

ಬೆಟ್ಟದಪುರ: ದೇಶದ ಸಾರ್ವಭೌಮತೆ, ಏಕತೆ, ಪ್ರಜಾಸತ್ತಾತ್ಮಕ ಮೌಲ್ಯಗಳನ್ನು ಎತ್ತಿ ಹಿಡಿಯುವ, ವಿಶ್ವದಲ್ಲಿಯೇ ಬೃಹತ್ ಲಿಖಿತ ಸಂವಿಧಾನ ರಚಿಸಿದ ಭಾರತರತ್ನ ಡಾ.ಬಿ.ಆರ್.ಅಂಬೇಡ್ಕರ್ ಅವರ ಸಾಧನೆ ಅವಿಸ್ಮರಣೀಯ ಎಂದು ಪಿರಿಯಾಪಟ್ಟಣ ಕಸಾಪ ನಿಕಟ ಪೂರ್ವ ಅಧ್ಯಕ್ಷ ಗೊರಳ್ಳಿ ಜಗದೀಶ್ ತಿಳಿಸಿದರು.
ಬೆಟ್ಟದಪುರದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದಿಂದ ಇತ್ತೀಚೆಗೆ ಆಯೋಜಿಸಿದ್ದ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿ, ಭಾರತ ಸರ್ವ ಜನಾಂಗದ ಮಣಿ ಮಕುಟವಾಗಿರುವ ಸಂವಿಧಾನವು ಎರಡು ವರ್ಷ ಹನ್ನೊಂದು ತಿಂಗಳು ಹದಿನೆಂಟು ದಿನಗಳಲ್ಲಿ ಸಿದ್ಧತೆಗೊಂಡಿದೆ. ಅಮೆರಿಕ, ಜಪಾನ್, ಐರ್ಲೆಂಡ್, ಕೆನಡಾ, ಜಪಾನ್ ಇಂಗ್ಲೆಂಡ್ ಮುಂತಾದ ವಿಶ್ವದ ಹಲವು ದೇಶಗಳ ಸಂವಿಧಾನವನ್ನು ತಳಸ್ಪರ್ಶಿಯಾಗಿ, ಸುದೀರ್ಘವಾಗಿ ಅಧ್ಯಯನ ನಡೆಸಿದ ನಂತರ ಭಾರತದಂತಹ ಬಹುಸಂಸ್ಕೃತಿ ಪ್ರಧಾನವಾದ ನೆಲಕ್ಕೆ ಹೊಂದುವಂತೆ ಸಂವಿಧಾನ ಸಿದ್ಧಪಡಿಸುವಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಪರಿಶ್ರಮ, ಪ್ರತಿಭಾ ಪಾಂಡಿತ್ಯ, ದೂರದೃಷ್ಟಿ, ಸಾಮಾಜಿಕ ನ್ಯಾಯದ ಪರಿಕಲ್ಪನೆ ಅವರ್ಣನೀಯ ಎಂದರು.
ಭಾರತದ ಎಲ್ಲ ನಾಗರಿಕರಿಗೂ ಸಾಮಾಜಿಕ, ಆರ್ಥಿಕ, ರಾಜಕೀಯ, ಶೈಕ್ಷಣಿಕ, ಅಭಿವ್ಯಕ್ತಿ ಸ್ವಾತಂತ್ರ್ಯ, ಆರಾಧನಾ ಸ್ವಾತಂತ್ರ್ಯ, ಇನ್ನುಮುಂತಾದ ವಿಶೇಷ ಸ್ಥಾನಮಾನ ಕಲ್ಪಿಸಿಕೊಡುವ ಮೂಲಕ ವಿಶ್ವದ ಸರ್ವಶ್ರೇಷ್ಠ ಸಂವಿಧಾನ ಇದಾಗಿದ್ದು, ಭಾರತೀಯರ ಹೃದಯವಾಗಿದೆ. ಸಂವಿಧಾನವು 450 ವಿಧಿಗಳು, 12 ಅನುಬಂಧಗಳು, 25ಭಾಗಗಳಿದ್ದು, 105 ಬಾರಿ ತಿದ್ದುಪಡಿಯಾಗಿದೆ ಎಂದು ತಿಳಿಸಿದರು.
ಉಪಪ್ರಾಂಶುಪಾಲ ಮಂಜೇಗೌಡ, ಶಿಕ್ಷಕರಾದ ಅಮಿತಾ, ನಿಂಗರಾಜು, ಸೋಮಯ್ಯ, ಮೋಹನ್ ಕುಮಾರ್, ಕನ್ನಡ ಸಾಹಿತ್ಯ ಪರಿಷತ್ ಕಾರ್ಯದರ್ಶಿ ಆಲನಹಳ್ಳಿ ಕೆಂಪರಾಜು, ಮಮತಾ ನಾಯಕ್, ರೂಪಾಕುಮಾರಿ, ಬಿ.ಎನ್.ಜ್ಯೋತಿ, ಜಿ.ಜ್ಯೋತಿ, ಎನ್. ಕಾಂತರಾಜ್, ಅವಿನಾಶ್, ಸ್ನೇಹ, ಕಾವ್ಯಾ, ಕಾವ್ಯಶ್ರೀ, ಅಭಿ, ಇಂದ್ರಮ್ಮ, ಮಹೇಶ್ವರಿ, ನಾರಾಯಣಗೌಡ ಇತರರು ಇದ್ದರು.