

ಚನ್ನಪಟ್ಟಣ: ರಾಜ್ಯ ಸರ್ಕಾರ ನಿಮ್ಮ ಮನೆ ಬಾಗಿಲಿಗೆ ಬಂದಿದೆ. ಕಳೆದ ಮೂರು ತಿಂಗಳಿನಿಂದ ತಾಲೂಕಿನಲ್ಲಿ ಬದಲಾವಣೆಯ ಕ್ರಾಂತಿ ನಡೆಯುತ್ತಿದೆ. ಚನ್ನಪಟ್ಟಣದ ಅಭಿವೃದ್ಧಿಯ ದೀಪ ಹಚ್ಚಿದ್ದೇವೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ತಿಳಿಸಿದರು.
ನಗರದ ಅಖಿಲ್ ಷಾ ಬಡಾಮಖಾನ್ ಮೈದಾನದಲ್ಲಿ (ಟಿಪ್ಪುನಗರ) ಶನಿವಾರ ಹಮ್ಮಿಕೊಂಡಿದ್ದ ಐಡಿಎಸ್‌ಎಸ್‌ಎಂಟಿ ಲೇಔಟ್‌ನ ನಿವೇಶನಗಳ ಹಂಚಿಕೆಯ ಫಲಾನುಭವಿಗಳ ಆಯ್ಕೆ, ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದಿಂದ ವಿವಿಧ ಯೋಜನೆಗಳ ಲಾನುಭವಿಗಳಿಗೆ ಮಂಜೂರಾತಿ ಪತ್ರ ವಿತರಣೆ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿದರು.
ನಾವು ಕೊಟ್ಟ ಮಾತಿನಂತೆ ಚನ್ನಪಟ್ಟಣದ ಅಭಿವೃದ್ಧಿ ಮಾಡುತ್ತಿದ್ದೇವೆ. ಸರ್ಕಾರವನ್ನೇ ಜನರ ಮನೆ ಬಾಗಿಲಿಗೆ ತರುತ್ತಿದ್ದೇವೆ. ಕೆಲದಿನಗಳಿಂದ ತಾಲೂಕಿನಲ್ಲಿ ಏನು ಬದಲಾವಣೆ ಆಗುತ್ತಿದೆ ಎಂಬುದನ್ನು ಕಿವಿಯಲ್ಲಿ ಕೇಳುತ್ತಿಲ್ಲ. ಕಣ್ಣಿನಲ್ಲಿ ನೋಡುತ್ತಿದ್ದೀರಿ, ಈ ವೇದಿಕೆ ಕಾರ್ಯಕ್ರಮದಲ್ಲಿ ಹಚ್ಚಿರುವ ದೀಪ ನನಗೋಸ್ಕರ ಅಲ್ಲ, ಚನ್ನಪಟ್ಟಣದ ಅಭಿವೃದ್ಧಿಯ ದೀಪ ಹಚ್ಚಿದ್ದೇವೆ. ಜನಸ್ಪಂದನ ಸಭೆಯಲ್ಲಿ ಬಂದಿರುವ ಅರ್ಜಿಗಳ ವಿಲೇವಾರಿ ಜತೆಗೆ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಕೋಟ್ಯಂತರ ರೂ. ಅನುದಾನ ತರಲಾಗಿದೆ. ತಾಲೂಕಿನ ಸೇವೆ ಮಾಡಲು ಸಿಕ್ಕಿರುವ ಪುಣ್ಯದ ಅವಕಾಶವನ್ನು ಪ್ರಾಮಾಣಿಕವಾಗಿ ಮಾಡುತ್ತಿದ್ದೇನೆ ಎಂದು ತಿಳಿಸಿದರು.
ಎಚ್‌ಡಿಕೆಗೆ ಟಾಂಗ್!
