

ಮಡಿಕೇರಿ: ಮಡಿಕೇರಿಯ ಮೆಡಿಕಲ್ ಕಾಲೇಜ್ನಲ್ಲಿ ನಡೆದ ಪ್ರಕರಣದಲ್ಲಿ ನಮ್ಮ ವಿರುದ್ಧ ಪ್ರಕರಣ ದಾಖಲಾಗಿದ್ದು, ಇದು ವಿದ್ಯಾರ್ಥಿಗಳೊಂದಿಗೆ ನಡೆದ ಮಾತಿನ ಚಕಮಕಿಗೆ ಸಂಬಂಧಿಸಿದ್ದಾಗಿದೆ ಎಂದು ನಗರದ ನಿವಾಸಿ ಕೆ.ವಿ.ಕಿರಣ್ ಕುಮಾರ್ ಸ್ಪಷ್ಟಪಡಿಸಿದರು.
ಇತ್ತೀಚೆಗೆ ಅಸಭ್ಯ ವರ್ತನೆಯ ಆರೋಪಿಯೊಂದಿಗೆ ನಮ್ಮ ಹೆಸರನ್ನು ಹಾಕಿ ಭಾವಚಿತ್ರ ಸಹಿತ ನಮ್ಮನ್ನು ಆರೋಪಿಗಳಂತೆ ಪ್ರತಿಬಿಂಬಿಸಲಾಗಿತ್ತು. ಇದರಿಂದ ಜನವಲಯದಲ್ಲಿ ತಪ್ಪು ಅಭಿಪ್ರಾಯ ಮೂಡಿದೆ. ಇದರಿಂದ ನಮ್ಮ ಮುಂದಿನ ಜೀವನಕ್ಕೆ ಆತಂಕ ಎದುರಾಗಿದ್ದು, ಯಾವುದೇ ತಪ್ಪು ಮಾಡದ ನಮ್ಮನ್ನು ಸಮಾಜ ತಪ್ಪು ದೃಷ್ಟಿಯಿಂದ ನೋಡುತ್ತಿದೆ. ಈ ಹಿನ್ನೆಲೆ ಸ್ಪಷ್ಟಿಕರಣ ನೀಡುತ್ತಿದ್ದೇವೆ ಎಂದು ತಿಳಿಸಿದರು.
ಘಟನೆ ವಿವರ: ೨೦೨೩ ಆ.೧೯ ರಂದು ರಾತ್ರಿ ೧೨.೩೦ ರ ವೇಳೆಗೆ ಹೆಬ್ಬೆಟ್ಟಗೇರಿಯ ಸ್ನೇಹಿತರ ಮನೆಯಲ್ಲಿ ಜನ್ಮ ದಿನಾಚರಣೆ ಕಾರ್ಯಕ್ರಮ ಮುಗಿಸಿಕೊಂಡು ಟೆಂಪೋದಲ್ಲಿ ಕಿರಣ್ ಕುಮಾರ್ ಕೆ.ವಿ(ನಾನು), ಸಿ.ಮನು ಹಾಗೂ ಬೈಕ್‌ನಲ್ಲಿ ಎಸ್.ಪ್ರಶಾಂತ್ ಮೆಡಿಕಲ್ ಕಾಲೇಜು ಮಾರ್ಗವಾಗಿ ಬರುತ್ತಿದ್ದೆವು. ಆಟೋವೊಂದನ್ನು ನಿಲ್ಲಿಸಿದ್ದ ವಿದ್ಯಾರ್ಥಿಗಳು ಅದರ ಚಾಲಕ ಶೌಕತ್ ಎಂಬುವವರ ಬಳಿ ಮಾತನಾಡುತ್ತಿದ್ದರು. ದಾರಿಗೆ ಅಡ್ಡಲಾಗಿ ವಾಹನಗಳಿದ್ದ ಕಾರಣ ನಾವು ಇದನ್ನು ಪ್ರಶ್ನಿಸಿದೆವು. ಈ ಸಂದರ್ಭ ವಿದ್ಯಾರ್ಥಿಗಳು ಹಾಗೂ ನಮ್ಮ ನಡುವೆ ಮಾತುಕತೆ ನಡೆದಿದೆ. ಆ.೧೯ ರಂದು ನಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ನಾವುಗಳು ಮೆಡಿಕಲ್ ಕಾಲೇಜು ವಿದ್ಯಾರ್ಥಿಗಳೊಂದಿಗೆ ಕ್ಷಮೆ ಕೇಳುತ್ತೇವೆ ಎಂದು ವಿವರಿಸಿದರು.
