ವಚನ ಸಾಹಿತ್ಯವನ್ನು ಅನುಕರಣೆ ಮಾಡುವಲ್ಲಿ ಸೋತಿದ್ದೇವೆ

mysore
Published on

ಮೈಸೂರು; ಎಲ್ಲ ಕಾಲಕ್ಕೂ ಪ್ರಸ್ತುತವಾಗಿರುವ ವಚನ ಸಾಹಿತ್ಯವನ್ನು ಓದುವ ನಾವು ಅದನ್ನು ಅನುಕರಣೆ ಮಾಡುವಲ್ಲಿ ಸೋತಿದ್ದೇವೆ ಎಂದು ಜೆಎಸ್‌ಎಸ್ ಮಹಾವಿದ್ಯಾಪೀಠದ ಸಾಮಾನ್ಯ ಅಭಿವೃದ್ಧಿ ವಿಭಾಗದ ಉಪ ನಿರ್ದೇಶಕ ಕೆ.ಎಲ್.ರೇವಣ್ಣಸ್ವಾಮಿ ಕಳವಳ ವ್ಯಕ್ತಪಡಿಸಿದರು.


ಶರಣ ಸಾಹಿತ್ಯ ಪರಿಷತ್ತಿನ ನಗರ ಘಟಕದ ವತಿಯಿಂದ ನಗರದ ಆರ್‌ಟಿಒ ವೃತ್ತದ ಬಳಿಯ ಜೆಎಸ್‌ಎಸ್ ಹಾಸ್ಟೆಲ್‌ನಲ್ಲಿ ಭಾನುವಾರ ಆಯೋಜಿಸಿದ್ದ ಅಂತರ ವಿದ್ಯಾರ್ಥಿನಿಲಯಗಳ ಚರ್ಚಾ ಸ್ಪರ್ಧೆ, ರಸಪ್ರಶ್ನೆ ಕಾರ್ಯಕ್ರಮದಲ್ಲಿ ಮಾತನಾಡಿದರು.


ಶರಣರು ಇಷ್ಟ ಲಿಂಗವನ್ನು ಕೊಟ್ಟಿದ್ದರೂ ನಾವುಗಳು ದೇವಸ್ಥಾನಗಳಿಗೆ ಅಲೆಯುವುದನ್ನು ಬಿಟ್ಟಿದ್ದೇವೆಯೇ? ವಚನಗಳ ವೈಜ್ಞಾನಿಕ ಓದು ಇಂದಿನ ಪರಿಸ್ಥಿತಿಯಲ್ಲಿ ವಿಶ್ವಕ್ಕೆ ದಾರಿ ದೀಪವಾಗಲಿದೆ ಎಂದರು.


ಶಾಂತಿಯನ್ನು ಪ್ರತಿಪಾದಿಸಿದ ಆದಿ ಜಗದ್ಗುರುಗಳು ಯುದ್ಧ ನಡೆಯದಂತೆ ಅಹಿಂಸಾ ತತ್ವ ಬಿತ್ತಿದ್ದರು. ಆದರೆ, ಇಂದು ಧರ್ಮ ಧರ್ಮಗಳ ನಡುವೆ ದ್ವೇಷ, ವೈಷಮ್ಯದ ನರಕವೇ ಸೃಷ್ಟಿಯಾಗುತ್ತಿದೆ. ಜಗತ್ತಿನಲ್ಲಿ ಶಾಂತಿ ನೆಲೆಸಲು ವಚನ ಸಾಹಿತ್ಯದ ಓದು ಮತ್ತು ಅದರ ಆಚರಣೆ ಅಗತ್ಯವಾಗಿದೆ ಎಂದರು


‘ವಚನ ಸಾಹಿತ್ಯ ಮತ್ತು ಭಾರತ ಸಂವಿಧಾನ’ ಕುರಿತು ಮಾತನಾಡಿದ ಪ್ರಾಧ್ಯಾಪಕ ಆರ್.ಎಂ.ಚಿಂತಾಮಣಿ ಅವರು, ವಚನಕಾರರು ರಚನೆಗಾಗಿ ಕೂತು ಬರೆದವರಲ್ಲ, ನಡೆದಂತೆ ನುಡಿದವರು, ನುಡಿದಂತೆ ನಡೆದವರು. ಆ ಬದುಕೇ ವಚನ ಸಾಹಿತ್ಯವಾಗಿ ರೂಪಗೊಂಡಿದೆ.

ಅಂಬೇಡ್ಕರ್ ನಾಯಕತ್ವದಲ್ಲಿ ರಚಿತವಾದ ಭಾರತ ಸಂವಿಧಾನದಲ್ಲಿ ಹೇಗೆ ಚರ್ಚಿಸಿ ರಚನೆ ಮಾಡಿದರೋ ಹಾಗೆಯೇ ಶರಣರು ಅನುಭವ ಮಂಟಪದಲ್ಲಿ ಸಮಾನತೆ, ಕಾಯಕ ತತ್ವ, ವಾಕ್ ಸ್ವಾತಂತ್ರೃ ಮುಂತಾದ ವಿಷಯಗಳನ್ನು ಚರ್ಚಿಸಿ ಅಳವಡಿಸಿಕೊಳ್ಳಲಾಗಿತ್ತು. ಸಮಾಜಮುಖಿ ಜೀವನವನ್ನು ಪ್ರತಿಪಾದಿಸಿದ ಸಂವಿಧಾನ ಮೂಲ ವಚನ ಸಾಹಿತ್ಯದಲ್ಲಿದೆ ಎಂದರು.


ತಮ್ಮನ್ನು ತಾವು ಸುಧಾರಿಸಿಕೊಳ್ಳದೆ ಜಗತ್ತನ್ನು ಸುಧಾರಿಸಲು ಸಾಧ್ಯವಿಲ್ಲ ಎಂಬುವುದನ್ನು ಅನುಭವ ಮಂಟಪದ ಮೂಲಕ ಶರಣರು ತೋರಿಸಿಕೊಟ್ಟಿದ್ದಾರೆ ಎಂದರು.


ರಸಪ್ರಶ್ನೆ ಸ್ಪರ್ಧಾ ವಿಜೇತರಾದ ಉದಯ್ ಹಿರೇಮಠ, ಉಮಾಶಂಕರ್, ಜಯಂತ್ ಅವರಿಗೆ ಮತ್ತು ಚರ್ಚಾ ಸ್ಪರ್ಧಾ ವಿಜೇತರಾದ ಕಿರಣ್ ಅವರಿಗೆ ಬಹುಮಾನ ವಿತರಿಸಲಾಯಿತು. ಅಂಗವಿಕಲರಾದ ಮಮತಾ ಮತ್ತು ಪೂರ್ವಿಕ ಅವರಿಗೆ ಗಾಲಿ ಕುರ್ಚಿ ವಿತರಿಸಲಾಯಿತು.


ಜೆಎಸ್‌ಎಸ್ ಮಹಾವಿದ್ಯಾಪೀಠದ ಕಾರ್ಯದರ್ಶಿ-2 ಎಸ್.ಶಿವಕುಮಾರಸ್ವಾಮಿ, ಶರಣ ಸಾಹಿತ್ಯ ಪರಿಷತ್ ನಗರಾಧ್ಯಕ್ಷ ಮ.ಗು.ಸದಾನಂದಯ್ಯ, ನಿಲಯಪಾಲಕ ಡಾ.ಎನ್.ಮಹದೇವಸ್ವಾಮಿ, ದತ್ತಿ ದಾನಿ ಎಂ.ಎ.ನೀಲಾಂಬಿಕಾ ಇನ್ನಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net