ಜನಪರ ಯೋಜನೆಗಳಿಂದ ಮತದಾರರ ವಿಶ್ವಾಸ ಗಳಿಸಿದ್ದೇವೆ

15 ckm 4
ಚಿಕ್ಕಮಗಳೂರು ಕಾಂಗ್ರೆಸ್ ಕಚೇರಿಯಲ್ಲಿ ಏರ್ಪಡಿಸಲಾಗಿದ್ದ ಉಡುಪಿ-ಚಿಕ್ಕಮಗಳೂರು ಲೋಕಸಭಾ ಚುನಾವಣೆ ಬಳಿಕ ಚಿಕ್ಕಮಗಳೂರು ಮತ್ತು ಸಖರಾಯಪಟ್ಟಣ ಬ್ಲಾಕ್ ಸಮಿತಿಗಳ ಸಮಾಲೋಚನಾ ಸಭೆಯ ಅಧ್ಯಕ್ಷತೆ ವಹಿಸಿ ಶಾಸಕ ಎಚ್.ಡಿ.ತಮ್ಮಯ್ಯ ಮಾತನಾಡಿದರು. ಗಾಯತ್ರಿ ಶಾಂತೇಗೌಡ, ರೇಖಾ ಹುಲಿಯಪ್ಪ ಗೌಡ, ಡಾ.ಅಂಶುಮಂತ್, ಎಚ್.ಪಿ.ಮಂಜೇಗೌಡ, ಶಿವಾನಂದ ಸ್ವಾಮಿ, ಡಿ.ಎಲ್.ವಿಜಯ್ ಕುಮಾರ್ ಮತ್ತಿತರರಿದ್ದರು.
Published on

ಚಿಕ್ಕಮಗಳೂರು: ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಪಕ್ಷ ಜನಪರ ಯೋಜನೆಗಳ ಮೂಲಕ ಮತದಾರರ ವಿಶ್ವಾಸ ಗಳಿಸುವಲ್ಲಿ ಯಶಸ್ವಿಯಾಗಿದೆ ಎಂದು ಶಾಸಕ ಎಚ್.ಡಿ.ತಮ್ಮಯ್ಯ ತಿಳಿಸಿದರು.

ನಗರದ ಕಾಂಗ್ರೆಸ್ ಕಚೇರಿಯಲ್ಲಿ ಬುಧವಾರ ಏರ್ಪಡಿಸಲಾಗಿದ್ದ ಉಡುಪಿ-ಚಿಕ್ಕಮಗಳೂರು ಲೋಕಸಭಾ ಚುನಾವಣೆ ಬಳಿಕ ಚಿಕ್ಕಮಗಳೂರು ಮತ್ತು ಸಖರಾಯಪಟ್ಟಣ ಬ್ಲಾಕ್ ಸಮಿತಿಗಳ ಸಮಾಲೋಚನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಬಿಜೆಪಿ ಬೆಲೆ ಇಳಿಸುತ್ತೇವೆ ಎಂದು ಸುಳ್ಳು ಭರವಸೆಗಳನ್ನು ಕೊಟ್ಟು ಬೆಲೆಯನ್ನು ಇಳಿಸುವುದಿರಲಿ ನಿಯಂತ್ರಣವನ್ನು ಮಾಡಲಾಗಿಲ್ಲ ಎಂದು ದೂರಿದರು.
ಕಳೆದ ೧೦ ವರ್ಷಗಳಿಂದ ಆಡಳಿತ ನಡೆಸಿದ ಪ್ರಧಾನಿ ನರೇಂದ್ರ ಮೋದಿ ಅವರು ಈ ಭಾರಿಯ ಲೋಕಸಭಾ ಚುನಾವಣೆಯಲ್ಲಿ ದೇಶಾದ್ಯಂತ ೪೦೦ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲುತ್ತೇವೆಂದು ಹೇಳಿದ್ದಾರೆ. ಅದರಂತೆ ಮತಗಳಿಕೆ ಅಗಿಲ್ಲ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನಖರ್ಗೆ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷ ಇಡೀ ದೇಶದಲ್ಲಿ ಅತೀ ಹೆಚ್ಚಿನ ಸ್ಥಾನ ಗೆಲ್ಲುವ ಮೂಲಕ ಕೇಂದ್ರದಲ್ಲಿ ಅಧಿಕಾರಕ್ಕೆ ಬರುವುದು ನಿಶ್ಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಜಿಲ್ಲೆಯಲ್ಲಿ ಹಾಗೂ ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಶಾಸಕರು, ಸಂಸದರು ಶಾಶ್ವತವಾಗಿರಬೇಕಾದರೆ ಜನರ ಮನಸ್ಸನ್ನು ಗೆಲ್ಲುವ ರೀತಿ ಪ್ರತಿಯೊಬ್ಬ ಕಾರ್ಯಕರ್ತರು, ಮುಖಂಡರು ಪರಿಶ್ರಮದಿಂದ ಕಾರ್ಯನಿರ್ವಹಿಸಬೇಕು ಎಂದು ಹೇಳಿದರು.
