

ಮೈಸೂರು: ಯಾವ ನಾಯಕರು ನಮ್ಮನ್ನು ಕಾಪಾಡುವುದಿಲ್ಲ. ಒಬ್ಬರಿಗೆ ಎದುರಾಗಿ ಮತ್ತೊಬ್ಬರನ್ನು ಹಿಡಿದುಕೊಂಡಿದ್ದೇವೆ. ಎಲ್ಲ ಪಕ್ಷಗಳ ರಾಜಕಾರಣಿಗಳು ಒಂದೇ. ಇವರನ್ನು ಎದೆಗುಂದದೆ ಪ್ರಶ್ನೆ ಮಾಡಬೇಕಿದೆ. ಇಷ್ಟು ವರ್ಷಗಳ ತಲ್ಲಣಗಳಿಗೆ ನಾವೇ ಕಾರಣರು ಎಂದು ಚಲನಚಿತ್ರ ನಟ ಪ್ರಕಾಶ್ ರೈ ಹೇಳಿದರು.
ಪ್ರಗತಿಪರ ಸಂಘಟನೆಗಳ ಒಕ್ಕೂಟದ ವತಿಯಿಂದ ಕಲಾಮಂದಿರದಲ್ಲಿ ಶುಕ್ರವಾರ ಆಯೋಜಿಸಿದ್ದ ‘ಪ.ಮಲ್ಲೇಶ್; 90 ಭಾರತ ಜನತಂತ್ರದ ಸಮಕಾಲೀನ ತಲ್ಲಣಗಳು’ ಕುರಿತು 2 ದಿನಗಳ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಮಾತನಾಡಿದರು
ಸ್ವಾತಂತ್ರ್ಯ ನಂತರ ಶಾಲಾ ಮಕ್ಕಳಿಗೆ ವೈಚಾರಿಕತೆ, ಪ್ರಶ್ನಿಸುವ ಮನೋಭಾವ ಬೆಳೆಸಿದ್ದರೆ ಇಂದು ತಲ್ಲಣಗಳನ್ನು ಎದುರಿಸುತ್ತಿರಲಿಲ್ಲ ಎಂದು ಹೇಳಿದ ಅವರು, ಪ್ರಜಾತಂತ್ರ, ಜನತಂತ್ರ ವ್ಯವಸ್ಥೆಯನ್ನು ಹನಸಗೊಳಿಸಲಿಲ್ಲ. ನಮ್ಮ ಮಕ್ಕಳಿಗೆ ಭ್ರಾತೃತ್ವ ಬೆಳೆಸಲಿಲ್ಲ. ಸುತ್ತಲಿನ ಆಗುಹೋಗುಗಳ ಬಗ್ಗೆ ಹೇಳಿಕೊಡಲಿಲ್ಲ. ಈ ತಪ್ಪುಗಳಿಂದಾಗಿಯೇ ಈ ಸಮಸ್ಯೆಗಳು ಉದ್ಭವವಾಗಿವೆ ಎಂದರು.
ಅನ್ನದಾತರು ಹಕ್ಕಿಗಾಗಿ ಹೋರಾಡಿದರೆ ಅವರು ಬರುವ ದಾರಿಗೆ ಹಳ್ಳ ತೋಡಿ ಮೊಳೆ ಇಡಲಾಗುತ್ತಿದೆ. ಯುವಕರು ಉದ್ಯೋಗ ಕೇಳಿದರೆ ಲಾಠಿಚಾರ್ಜ್ ಮಾಡಲಾಗುತ್ತಿದೆ. ಇಂತಹ ಎದೆಗುಂದಿಸುವ ತಲ್ಲಣಗಳು ಸೃಷ್ಟಿಯಾಗಿವೆ ಎಂದು ಕಳವಳ ವ್ಯಕ್ತಪಡಿಸಿದರು.
ಭವಿಷ್ಯದಲ್ಲಿ ರೈತರು ಮತ್ತು ನಿರುದ್ಯೋಗಿ ಯುವಕರ ಹೋರಾಟ ದ್ವಿಗುಣಗೊಳ್ಳಲಿದೆ. ಅವರು ದಂಗೆ ಏಳಲಿದ್ದಾರೆ. ದಾರುಣ ದಿನಗಳನ್ನು ಎದುರಿಸಬೇಕಾಗುತ್ತದೆ. ಶಾಂತಿ ಇರುವುದಿಲ್ಲ. ಇದಾಗದಂತೆ ತಡೆಯಲು ನಾವೇನು ಮಾಡಬೇಕು ಎಂಬುದು ನಮ್ಮ ಮುಂದಿರುವ ಪ್ರಶ್ನೆ ಎಂದರು.
ಕಾಮಾಲೆ ಕಣ್ಣಿಗೆ ಕಂಡಿದ್ದೆಲ್ಲ ಹಳದಿ. ಇವತ್ತು ಕಾಣುವುದೆಲ್ಲ ಕೇಸರಿ. ಜನ ಸಾಮಾನ್ಯರನ್ನು ಫುಟ್‌ಬಾಲ್‌ನಂತೆ ಒದೆಯುತ್ತಿದ್ದಾರೆ. ವರ್ತಮಾನದ ಗಾಯಗಳನ್ನು ಮರೆಯದೆ ನೆನಪಿಟ್ಟುಕೊಳ್ಳಬೇಕು ಎಂದು ಹೇಳಿದರು.
ಸಾಮಾಜಿಕ ಕಾರ್ಯಕರ್ತ ಅನ್ಶೂಲ್ ಅವಿಜಿಒತ್, ಸಾಹಿತಿ ಜಿ.ಪಿ. ಬಸವರಾಜು ಇದ್ದರು. ಎಚ್.ಜನಾರ್ಧನ್ ಮತ್ತು ತಂಡದವರು ಕ್ರಾಂತಿಗೀತೆಗಳನ್ನು ಹಾಡಿದರು.