

ಬಿಜೆಪಿ ಸರ್ಕಾರದ ಅವಧಿಯಲ್ಲಿ ಪಠ್ಯಪುಸ್ತಕ ವಿಚಾರದಲ್ಲಿ ಮಾಡಿರುವ ಎಡವಟ್ಟುಗಳನ್ನು ನಾವು ತಿದ್ದುತ್ತೇವೆ ಎಂದು ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ.ಮಹದೇವಪ್ಪ ಹೇಳಿದರು.
ನಗರದ ಪುರಭವನ ಆವರಣದಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆಗೆ ಮಂಗಳವಾರ ಮಾಲಾರ್ಪಣೆ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇತಿಹಾಸ ಪುರುಷರನ್ನೇ ಬಿಜೆಪಿಯವರು ಇತಿಹಾಸ ಪುರುಷರಲ್ಲವೆಂದು ಹೇಳಿದ್ದಾರೆ. ಈ ತಪ್ಪು ತಿದ್ದಬೇಕು. ಚುನಾವಣೆಗೆ ಮುನ್ನ ನಾವು ಇದನ್ನು ಹೇಳಿದ್ದೇವೆ, ಈಗ ಮಾಡುತ್ತೇವೆ. ಅವರು ಬರೆದಿದ್ದೇ ಇತಿಹಾಸವಲ್ಲ. ವಾಸ್ತವ ಸತ್ಯವನ್ನು ಪಠ್ಯದಲ್ಲಿ ಇಡುತ್ತೇವೆ. ಸತ್ಯ ಅಲ್ಲದ್ದನ್ನ್ನು ತೆಗೆದು ಹಾಕುತ್ತೇವೆ ಎಂದರು.
ಬಿಜೆಪಿಗೆ ಆಡಳಿತ ವಿರೋಧಿ ಅಲೆ ಇತ್ತು. ಅದರ ಜತೆಗೆ ನಮ್ಮ ಗ್ಯಾರಂಟಿ ಭಾಗ್ಯಗಳನ್ನು ನೋಡಿ ಜನ ನಮಗೆ ಬಹುಮತ ಕೊಟ್ಟಿದ್ದಾರೆ. ಈಗ ಬಿಜೆಪಿ ತನ್ನ ವೈಫಲ್ಯವನ್ನು ಮುಚ್ಚಿಕೊಳ್ಳಲು ಕಾಂಗ್ರೆಸ್ ಮೇಲೆ ಆರೋಪ ಮಾಡುತ್ತಿದೆ ಎಂದು ಜರಿದರು.
ಬಿಜೆಪಿ ಅವಧಿಯಲ್ಲಿ ಭ್ರಷ್ಟಾಚಾರ ಮುಗಿಲು ಮುಟ್ಟಿತ್ತು. ಜನರು ಅತೀವ ಸಂಕಷ್ಟದಲ್ಲಿದ್ದರು. ಇದರಿಂದ ಆ ಪಕ್ಷ ರಾಜ್ಯದಲ್ಲಿ ತಿರಸ್ಕೃತವಾಗಿದೆ. ಅದನ್ನು ಮರೆಮಾಚಲು ಬಿಜೆಪಿ ನಾಯಕರು ಗ್ಯಾರಂಟಿ ಕಾರ್ಡ್ ವಿಷಯವನ್ನು ದೊಡ್ಡದು ಮಾಡುತ್ತಿದ್ದಾರೆ. ಹೊಸ ಸರ್ಕಾರ ಇನ್ನೂ ಕೂತೇ ಇಲ್ಲ. ಅಷ್ಟು ತರಾತುರಿಯಲ್ಲಿ ಗ್ಯಾರಂಟಿ ಅನುಷ್ಠಾನಕ್ಕೆ ಒತ್ತಾಯ ಮಾಡುತ್ತಿದ್ದಾರೆ. ಬಿಜೆಪಿಯ ಈ ತಂತ್ರ ಜನರಿಗೆ ಅರ್ಥವಾಗುತ್ತದೆ ಎಂದು ಕುಟುಕಿದರು.
ನರೇಂದ್ರ ಮೋದಿ ಅವರು 2014ರಲ್ಲಿ ಕೊಟ್ಟ ಭರವಸೆಯನ್ನು ಈಡೇರಿಸಿದ್ದಾರಾ? ಜನರ ಖಾತೆಗೆ 15 ಲಕ್ಷ ರೂ. ಬಂತಾ? ಬಿಜೆಪಿಯವರು ಮೊದಲು ಈ ಪ್ರಶ್ನೆಗಳಿಗೆ ಉತ್ತರ ನೀಡಬೇಕು. ನಾವು ಗ್ಯಾರಂಟಿಗಳನ್ನು ಜಾರಿ ಮಾಡುತ್ತೇವೆ ಎಂದರು.