ಚುನಾವಣೆ ಬಳಿಕ ಸಮಾಲೋಚನಾ ಸಭೆ ನಡೆಸಿದರೆ, ಹೋಬಳಿವಾರು, ಕ್ಷೇತ್ರವಾರು ಇಂತಿಷ್ಟು ಮತಗಳಿಕೆಯಾಗಿದೆ ಎಂಬ ನಿಖರವಾದ ಲೆಕ್ಕ ಸಿಗುತ್ತದೆ. ಜಾಗರ ಜಿಲ್ಲಾ ಪಂಚಾಯಿತಿ ಕ್ಷೇತ್ರ ವ್ಯಾಪ್ತಿಯಲ್ಲಿ ಈ ಚುನಾಣೆಯಲ್ಲಿ ಒಂದು ಪ್ರಯೋಗವನ್ನು ಮಾಡಿದ್ದು, ಅದು ಯಶಸ್ವಿಯಾದರೆ ಶೇ. ೯೦ರಷ್ಟು ಮತ ಕಾಂಗ್ರೆಸ್ ಪಕ್ಷಕ್ಕೆ ಲಭ್ಯವಾಗಲಿವೆ. ಮುಂದೆ ಇದೇ ಪ್ರಯೋಗವನ್ನು ಎಲ್ಲೆಡೆ ಮುಂದುವರಿಸುವುದಾಗಿ ತಿಳಿಸಿದರು.
ಕೇಂದ್ರಸರ್ಕಾರದ ಬೆಲೆ ಏರಿಕೆ ವಿರುದ್ಧವಾಗಿ ಜನ ಮತ ಚಲಾಯಿಸಬೇಕೆಂದು ತೀರ್ಮಾನಿಸಿದ್ದರು. ಈ ನಿಟ್ಟಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರ ನೇತೃತ್ವದ ಸರ್ಕಾರ ನುಡಿದಂತೆ ನಡೆದು ಅಧಿಕಾರಕ್ಕೆ ಬಂದ ೮ ತಿಂಗಳಿನಲ್ಲಿ ಐದು ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನ ಮಾಡಿದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಹೆಚ್ಚಿನ ಮತಗಳು ಸಿಕ್ಕಿವೆ ಎಂದರು.
ನೈಋತ್ಯ ಶಿಕ್ಷಕರ ಮತ್ತು ಪದವೀಧರ ಕ್ಷೇತ್ರದ ವಿಧಾನ ಪರಿಷತ್ ಚುನಾವಣೆಯಲ್ಲಿ ಇದೇ ರೀತಿ ಒಗ್ಗಟ್ಟಿನಿಂದ ಶ್ರಮಿಸೋಣ. ಜೊತೆಗೆ ಮುಂಬರುವ ಜಿಪಂ, ತಾಪಂ ಚುನಾವಣೆಯಲ್ಲಿ ಪಕ್ಷದ ಕಾರ್ಯಕರ್ತರಿಗೆ ಟಿಕೆಟ್ ನೀಡಿ ಅಭ್ಯರ್ಥಿಯನ್ನಾಗಿಸಿದ ನಂತರ ಅವರ ಪರವಾಗಿ ಎಲ್ಲರೂ ಒಗ್ಗಟ್ಟಿನಿಂದ ದುಡಿದರೆ ಅವರು ಗೆದ್ದು ಪಕ್ಷದ ಆಸ್ತಿಯಾಗುತ್ತಾರೆ ಎಂದು ತಿಳಿಸಿದರು.
