

ಮೈಸೂರು: ಅಂಬೇಡ್ಕರ್ ಅವರ ನಿರಂತರ ಓದಿನ ಫಲವಾಗಿ ನಮಗೆ ವಿಶ್ವದ ಶ್ರೇಷ್ಠ ಸಂವಿಧಾನ ದೊರೆತ್ತಿದೆ ಎಂದು ಮೈಸೂರು ವಿಶ್ವವಿದ್ಯಾಲಯದ ಡಾ.ಬಿ.ಆರ್. ಅಂಬೇಡ್ಕರ್ ಅಧ್ಯಯನ ಪೀಠದ ಸಂದರ್ಶಕ ಪ್ರಾಧ್ಯಾಪಕ ಪ್ರೊ.ರಹಮತ್ ತರೀಕೆರೆ ಹೇಳಿದರು.
ನಗರದ ಬಾಸುದೇವ ಸೋಮಾನಿ ಕಾಲೇಜಿನಲ್ಲಿ ಮೈಸೂರು ವಿಶ್ವವಿದ್ಯಾಲಯದ ಡಾ.ಬಿ.ಆರ್.ಅಂಬೇಡ್ಕರ್ ಸಂಶೋಧನಾ ಹಾಗೂ ವಿಸ್ತರಣ ಕೇಂದ್ರದ ವತಿಯಿಂದ ಗುರುವಾರ ‘ಡಾ.ಬಿ.ಆರ್.ಅಂಬೇಡ್ಕರ್ ಶೈಕ್ಷಣಿಕ ಪಯಣ’ ವಿಷಯದ ಕುರಿತು ಆಯೋಜಿಸಿದ್ದ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸಂವಿಧಾನ ರಚನೆ ಸಂದರ್ಭ ಅವರು ಸಾಕಷ್ಟು ಅನಾರೋಗ್ಯಕ್ಕೆ ಒಳಗಾಗಿದ್ದರು. ಆದರೆ, ಅದ್ಯಾವುದನ್ನೂ ಲೆಕ್ಕಿಸದೆ ಅವರು ನಮಗೆ ಉತ್ತಮ ಸಂವಿಧಾನ ನೀಡಿದರು. ಅವರು ಜೀವನದ ಉದ್ದಕ್ಕೂ ಓದಿಗೆ ಹೆಚ್ಚಿನ ಮಹತ್ವ ನೀಡಿದ್ದರು. ಒಮ್ಮೆ ಅವರು ಸಿನಿಮಾ ನೋಡಲು ಹೋಗಿದ್ದರು. ಆದರೆ, ಓದುವುದು ಸಾಕಷ್ಟು ಇದೆ ಎಂದು ಅವರು ಸಿನಿಮಾದ ಅರ್ಧ ಭಾಗದಲ್ಲಿಯೇ ಎದ್ದು ಬಂದರು. ಇದು ಅಂಬೇಡ್ಕರ್ ಅವರ ಓದಿನ ಹಸಿವಿಗೆ ಸಾಕ್ಷಿಯಾಗಿದೆ. ಕೊಲಂಬಿಯಾ ವಿಶ್ವವಿದ್ಯಾಲಯದ ಗ್ರಂಥಾಲಯವನ್ನು ಅಂಬೇಡ್ಕರ್ ಅವರಷ್ಟು ಬಳಸಿಕೊಂಡ ಮತ್ತೊಬ್ಬ ವಿದ್ಯಾರ್ಥಿ ಇಲ್ಲ ಎಂದು ಹೇಳಿದರು.
ಅಂಬೇಡ್ಕರ್ ಅಸ್ಪಶ್ಯತೆಯ ಅವಮಾನ ಎದುರಿಸಿದರು. ಅಸ್ಪಶ್ಯರ ಬಿಡುಗಡೆಗೆ ಜ್ಞಾನ ಸಂಪಾದನೆ ಬಿಟ್ಟು ಬೇರೆ ದಾರಿ ಇರಲಿಲ್ಲ ಎಂದು ಅರಿತು ಅವರು ಓದಿನ ಕಡೆಗೆ ಹೆಚ್ಚಿನ ಗಮನ ಹರಿಸಿದರು. ಬಾಬಾ ಸಾಹೇಬರು ತಮ್ಮ ಹೋರಾಟಕ್ಕೆ ಜ್ಞಾನ ಬಿಟ್ಟು ಇತರೆ ದಾರಿಯಿಲ್ಲ ಎಂದಿದ್ದರು. ಜ್ಞಾನ ಸಂಪಾದನೆ, ಶಿಸ್ತಿನ ಜೀವನ, ಜೀವನವನ್ನು ಸಮಾಜಕ್ಕೆ ಮೀಸಲಿಟ್ಟು ಯಾರು ಸಹ ಬೆರಳೆತ್ತಿ ತೋರದಂತೆ ಬಾಬಾ ಸಾಹೇಬರು ಬದುಕಿದರು. ಈ ಗುಣ ಹೊಂದುವ ಯಾವುದೇ ವ್ಯಕ್ತಿ ದೊಡ್ಡ ಮನುಷ್ಯರಾಗುತ್ತಾರೆ ಎಂದರು.
ಅಂಬೇಡ್ಕರರು 32 ಪದವಿಗಳನ್ನು ಪಡೆದ ಏಕೈಕ ಜ್ಞಾನಿ. ಅವರು ಸಮಾಜಶಾಸ್ತ್ರ, ಅರ್ಥಶಾಸ್ತ್ರದ ಬಗ್ಗೆ ಹೆಚ್ಚು ಅಧ್ಯಯನ ನಡೆಸಿದ್ದಾರೆ. ಇದರ ಬಗ್ಗೆ ವಿದ್ಯಾರ್ಥಿಗಳು ತಿಳಿದುಕೊಳ್ಳಬೇಕು. ಜಗತ್ತಿನ ದೊಡ್ಡ ವಿದ್ವಂಸ ಯಾರು ಸಮೀಕ್ಷೆ ನಡೆಸಿದ ಕೊಲಿಂಬಿಯಾ ವಿಶ್ವವಿದ್ಯಾನಿಲಯದ ಡಾ.ಬಿ.ಆರ್.ಅಂಬೇಡ್ಕರ್ ಘೋಷಣೆ ಮಾಡಿದೆ. ಏಷ್ಯದಲ್ಲಿಯೇ ಖಾಸಗಿ ಗ್ರಂಥಾಲಯದಲ್ಲಿ ಅತಿ ಹೆಚ್ಚು ಗ್ರಂಥಗಳನ್ನು ಹೊಂದಿದ್ದ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಅಂಬೇಡ್ಕರ್ ಪಾತ್ರರಾಗಿದ್ದರು. ಅವರ ಬಳಿ 50 ಸಾವಿರ ಪುಸ್ತಕಗಳು ಇದ್ದವು ಎಂದು ಹೇಳಿದರು.
ಕೇಂದ್ರದ ನಿರ್ದೇಶಕ ಡಾ.ಜೆ.ಸೋಮಶೇಖರ್, ಪ್ರಭಾರ ಪ್ರಾಂಶುಪಾಲೆ ದಿವ್ಯ, ಉಪನ್ಯಾಸಕ ರಮೇಶ್ ಇದ್ದರು.