ಕಾಲೇಜು ಬಳಿ ಅಸಭ್ಯವಾಗಿ ವರ್ತಿಸಿದ ಆರೋಪಿ ಸಿಜೀಲ್ಗೂ ನಮಗೂ ಯಾವುದೇ ಸಂಬಂಧವಿರುವುದಿಲ್ಲ. ಆತ ಯಾರೆಂದೇ ನಮಗೆ ತಿಳಿದಿಲ್ಲ. ಆದರೆ, ಸಿಜೀಲ್ ಮಾಡಿರಬಹುದಾದ ಪ್ರಕರಣದ ಜತೆಯಲ್ಲಿ ನಮ್ಮ ಹೆಸರುಗಳನ್ನು ತಳುಕು ಹಾಕಿರುವುದು ಮಾತ್ರವಲ್ಲದೆ, ನಮ್ಮ ಭಾವಚಿತ್ರಗಳನ್ನು ಕೂಡ ಪ್ರಕಟ ಮಾಡಿರುವುದರಿಂದ ಯಾವುದೇ ತಪ್ಪುಗಳನ್ನು ಮಾಡದ ನಮಗೆ ನೋವುಂಟಾಗಿದೆ. ಸಮಾಜದಲ್ಲಿ ನಾವು ತಲೆ ತಗ್ಗಿಸುವಂತಾಗಿದೆ, ಮನೆಯಲ್ಲೂ ಗೌರವ ಇಲ್ಲದಂತಾಗಿದೆ. ಪೋಷಕರಿಗೂ ತುಂಬಾ ನೋವಾಗಿದ್ದು, ಬಾಡಿಗೆ ಮನೆಯ ಮಾಲೀಕರು ಮನೆ ಖಾಲಿ ಮಾಡುವಂತೆ ಹೇಳುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ನಮಗೆ ಮುಂದಿನ ದಿನಗಳಲ್ಲಿ ಉದ್ಯೋಗ ಮತ್ತು ವ್ಯವಹಾರ ಸಿಗದ ಪರಿಸ್ಥಿತಿ ನಿರ್ಮಾಣವಾಗಿದೆ. ಆ.೧೯ ರಂದು ರಾತ್ರಿ ೧೨.೩೦ ಗಂಟೆಗೆ ನಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಡಿಕೇರಿ ನಗರ ಠಾಣೆ ಹಾಗೂ ಗ್ರಾಮಾಂತರ ಠಾಣೆಯಲ್ಲಿ ವಿಚಾರಣೆ ನಡೆಸಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆದರೆ ಇತ್ತೀಚೆಗೆ ಪತ್ರಿಕೆ ಹಾಗೂ ಮಾಧ್ಯಮಗಳಲ್ಲಿ ನಮ್ಮನ್ನು ಆರೋಪಿಗಳೆಂದು ಪ್ರತಿಬಿಂಬಿಸಿದ್ದು, ದಯವಿಟ್ಟು ಪ್ರಕರಣದ ನೈಜತೆಯನ್ನು ಅರಿತುಕೊಳ್ಳಬೇಕು ಎಂದು ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಸಿ.ಮನು, ಎಸ್.ಪ್ರಶಾಂತ್ ಉಪಸ್ಥಿತರಿದ್ದರು.