ವಿಧಾನ ಪರಿಷತ್ ಮಾಜಿ ಸದಸ್ಯೆ ಗಾಯತ್ರಿ ಶಾಂತೇಗೌಡ ಮಾತನಾಡಿ, ಚುನಾವಣೆಗಳು ಬಂದರೆ ಬಿಜೆಪಿಯವರೇ ಗೆಲ್ಲುತ್ತಾರೆ ಎಂಬ ಅಸಡ್ಡೆ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರಲ್ಲಿ, ಮುಖಂಡರಲ್ಲಿ ಇತ್ತು. ಆದರೆ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಹಠ, ಛಲ, ಪರಿಶ್ರಮದಿಂದ ದುಡಿದಿದ್ದಕ್ಕೆ ಜಿಲ್ಲೆಯ ಐದು ಕ್ಷೇತ್ರದಲ್ಲೂ ಕಾಂಗ್ರೆಸ್ ಪಕ್ಷದ ಶಾಸಕರೇ ಗೆದ್ದಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದರು.
ಈಗಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ೨೫ ಕೋಟಿ ರೂ. ಅನುದಾನವನ್ನು ನೀಡಿದ್ದು, ಅದನ್ನು ಸಮರ್ಪಕವಾಗಿ ಬಳಕೆ ಮಾಡಿ ಜನರ ಆಶೋತ್ತರಗಳನ್ನು ಈಡೇರಿಸೋಣ ಎಂದು ಕರೆನೀಡಿದರು.
ಕಾಂಗ್ರೆಸ್ ಜಿಲ್ಲಾಧ್ಯಕ್ಷ ಡಾ. ಅಂಶುಮಂತ್ ಮಾತನಾಡಿ, ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್ ಮಾರ್ಗದರ್ಶನದಲ್ಲಿ ಐದು ಶಾಸಕರು, ಮುಖಂಡರು, ಕಾರ್ಯಕರ್ತರು ಉಡುಪಿ-ಚಿಕ್ಕಮಗಳೂರು ಲೋಕಸಭಾ ಚುನಾವಣೆಯಲ್ಲಿ ಅತ್ಯಂತ ಯಶಸ್ವಿಯಾಗಿ ಕೆಲಸ ಮಾಡಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕಾಂಗ್ರೆಸ್ ಪಕ್ಷದ ಮುಖಂಡರು, ಕಾರ್ಯಕರ್ತರು ಒಗ್ಗಟ್ಟಾಗಿ ವಿಶ್ವಾಸ-ಉತ್ಸಾಹದಿಂದ ಕೆಲಸ ಮಾಡಿದ್ದು, ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಕೆ. ಜಯಪ್ರಕಾಶ್ ಹೆಗ್ಡೆ ಅವರು ಗೆಲ್ಲುವುದು ನಿಶ್ಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಎಚ್.ಪಿ.ಮಂಜೇಗೌಡ, ಮಹಡಿಮನೆ ಸತೀಶ್, ಮುಖಂಡರಾದ ಎಂ.ಎಲ್ ಮೂರ್ತಿ, ಎಚ್.ಎಚ್.ದೇವರಾಜ್, ಪ್ರಮುಖರಾದ ಡಾ. ಡಿ.ಎಲ್ ವಿಜಯಕುಮಾರ್, ಎಂ.ಸಿ.ಶಿವಾನಂದಸ್ವಾಮಿ, ಕೆ.ಮಹಮದ್, ರೇಖಾ ಹುಲಿಯಪ್ಪಗೌಡ, ಅತೀಕ್‌ಖೈಸರ್, ಸೈಯದ್‌ಹನೀಫ್, ನಯಾಜ್‌ಅಹಮದ್, ಪ್ರವೀಣ್ ಬೆಟ್ಟಗೆರೆ, ಎಂ.ಡಿ.ಅಕ್ಬರ್, ಜಮ್‌ಶಿದ್‌ಖಾನ್, ಇಂದಾವರ ಲೋಕೇಶ್, ಸುಮಂತ್, ಎಂ.ಡಿ ರಮೇಶ್, ಶಿವರಾಮ್ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net