6 ಕ್ಷೇತ್ರಗಳಲ್ಲಿ ಮರಾಠರಿಗೆ ಟಿಕೆಟ್ ನೀಡಿ

gaikwad
Published on

ಹುಬ್ಬಳ್ಳಿ: ಮುಂಬರುವ ಲೋಕಸಭೆ ಚುನಾವಣೆಯಲ್ಲಿ ರಾಜ್ಯದ 6 ಕ್ಷೇತ್ರಗಳಲ್ಲಿ ಮರಾಠ ಸಮಾಜದವರಿಗೆ ಟಿಕೆಟ್ ನೀಡಬೇಕೆಂದು ಬಿಜೆಪಿ-ಕಾಂಗ್ರೆಸ್ ಪಕ್ಷವನ್ನು ಕೇಳಿದ್ದೇವೆ ಎಂದು ಕರ್ನಾಟಕ ಕ್ಷತ್ರಿಯ ಮರಾಠ ಮಹಾ ಒಕ್ಕೂಟದ ಅಧ್ಯಕ್ಷ ವಿ.ಎಸ್. ಶ್ಯಾಮಸುಂದರ ಗಾಯಕವಾಡ ಹೇಳಿದರು.

ಹುಬ್ಬಳ್ಳಿಯಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೆನರಾ ಕ್ಷೇತ್ರದಿಂದ ತಾವು, ಬೀದರ್​ನಿಂದ ಪದ್ಮಾಕರ ಪಾಟೀಲ ಅಥವಾ ವಿಜಯಕುಮಾರ ಪಾಟೀಲ, ಬಾಗಲಕೋಟೆಯಿಂದ ಮೋಹನ ಜಾಧವ ಅವರಿಗೆ ಬಿಜೆಪಿಯಿಂದ, ಧಾರವಾಡದಿಂದ ಜಿ.ಡಿ. ಘೊರ್ಪಡೆ, ಚಿಕ್ಕೋಡಿಯಿಂದ ಸುಮಿತ್ರಾ ಉಗಳಿ ಹಾಗೂ ಬೆಳಗಾವಿ ಕ್ಷೇತ್ರದಿಂದ ಮರಾಠ ಸಮಾಜದವರಿಗೆ ಟಿಕೆಟ್ ನೀಡಬೇಕೆಂದು ಕಾಂಗ್ರೆಸ್ ಪಕ್ಷವನ್ನು ಕೇಳಿದ್ದೇವೆ. ಕನಿಷ್ಠ 4 ಕ್ಷೇತ್ರಗಳಲ್ಲಿ ಸಮಾಜವರಿಗೆ ಟಿಕೆಟ್ ನೀಡದಿದ್ದರೆ ರಾಜ್ಯದ ಎಲ್ಲ 28 ಲೋಕಸಭೆ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ಬಗ್ಗೆ ತೀರ್ಮಾನ ಕೈಗೊಳ್ಳುತ್ತೇವೆ ಎಂದರು.

ರಾಜ್ಯದಲ್ಲಿ 45 ಲಕ್ಷಕ್ಕೂ ಹೆಚ್ಚು ಮರಾಠ ಸಮಾಜದ ಜನಸಂಖ್ಯೆ ಇದೆ. 10 ಲೋಕಸಭಾ ಕ್ಷೇತ್ರಗಳಲ್ಲಿ ನಾವು ನಿರ್ಣಾಯಕ ಮತದಾರರಾಗಿದ್ದೇವೆ. 2019ರಲ್ಲಿ ಬಿಜೆಪಿ 25 ಕ್ಷೇತ್ರಗಳಲ್ಲಿ ಗೆಲುವು ಸಾಧಿಸುವಲ್ಲಿ ಸಮಾಜದ ಮತಗಳು ಮಹತ್ವದ ಪಾತ್ರ ವಹಿಸಿದ್ದವು. ಆದರೆ, ಬಿಜೆಪಿ-ಕಾಂಗ್ರೆಸ್ ಪಕ್ಷಗಳು ಮರಾಠ ಸಮಾಜಕ್ಕೆ ರಾಜಕೀಯ, ಸಾಮಾಜಿಕ, ಶೈಕ್ಷಣಿಕ ಮನ್ನಣೆ ನೀಡಲಿಲ್ಲ ಎಂದು ಆರೋಪಿಸಿದರು.

ಎಂಇಎಸ್​ಗೂ ನಮಗೂ ಯಾವುದೇ ಸಂಬಂಧವಿಲ್ಲ. ಕರ್ನಾಟಕದ ಒಂದಿಂಚು ಜಾಗವು ಮಹಾರಾಷ್ಟ್ರಕ್ಕೆ ಬಿಟ್ಟು ಕೊಡಬಾರದು ಎಂಬುದು ನಮ್ಮ ನಿಲುವು. ನಾವೆಲ್ಲ ಕನ್ನಡಿಗರು. ನ. 26ರಂದು ಉತ್ತರ ಕನ್ನಡ ಜಿಲ್ಲೆಯ ಬನವಾಸಿಯಲ್ಲಿ ಒಕ್ಕೂಟದಿಂದ ಕರ್ನಾಟಕ ರಾಜ್ಯೋತ್ಸವ ಸುವರ್ಣ ಸಂಭ್ರಮ ಕಾರ್ಯಕ್ರಮ ಆಯೋಜಿಸಿದ್ದೇವೆ. ಮರಾಠ ಸಮಾಜವನ್ನು 3ಬಿ ಯಿಂದ 2ಎ (ಹಿಂದುಳಿದ ವರ್ಗ)ಗೆ ಸೇರ್ಪಡೆ ಮಾಡಬೇಕು ಹಾಗೂ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿಯನ್ನು ರಾಷ್ಟ್ರೀಯ ಕಾರ್ಯಕ್ರಮವನ್ನಾಗಿ ಆಚರಿಸಲು ಕೇಂದ್ರಕ್ಕೆ ರಾಜ್ಯ ಸರ್ಕಾರಕ್ಕೆ ಶಿಫಾರಸ್ಸು ಮಾಡಬೇಕು ಎಂಬುದು ನಮ್ಮ ಬೇಡಿಕೆಯಾಗಿದೆ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮೋಹನ ಜಾಧವ, ಜಿ.ಡಿ. ಘೊರ್ಪಡೆ, ಸುಮಿತ್ರಾ ಉಗಳಿ, ಅಪ್ಪಾರಾವ ಚವ್ಹಾಣ, ವಿ.ವಿ. ಜಗತಾಪ, ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net