ತಮ್ಮ ಭಾಷಣದುದ್ದಕ್ಕೂ ಮಾಜಿ ಸಿಎಂ ಹಾಗೂ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ವಿರುದ್ಧ ಡಿಕೆಶಿ ವಾಗ್ದಾಳಿ ನಡೆಸಿದರು. ಅವರ ಬಗ್ಗೆ ಮಾತನಾಡಲು ನನಗೆ ಇಷ್ಟ ಇಲ್ಲ ಎನ್ನುತ್ತಲ್ಲೇ ಕುಮಾರಸ್ವಾಮಿಗೆ ಟಾಂಗ್ ನೀಡಿದರು. ಅವರು ನಿಮ್ಮನ್ನು ಈಗಾಗಲೇ ಬಿಟ್ಟು ಹೊರಟು ಹೋಗಿದ್ದಾರೆ. ಮತ್ತೆ ಅವರ ನೆನಪು ಯಾಕೆ? ಅವರಿಗೂ ಚನ್ನಪಟ್ಟಣಕ್ಕೂ ಸಂಬಂಧವಿಲ್ಲ, ಆದರೆ, ನನಗೂ ಚನ್ನಪಟ್ಟಣಕ್ಕೂ ಸಂಬಂಧವಿದೆ. ಭಕ್ತ ಹಾಗೂ ಭಗವಂತನ ಸಂಬಂಧವಿದೆ. ‘ಮಿಸ್ಟರ್.., ಕುಮಾರಸ್ವಾಮಿಗೆ ಹೇಳ್ತಾ ಇದ್ದೀನಿ. ನಿನ್ನ ಆಡಳಿತವೇ ಬೇರೆ, ಡಿಕೆಶಿ ಆಡಳಿತವೇ ಬೇರೆ! ನಿನ್ನ ಆಡಳಿತ ಸ್ವಂತಕ್ಕೆ.., ನನ್ನ ಆಡಳಿತ ಜನಕ್ಕೆ. ನಮ್ಮದು ಕುಟುಂಬ ರಾಜಕಾರಣವಲ್ಲ, ನಾವು ಯಾರೂ ಶಾಶ್ವತ ಅಲ್ಲ, ದೇವರೇ ಪರ್ಮಿಟ್ ಇಲ್ಲ ಅಂದಮೇಲೆ ನಮ್ಮದೇನಿದೆ?. ಈ ಎರಡು ಕೈ ಭಗವಂತ ಕೊಟ್ಟಿರೋದು ನಮ್ಮನ್ನು ಕಾಪಾಡಿಕೊಳ್ಳಲು ಹಾಗೂ ನಿಮ್ಮನ್ನು ಕಾಪಾಡಲು. ಅದೇ ಕೈ ಬೇರೆಯವರಿಗೂ ಇತ್ತು. ಅವರು ನಿಮ್ಮನ್ನು ಕಾಪಾಡುವ ಕೆಲಸ ಮಾಡಬಹುದಿತ್ತು. ಆದರೆ, ಮಾಡಲಿಲ್ಲ. ಅದಕ್ಕಾಗಿ ವ್ಯಥೆ ಬೇಡ.., ನಿಮ್ಮನ್ನು ಕಾಪಾಡಲು ನಿಮ್ಮ ಮನೆಮಗ ನಾನಿದ್ದೇನೆ’ ಎಂದರು.
ನಾನೇ ಅಭ್ಯರ್ಥಿ!!
ಚನ್ನಪಟ್ಟಣ ಅಭಿವೃದ್ಧಿಗೆ 500 ಕೋಟಿ ರೂ. ಕಾರ್ಯಕ್ರಮ ರೂಪಿಸಲಾಗಿದೆ. ಈಗಾಗಲೇ ಜಿಲ್ಲಾ ಮಂತ್ರಿ ರಾಮಲಿಂಗಾರೆಡ್ಡಿ ಅಭಿವೃದ್ಧಿ ಕೆಲಸಕ್ಕೆ ಚಾಲನೆ ನೀಡಿದ್ದಾರೆ. ಕ್ಷೇತ್ರಕ್ಕೆ ವಿಶೇಷ ಅನುದಾನ ತಂದಿದ್ದೇವೆ. ಇಂದು ಒಂದೇ ದಿನ 200 ಕೋಟಿ ರೂ. ಅಭಿವೃದ್ಧಿ ಕೆಲಸಕ್ಕೆ ಚಾಲನೆ ಕೊಡುತ್ತಿದ್ದೇವೆ. ಈಗ ಉಪಚುನಾವಣೆ ಬರುತ್ತಿದೆ, ಕ್ಷೇತ್ರದಲ್ಲಿ ಯಾರೇ ಅಭ್ಯರ್ಥಿ ಆಗಲಿ, ಡಿಕೆಶಿನೇ ಅಭ್ಯರ್ಥಿ ಎಂದರು.
ನಮ್ಮ ಸರ್ಕಾರ ಸುಭದ್ರ!
