ ಶಕ್ತಿ ಪ್ರದರ್ಶನ ಆಗಬೇಕು ಕರೆ ನೀಡಿದರು.
ನಮ್ಮ ಸಮುದಾಯಕ್ಕೆ ಮೀಸಲಾತಿ ಹೆಚ್ಚಿಸುವ ವಿಚಾರದಲ್ಲಿ ಎಲ್ಲ ಪಕ್ಷಗಳು ಮೋಸ ಮಾಡಿದವು. ಆದರೆ, ಬಿಜೆಪಿ ನ್ಯಾಯ ನೀಡಿದೆ. ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಾಗಲೆಲ್ಲಾ ಅನುಕೂಲ ಮಾಡಿಕೊಟ್ಟಿದೆ. ತಳವಾರ ಮತ್ತು ಪರಿವಾರ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಲಾಯಿತು. ಸಮಾಜ ಕಲ್ಯಾಣ ಇಲಾಖೆಯಲ್ಲಿ ಇದ್ದ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯನ್ನು ಬೇರ್ಪಡಿಸಿ ಪ್ರತ್ಯೇಕ ಸಚಿವಾಲಯ ಮಾಡಲಾಯಿತು ಎಂದರು.
ಮುಂದಿನ ದಿನಗಳಲ್ಲಿ ಬಿಜೆಪಿ ಸರ್ಕಾರ ಈ ಸಮಾಜವನ್ನು ಗುರುತಿಸಬೇಕಾದರೆ ನಾವು ಕೂಡ ಪಕ್ಷದ ಪರ ನಿಲ್ಲಬೇಕು. ಪ್ರಧಾನಿ ನರೇಂದ್ರ ಮೋದಿ, ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಅಭಿನಂದನೆ ಸಲ್ಲಿಸಬೇಕಾಗಿದೆ. ಈ ಸಂಬಂಧ ಸಮಾವೇಶ ಆಯೋಜಿಸಲಾಗಿದೆ. ಸದರಿ ಸಮಾವೇಶದಲ್ಲಿ ಪಕ್ಷ ಭೇದ ಮರೆತು ಸಮುದಾಯದ ಎಲ್ಲರೂ ಭಾಗವಹಿಸಬೇಕು. ನಾವು ಎಷ್ಟು ಒಗ್ಗಟ್ಟು ಇದ್ದೇವೆ ಎಂದು ತೋರಿಸಬೇಕು ಎಂದರು.
ಮೈಸೂರು ಜಿಲ್ಲೆಯಿಂದ 50 ಸಾವಿರ ಜನ ಸೇರಿದರೆ ಸಮಾವೇಶಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಕರೆಸುತ್ತೇವೆ. ಆದರೆ, ಸಮುದಾಯದ ಜನ ಹೆಚ್ಚಿನ ಸಂಖ್ಯೆಯಲ್ಲಿ ಭಾಗಿಯಾಗಬೇಕು. ಇಡೀ ರಾಜ್ಯದ ಜನ ನೋಡುವ ರೀತಿ ದೊಡ್ಡ ಸಮಾವೇಶವಾಗಬೇಕು ಎಂದರು.
ಉನ್ನತ ಹುದ್ದೆ ಅಲಂಕರಿಸಬೇಕು:
ಎಸ್‌ಸಿ-ಎಸ್ಟಿ ಜನಾಂಗದವರು ಉನ್ನತ ಹುದ್ದೆ ಅಲಂಕರಿಸಬೇಕು. ಬಡವರ ಮಕ್ಕಳು, ವೈದ್ಯರು, ಇಂಜಿನಿಯರಿಂಗ್, ಐಎಎಸ್, ಐಪಿಎಸ್ ಹುದ್ದೆ ಪಡೆಯಬೇಕು. ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರು ಒಂದು ಸಹಾಯ ಮಾಡಲಿಲ್ಲ. ಬೆಂಗಳೂರಿನಲ್ಲಿ ವಾಲ್ಮೀಕಿ ಪುತ್ಥಳಿ ನಿರ್ಮಾಣ ಬಿಟ್ಟರೆ ಯಾವುದೇ ಕೆಲಸ ಮಾಡಲಿಲ್ಲ. ಈ ವಿಚಾರದಲ್ಲಿ ಚರ್ಚೆಗೆ ಸಿದ್ಧನಿದ್ದೇನೆ ಎಂದು ಸವಾಲು ಹಾಕಿದರು.
ಸಮುದಾಯದ ಪರ ದುಡಿಯುತ್ತೇನೆ
ನನ್ನ ಜೀವನ ಕಡೆ ಕ್ಷಣದ ವರೆಗೆ ಸಮುದಾಯದ ಪರ ದುಡಿಯುತ್ತೇನೆ. ನನಗೆ ಸಮುದಾಯ ಎಲ್ಲವನ್ನೂ ಕೊಟ್ಟಿದೆ. ಬಂಧು- ಬಳಗ, ಅಣ್ಣ, ತಮ್ಮಿಂದರು ಅಂದರೆ ನಮ್ಮ ಸವಾಜದವರೇ ಆಗಿದ್ದಾರೆ. ಇನ್ನೇನು ಆಗಬೇಕಿಲ್ಲ. ಶ್ರೀರಾಮುಲು ಬೆಳೆಯಲು ಸಮಾಜ ಕಾರಣ, ನಮ್ಮ ಸಮುದಾಯದವರು ಬಿಜೆಪಿ ಪರವಾಗಿ ಇರಬೇಕು ಎಂದರು.
