ಪಕ್ಷ ಬಿಟ್ಟವರು ನಮ್ಮ ಅವಶ್ಯಕತೆ ಅಲ್ಲ

DG
Published on

ಹುಬ್ಬಳ್ಳಿ: ರಾಜ್ಯದಲ್ಲಿ ಕಾಂಗ್ರೆಸ್ ಪೂರ್ಣ ಬಹುಮತ ಹೊಂದಿದ್ದು, ಪಕ್ಷ ಬಿಟ್ಟು ಹೋದವರು ಹಾಗೂ ಬಿಜೆಪಿ-ಜೆಡಿಎಸ್​ನಿಂದ ಬರುವವರು ನಮ್ಮ ಅವಶ್ಯಕತೆ ಅಲ್ಲ. ಅವರಾಗಿಯೇ ಬರುತ್ತಿದ್ದಾರೆ ಎಂದು ಆರೋಗ್ಯ ಸಚಿವ ದಿನೇಶ ಗುಂಡೂರಾವ್ ಹೇಳಿದರು.

ಹುಬ್ಬಳ್ಳಿಯಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾವು ಯಾರನ್ನು ಕರೆದಿಲ್ಲ. ಮುಂಬೈ, ಗೋವಾಗೂ ಹೋಗಿಲ್ಲ. ಅವರಾಗಿಯೇ ಬರುತ್ತಿದ್ದಾರೆ. ಯಾರಿಂದ ಕಾಂಗ್ರೆಸ್​ಗೆ ಅನುಕೂಲವಾಗುತ್ತದೆ ಎಂಬುದನ್ನು ನೋಡಿ ಪಕ್ಷಕ್ಕೆ ಸೇರಿಸಿಕೊಳ್ಳುತ್ತೇವೆ. ಸಚಿವ ಸ್ಥಾನ, ಟಿಕೆಟ್ ಭರವಸೆ ನೀಡುವುದಿಲ್ಲ. ಮುಂಬರುವ ಲೋಕಸಭೆ ಚುನಾವಣೆಯಲ್ಲಿ 20 ಸ್ಥಾನಗಳನ್ನು ಗೆಲ್ಲುವುದು ನಮ್ಮ ಗುರಿಯಾಗಿದೆ ಎಂದರು.

ಬಿಜೆಪಿಯವರು ಕಳೆದ 4 ವರ್ಷಗಳ ಆಡಳಿತದಲ್ಲಿ ಎಲ್ಲವನ್ನು ಹಾಳು ಮಾಡಿದ್ದಾರೆ. ಆರೋಗ್ಯ ಇಲಾಖೆಯಲ್ಲೂ ಯಾವುದು ಸರಿಯಿಲ್ಲ. ಕಟ್ಟಡ ನಿರ್ಮಾಣ ಮಾಡುವುದಕ್ಕೆ ಹಣ ಖರ್ಚು ಮಾಡಿದ್ದಾರೆ. ಬಿಜೆಪಿಯವರ ದುರಾಡಳಿತವನ್ನು ಸರಿಪಡಿಸಲು ನಮಗೆ ಒಂದಿಷ್ಟು ಸಮಯ ಕೊಡಿ ಎಂದು ಹೇಳಿದರು.

ಬಿಜೆಪಿ ಆಡಳಿತದಲ್ಲಿ ಕೋವಿಡ್ ಸಂದರ್ಭದಲ್ಲಿ ಆರೋಗ್ಯ ಇಲಾಖೆಯಲ್ಲಿ ನಡೆದಿರುವ ಅಕ್ರಮಗಳ ಬಗ್ಗೆ ತನಿಖೆ ನಡೆಸಲು ಆಯೋಗ ರಚನೆ ಮಾಡಿದ್ದೇವೆ. ತನಿಖೆಗೆ ಆಯೋಗಕ್ಕೆ 3 ತಿಂಗಳ ಅವಧಿ ನೀಡಿದ್ದೇವೆ. ಶೇ. 40 ಕಮಿಷನ್ ವಿಚಾರವಾಗಿಯೂ ತನಿಖೆ ನಡೆಸಿದ್ದೇವೆ. ವಿರೋಧ ಪಕ್ಷದಲ್ಲಿದ್ದಾಗ ನಾವು ಮಾಡಿದ ಆರೋಪಗಳಿಗೆ ಸಂಬಂಧಿಸಿದಂತೆ ಅಧಿಕಾರಕ್ಕೆ ಬಂದಾಗ ಸುಮ್ಮನೆ ಕುಳಿತುಕೊಳ್ಳಲಿಲ್ಲ. ತನಿಖೆ ಕೈಗೊಂಡಿದ್ದೇವೆ ಎಂದರೆ ಬಿಜೆಪಿಯೊಂದಿಗೆ ಹೊಂದಾಣಿಕೆ ಮಾಡಿಕೊಂಡಿಲ್ಲ ಎಂಬುದನ್ನು ತಿಳಿದುಕೊಳ್ಳಿ ಎಂದರು.

ಕಾಂಗ್ರೆಸ್ ಅಧಿಕಾರಕ್ಕೆ ಬಂದು 100 ದಿನಗಳಲ್ಲಿ ನಾಲ್ಕನೇ ಗ್ಯಾರಂಟಿ ಭರವಸೆಯನ್ನು ಈಡೇರಿಸುತ್ತಿದೆ. ಇಷ್ಟು ವೇಗವಾಗಿ ನಾವು ಭರವಸೆಗಳನ್ನು ಈಡೇರಿಸುತ್ತೇವೆ ಎಂದು ಬಿಜೆಪಿ-ಜೆಡಿಎಸ್​ನವರು ಅಂದುಕೊಂಡಿರಲಿಲ್ಲ. ಹಾಗಾಗಿ ಅವರು ಸಿಡಿ, ಪೆನ್ ಡ್ರೖೆವ್ ಇದೆ ಎಂದು ಹೇಳಿ, ತೋರಿಸುತ್ತೇನೆ-ಬಿಚ್ಚಿಡುತ್ತೇನೆ ಎಂದೆಲ್ಲ ಮಾತನಾಡುತ್ತಿದ್ದಾರೆ ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಸದಾನಂದ ಡಂಗನವರ, ಮಹೇಂದ್ರ ಸಿಂಘಿ, ಬಸವರಾಜ ಕಿತ್ತೂರ, ಪ್ರಸನ್ನ ಮೀರಜಕರ, ದೊಡ್ಡರಾಮಪ್ಪ ದೊಡಮನಿ, ಡಾ. ಆನಂದ ಕಿತ್ತೂರ, ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net