ಚನ್ನಪಟ್ಟಣ ಕ್ಷೇತ್ರವನ್ನು ಚಿನ್ನದ ನಾಡು ಮಾಡುತ್ತೇವೆ. ಕ್ಷೇತ್ರದಲ್ಲಿ ನಿವೇಶನ ಹಂಚಲು ಕ್ರಮಕೈಗೊಂಡಿದ್ದೇವೆ. ಕಾಂಗ್ರೆಸ್ ಸರ್ಕಾರ ಎಲ್ಲ ವರ್ಗದ ಜನರ ಸರ್ಕಾರ. ಎಲ್ಲ ಗ್ಯಾರಂಟಿಗಳನ್ನು ಈಡೇರಿಸುವ ಕೆಲಸ ಮಾಡಿದ್ದೇವೆ. ನಮ್ಮ ಈ ಯೋಜನೆಗಳನ್ನು ನಿಲ್ಲಿಸಲು ಬಿಜೆಪಿ ಮತ್ತು ಜೆಡಿಎಸ್ ಸಂಚು ಮಾಡುತ್ತಿವೆ. ಏನಾದರೂ ಮಾಡಿ ಸರ್ಕಾರ ಬೀಳಿಸಬೇಕು ಅಂತ ಕಾಯುತ್ತಿದ್ದಾರೆ. ಆದರೆ, ಬಿದ್ದ ತಕ್ಷಣ ಒಡೆದು ಹೋಗೋಕೆ ನಮ್ಮದು ಮಡಕೆ ಅಲ್ಲ, ಚಿನ್ನದ ಚೊಂಬು, ಕಂಚಿನ ಚೊಂಬು, ನಮ್ಮ ಸರ್ಕಾರ ಸುಭದ್ರ ಎಂದರು.
ರಕ್ಷಣೆ ನಮ್ಮ ಜವಾಬ್ದಾರಿ!
ಕ್ಷೇತ್ರದಲ್ಲಿ ಇಷ್ಟೊಂದು ಕೆಲಸ ಆಗುತ್ತಿರುವುದನ್ನು ಕಂಡು ಸಹಿಸದೇ ಪಾಪ ಕುಮಾರಣ್ಣ ಜಿಲ್ಲಾಧಿಕಾರಿಗೆ ಬೆದರಿಕೆ ಹಾಕಿದ್ದಾರಂತೆ! ನಾವಿದ್ದಾಗ ಕೆಲಸ ಮಾಡಿಲ್ಲ, ಈಗ ಮಾಡುತ್ತಿದ್ದೀರಾ ಅಂತ. ಆದರೆ, ಗೊಡ್ಡು ಬೆದರಿಕೆಗೆ ನಾವು ಹೆದರಲ್ಲ.., ಸಾಕಷ್ಟು ಕೌನ್ಸಿಲರ್‌ಗಳು ಕುಮಾರಸ್ವಾಮಿ ಬಿಟ್ಟು ಕಾಂಗ್ರೆಸ್‌ಗೆ ಬಂದಿದ್ದಾರೆ. ಕೆಲ ಕೌನ್ಸಿಲರ್‌ಗಳಿಗೂ ಬೆದರಿಕೆ ಹಾಕ್ತಿದ್ದಾರಂತೆ. ಆದರೆ, ಅವರಿಗೆ ರಕ್ಷಣೆ ಕೊಡುವ ಜವಾಬ್ದಾರಿ ನಮ್ಮದು ಎಂದು ಪಕ್ಷಾಂತರ ಮಾಡಿರುವ ನಗರಸಭಾ ಸದಸ್ಯರಿಗೆ ಅಭಯ ನೀಡಿದರು.
ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗಾರೆಡ್ಡಿ, ವಸತಿ ಸಚಿವ ಜಮೀರ್ ಅಹ್ಮದ್ ಖಾನ್, ಪೌರಾಡಳಿತ ಸಚಿವ ರಹೀಂ ಖಾನ್, ರಾಮನಗರ ಶಾಸಕ ಇಕ್ಬಾಲ್ ಹುಸೇನ್, ವಿಧಾನ ಪರಿಷತ್ ಸದಸ್ಯ ಎಸ್. ರವಿ, ಬಿಎಂಐಸಿಎಪಿಎ ಪ್ರಾಧಿಕಾರದ ಅಧ್ಯಕ್ಷ ರಘುನಂದನ್ ರಾಮಣ್ಣ, ಚನ್ನಪಟ್ಟಣ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಎಸ್.ಆರ್. ಪ್ರಮೋದ್, ಜಿಲ್ಲಾಧಿಕಾರಿ ಯಶವಂತ್ ವಿ. ಗುರುಕರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಾರ್ತಿಕ್ ರೆಡ್ಡಿ, ಜಿಪಂ ಸಿಇಒ ದಿಗ್ವಿಜಯ್ ಬೋಡ್ಕೆ, ಅಪರ ಜಿಲ್ಲಾಧಿಕಾರಿ ಚಂದ್ರಯ್ಯ, ಮುಖಂಡರಾದ ದುಂತೂರು ವಿಶ್ವನಾಥ್, ವಾಸಿಲ್ ಆಲಿಖಾನ್, ಬೋರ್ವೆಲ್ ರಂಗನಾಥ್, ಎಸ್.ಸಿ. ಶೇಖರ್, ಸೇರಿ ವಿವಿಧ ಅಧಿಕಾರಿಗಳು ಹಾಗೂ ನಗರಸಭೆ ಜನಪ್ರತಿನಿಧಿಗಳು ಇದ್ದರು.