ಪ್ರತಿಪಕ್ಷಗಳ ಅಪಸ್ಪರ :
ಮೀಸಲಾತಿ ಹೆಚ್ಚಳ ಮಾಡುವುದು ಸುಲಭವಲ್ಲ. ಮುಂದೆ ಎದುರಾಗುವ ಸಮಸ್ಯೆ ಗೊತ್ತಿದ್ದರೂ ಅದನ್ನು ಲೆಕ್ಕಿಸದೆ ಅನುಷ್ಠಾನಕ್ಕೆ ತರಲಾಯಿತು. ಮೀಸಲಾತಿ ಹೆಚ್ಚಳ ಕುರಿತು ಸಚಿವ ಸಂಪುಟದಲ್ಲಿ ತೀರ್ಮಾನ ಮಾಡುತ್ತಿದ್ದಂತೆ ವಿರೋಧ ಪಕ್ಷದವರು ಅಪಸ್ವರ ತೆಗೆದರು. ಆದರೆ, ಸರ್ಕಾರ ಸುಗ್ರೀವಾಜ್ಞೆ ಜಾರಿಗೊಳಿಸಿ ರಾತ್ರೋರಾತ್ರಿ ಅನುಷ್ಠಾನಗೊಳ್ಳುವಂತೆ ಮಾಡಲಾಗಿದೆ. ಐತಿಹಾಸಿಕ ಸಮಾವೇಶದ ಮೂಲಕ ಕೃತಜ್ಞತೆ ಸಲ್ಲಿಸಬೇಕು ಎಂದು ತಿಳಿಸಿದರು.
ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಸಿದ್ದರಾಜು ಮಾತನಾಡಿ, ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಾಗ ನಮ್ಮ ಸಮುದಾಯ ಪರ ಕೆಲಸ ಮಾಡಿದೆ. ಅಂಬೇಡ್ಕರ್ ಭವನದ ಜತೆಗೆ ವಾಲ್ಮೀಕಿ ಭವನವನ್ನು ರಾಜ್ಯದ ಎಲ್ಲಕಡೆ ನಿರ್ಮಿಸಿದೆ. ವಾಲ್ಮೀಕಿ ಜಯಂತಿ ಆಚರಣೆ ಪ್ರಾರಂಭ ಮಾಡಿದ್ದು ಕೂಡ ಬಿಜೆಪಿ ಸರ್ಕಾರ. ಅದಕ್ಕೆ ಕಾರಣ ಶ್ರೀರಾಮುಲು. ಜಿಲ್ಲೆಯ ಪರಿವಾರ ಮತ್ತು ತಳವಾರರ ಸಮಸ್ಯೆ ಬಗೆ ಹರಿಸಲು ಶ್ರೀರಾಮುಲು ಅವರು ಕಾರಣ ಎಂದು ಮೆಚ್ಚುಗೆ ನುಡಿಗಳನ್ನಾಡಿದರು.
ಮೇಯರ್ ಶಿವಕುಮಾರ್, ಕರ್ನಾಟಕ ಮೃಗಾಲಯ ಪ್ರಾಧಿಕಾರದ ಅಧ್ಯಕ್ಷ ಎಂ.ಶಿವಕುಮಾರ್, ಅರಣ್ಯ ವಸತಿ ಮತ್ತು ವಿಹಾರಧಾಮಗಳ ಸಂಸ್ಥೆ ಮಾಜಿ ಅಧ್ಯಕ್ಷ ಎಂ.ಅಪ್ಪಣ್ಣ, ಬಿಜೆಪಿ ಎಸ್ಟಿ ಮೋರ್ಚಾ ರಾಜ್ಯಾಧ್ಯಕ್ಷ ತಿಪ್ಪರಾಜು ಹವಾಲ್ದಾರ್, ರಾಜ್ಯ ಉಪಾಧ್ಯಕ್ಷ ಮಲ್ಲೇಶ್ ನಾಯಕ, ಕಾರ್ಯದರ್ಶಿ ಮಂಜುಳಾ, ಮೈಸೂರು ನಗರ ಬಿಜೆಪಿ ಅಧ್ಯಕ್ಷ ಟಿ.ಎಸ್.ಶ್ರೀವತ್ಸ, ಗ್ರಾಮಾಂತರ ಜಿಲ್ಲಾಧ್ಯಕ್ಷೆ ಮಂಗಳಾ ಸೋಮಶೇಖರ್, ಎಸ್‌ಟಿ ಮೋರ್ಚಾ ಜಿಲ್ಲಾಧ್ಯಕ್ಷ ಕೆ.ಎಸ್.ಅಣ್ಣಯ್ಯನಾಯಕ ಇದ್ದರು.