

ಹುಬ್ಬಳ್ಳಿ: ದೇವಸ್ಥಾನ, ಮಸೀದಿ, ಚರ್ಚ್ಗಳು ಎಷ್ಟು ಮುಖ್ಯವೋ ಶಿಕ್ಷಣ ಸಂಸ್ಥೆಗಳು ಕೂಡ ಅಷ್ಟೇ ಮುಖ್ಯ. ಹು-ಧಾ ಪೂರ್ವ ಕ್ಷೇತ್ರದಲ್ಲಿ ಶಿಕ್ಷಣ ಕ್ಷೇತ್ರದ ಬೆಳವಣಿಗೆಗೂ ಆದ್ಯತೆ ನೀಡಿದ್ದೇವೆ ಎಂದು ಶಾಸಕ ಪ್ರಸಾದ ಅಬ್ಬಯ್ಯ ಹೇಳಿದರು.
ನಗರದ ಬಮ್ಮಾಪುರ(ಕುಂಬಾರ) ಓಣಿಯ ಶ್ರೀ ಇಡಗುಂಜಿ ಮಹಾಗಣಪತಿ ದೇವಸ್ಥಾನದ ಬಳಿ ನೂತನ ಸಮುದಾಯ ಭವನ ನಿರ್ಮಾಣ ಮತ್ತು ದಿವಟೆಗಲ್ಲಿಯ ಶ್ರೀ ತುಳಜಾಭವಾನಿ ದೇವಸ್ಥಾನದ ಹೆಚ್ಚುವರಿ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು.
ಕ್ಷೇತ್ರದಲ್ಲಿ ಕಳೆದ 10ವರ್ಷಗಳಲ್ಲಿ ದೇವಸ್ಥಾನ, ಮಸೀದಿ, ಚರ್ಚ್ಗಳ ಅಭಿವೃದ್ಧಿ ಕಾಮಗಾರಿಗೂ ನೂರಾರು ಕೋಟಿ ರೂ. ನೀಡಲಾಗಿದೆ. ಅದಕ್ಕಿಂತ ಅಧಿಕ ಪ್ರಮಾಣದಲ್ಲಿ ಶಿಕ್ಷಣಕ್ಕೂ ಒತ್ತು ನೀಡಲಾಗಿದ್ದು, ಶೈಕ್ಷಣಿಕ ಕ್ರಾಂತಿಯೇ ಮಾಡಲಾಗಿದೆ. ಆದರೆ, ಜನರಲ್ಲಿ ಧಾರ್ವಿುಕ ಕಟ್ಟಡಗಳ ಅಭಿವೃದ್ಧಿಗೆ ಇರುವ ಕಾಳಜಿ ಶಿಕ್ಷಣ ಸಂಸ್ಥೆಗಳ ನಿರ್ವಣದಲ್ಲಿ ಇಲ್ಲ ಎಂಬುದು ಬೇಸರದ ಸಂಗತಿ ಎಂದರು.
ಶಿಕ್ಷಣವೂ ಕೂಡ ಇಂದಿನ ಅವಶ್ಯಕತೆಗಳಲ್ಲಿ ಪ್ರಮುಖವಾಗಿದೆ. ಶಿಕ್ಷಣದಿಂದಲೇ ಸಮಸಮಾಜದ ನಿರ್ಮಾಣ ಸಾಧ್ಯವಾಗಿ ಇಡೀ ಮಾನವ ಕುಲವೇ ಉದ್ಧಾರವಾಗಲು ಇರುವ ಏಕಮಾತ್ರ ಸಾಧನವಾಗಿದೆ. ಸ್ಥಳೀಯರ ಬೇಡಿಕೆಗಳಿಗೆ ಸ್ಪಂದಿಸಿ ಸರ್ಕಾರದ ಮಟ್ಟದಲ್ಲಿ ಅನುದಾನ ತರಲಾಗುವುದು ಎಂದು ಭರವಸೆ ನೀಡಿದರು.
ಪಾಲಿಕೆ ಸದಸ್ಯೆ ಪ್ರೀತಿ ಖೋಡೆ, ವಾರ್ಡ್ ಅಧ್ಯಕ್ಷ ಯಲ್ಲಪ್ಪ ಮೆಹರವಾಡೆ, ಮುಖಂಡರಾದ ರಮೇಶ ಮುತ್ತಗಿ, ಶಂಕರ ಮೋಹಿತೆ, ವಿಠ್ಠಲ ಏಕಬೋಟೆ, ರಮೇಶ ದಿವಟೆ, ವಿಠಲ ದಿವಟೆ, ಶಂಕರರಾವ್ ಹುಟಗಿ, ಜ್ಯೋತಿಬಾ ಸಿಂಧೆ, ಶ್ರೀನಿವಾಸ ಬೆಳದಡಿ, ಇತರರು ಇದ್ದರು.