ಎಚ್ಡಿಕೆ ವಿರುದ್ಧ ವಾಗ್ದಾಳಿ, ಡಿಕೆಸು ಕೊಂಡಾಟ!
ವೇದಿಕೆಯಲ್ಲಿ ಮಾತನಾಡಿದ ವಸತಿ ಸಚಿವ ಜಮೀರ್ ತಮ್ಮ ಮಾತಿನ ಉದ್ದಕ್ಕೂ ಮಾಜಿ ಸಿಎಂ ಎಚ್. ಡಿ. ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದರೆ, ಮತ್ತೊಂದೆಡೆ ಮಾಜಿ ಸಂಸದ ಡಿ.ಕೆ.ಸುರೇಶ್ ಅವರನ್ನು ಕೊಂಡಾಡಿದರು. ತಾಲೂಕಿನ ಜನರ ಬಹುದಿನದ ಕನಸು ನನಸಾಗಿದೆ. ಈ ಹಿಂದೆ ಸಂಸದರಾಗಿ ಡಿ.ಕೆ.ಸುರೇಶ್ ಉತ್ತಮ ಕಾರ್ಯ ಮಾಡಿದ್ದಾರೆ. ಕ್ಷೇತ್ರದಲ್ಲಿ ಈ ಮಟ್ಟದ ಅಭಿವೃದ್ಧಿ ನಡೆಯುತ್ತಿದೆ ಎಂದರೆ ಅದರ ಹಿಂದೆ ಡಿ.ಕೆ ಸುರೇಶ್ ಅವರ ಶ್ರಮ ಹಾಗೂ ಕಾಳಜಿ ಇದೆ. ಅವರ ಮನವಿ ಮೇರೆಗೆ ಇಷ್ಟೊಂದು ಅಭಿವೃದ್ಧಿ ಕಾಮಗಾರಿಗಳು ಆರಂಭವಾಗಲು ಕಾರಣ ಎಂದರು.
ಬಹಿರಂಗ ಚರ್ಚೆಗೆ ಸವಾಲ್!
ಬಹಳ ವರ್ಷದಿಂದ ಬಡವರಿಗೆ ನಿವೇಶನ ಕೊಡಬೇಕು ಎನ್ನುವ ಕನಸು ಇತ್ತು. ಈಗ ಆ ಕನಸು ನನಸಾಗುತ್ತಿದೆ. ಮಾಜಿ ಸಂಸದ ಡಿ.ಕೆ.ಸುರೇಶ್ ಮಾಡಿರುವ ಕೆಲಸ ಗಿನ್ನೀಸ್ ರೆಕಾರ್ಡ್ಸ್‌ನಲ್ಲಿ ದಾಖಲಾಗಬೇಕು. ಒಬ್ಬ ಗ್ರಾಪಂ ಸದಸ್ಯನ ರೀತಿ ಅವರು ಕೆಲಸ ಮಾಡಿದ್ದಾರೆ. ಈ ಭಾಗಕ್ಕೆ ಶಾದಿ ಮಹಲ್ ಬೇಕು ಅನ್ನುವ ಮನವಿ ಕೊಟ್ಟಿದ್ದರು. ಹಾಗಾಗಿ, ಅದನ್ನು ಮಂಜೂರು ಮಾಡಿದ್ದೇನೆ. ಕುಮಾರಸ್ವಾಮಿ ಈ ಹಿಂದೆ ಇಲ್ಲಿ ಶಾಸಕರಾಗಿದ್ದರು. ಸಿಎಂ ಆಗಿದ್ದರು. ಅವರು ಸಿಎಂ ಆಗಿದ್ದಾಗ ತಾಲೂಕಿಗೆ ಎಷ್ಟು ಮನೆ ಕೊಟ್ಟಿದ್ದಾರೆ? ಹಿಂದೆ 2013ರಲ್ಲಿ ಸಿದ್ದರಾಮಯ್ಯ ಸಿಎಂ ಆಗಿದ್ದಾಗ ರಾಮನಗರ ಜಿಲ್ಲೆಗೆ 31ಸಾವಿರ ಮನೆಗಳನ್ನು ಕೊಟ್ಟಿದ್ದರು. ಆದರೆ, ಕುಮಾರಸ್ವಾಮಿ ಸಿಎಂ ಆಗಿದ್ದಾಗ ಇಡೀ ಜಿಲ್ಲೆಗೆ ಕೇವಲ 600 ಮನೆ ನೀಡಿದ್ದಾರೆ. ಯಾಕೆ ಕುಮಾರಸ್ವಾಮಿಗೆ ಬಡವರು ಕಾಣಲಿಲ್ವಾ.? ಚನ್ನಪಟ್ಟಣಕ್ಕೆ ಸ್ಟೇಡಿಯಂ ಬೇಕು ಅಂತ ಮನವಿ ಇದ್ದರೂ ಕುಮಾರಸ್ವಾಮಿ ಮಾಡಿರಲಿಲ್ಲ. ಈಗ ಡಿಕೆಶಿ ಅವರು 9 ಕೋಟಿ ರೂ. ವೆಚ್ಚದಲ್ಲಿ ಸ್ಟೇಡಿಯಂ ಅಭಿವೃದ್ಧಿ ಮಾಡುತ್ತಿದ್ದಾರೆ. ಮಾಜಿ ಸಂಸದ ಡಿ.ಕೆ.ಸುರೇಶ್ ಸೋತರೂ ಕ್ಷೇತ್ರದ ಬಗ್ಗೆ ಕಾಳಜಿ ಇಟ್ಟುಕೊಂಡಿದ್ದಾರೆ. ಆದರೆ, ಕುಮಾರಸ್ವಾಮಿ ಅಧಿಕಾರ ಇದ್ದಾಗಲೂ ಏನೂ ಮಾಡಿಲ್ಲ. ಬೇಕಿದ್ದರೆ ಬಹಿರಂಗ ಚರ್ಚೆಗೆ ಕುಮಾರಸ್ವಾಮಿ ಬರಲಿ ಎಂದು ಜಮೀರ್ ಅಹಮ್ಮದ್ ಸವಾಲು ಹಾಕಿದರು.
ಡಿಕೆಸು ಸ್ಪರ್ಧೆ ಮಾಡಿಸಿ!
ಕಾಂಗ್ರೆಸ್ ನವರು ಅಭಿವೃದ್ಧಿ ವಿಚಾರ ಮುಂದಿಟ್ಟು ಚುನಾವಣೆ ಎದುರಿಸುತ್ತೇವೆ. ಆದರೆ, ಬಿಜೆಪಿಯವರು ಹಿಂದು ಮುಸ್ಲಿಂ ಅಂತ ಮತ ಕೇಳುತ್ತಾರೆ. ನಮಗೆ ಯಾವುದೇ ಧರ್ಮ ಬೇಧ ಇಲ್ಲ. ಎಲ್ಲರೂ ಒಂದೇ ಎಂಬ ಭಾವನೆಯಲ್ಲಿ ನಾವು ಹೋಗುತ್ತಿದ್ದೇವೆ. ಈ ಕ್ಷೇತ್ರ ಸಾಕಷ್ಟು ಬಡವಾಗಿದೆ, ತಬ್ಬಲಿ ಕ್ಷೇತ್ರವಾಗಿದೆ. ಈ ಕ್ಷೇತ್ರಕ್ಕೆ ಸಮರ್ಥ ಶಾಸಕರ ಆಯ್ಕೆ ಆಗಬೇಕು. ಅದಕ್ಕಾಗಿ ಈ ಕ್ಷೇತ್ರದಲ್ಲಿ ಡಿ.ಕೆ.ಸುರೇಶ್ ಅವರನ್ನು ಸ್ಪರ್ಧೆಗೆ ಇಳಿಸಿ. ಹೈಕಮಾಂಡ್ ಜತೆ ಮಾತನಾಡಿ ಡಿ.ಕೆ.ಸುರೇಶ್ ಹೆಸರನ್ನು ಘೋಷಿಸಿ ಎಂದು ಜಮೀರ್ ಮನವಿ ಮಾಡಿದರು.