

ದಾಬಸ್‌ಪೇಟೆ: ಗೋವು ತನ್ನ ಜೀವನದ ಕೊನೇ ಉಸಿರಿನ ತನಕ ಪರೋಪಕಾರಿಯಾಗಿ ಬದುಕುತ್ತದೆ ಎಂದು ಸಿದ್ಧಗಂಗಾ ಮಠಾಧ್ಯಕ್ಷ ಶ್ರೀ ಸಿದ್ದಲಿಂಗ ಸ್ವಾಮೀಜಿ ಹೇಳಿದ್ದಾರೆ.
ಸೋಂಪುರ ಹೋಬಳಿಯ ಶಿವಗಂಗೆಯ ಶ್ರೀ ಮೇಲಣಗವಿ ವೀರಸಿಂಹಾಸನ ಮಠದ ಆವರಣದಲ್ಲಿ ಓಂಕಾರ ಚಾರಿಟಬಲ್ ಟ್ರಸ್ಟ್ ನೂತನವಾಗಿ ನಿರ್ಮಿಸಿರುವ ಗೋಶಾಲಾ ಕಟ್ಟಡ ಉದ್ಘಾಟಿಸಿ ಮಾತನಾಡಿದರು.
ಈ ಪುಣ್ಯಭೂಮಿಯಲ್ಲಿ ಜನಿಸಿದ ಗೋವಿನಲ್ಲಿ ತಾಯಿಯನ್ನು ಹಾಗೂ ತಾಯ್ನಡನ್ನು ಕಾಣುತ್ತೇವೆ, ಗೋವಿಗೆ ಪೂಜನೀಯ ಸ್ಥಾನ ಕೊಟ್ಟು ಪೂಜಿಸಲಾಗುತ್ತದೆ. ಆದರೆ, ಅದೇ ಗೋಮಾತೆಯನ್ನು ಮಾಂಸಕ್ಕಾಗಿ ಕೊಲ್ಲಲಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ವಸತಿ ಸಚಿವ ವಿ. ಸೋಮಣ್ಣ ಮಾತನಾಡಿ, ಗೋವಿನಲ್ಲಿ ಪ್ರತಿ ಅಂಗದಲ್ಲಿ ಕೋಟಿ ದೇವರನ್ನು ಕಾಣುವ ದೇಶ ನಮ್ಮದು. ಅದನ್ನು ರಕ್ಷಿಸುವುದು ನಮ್ಮೆಲ್ಲರ ಜವಾಬ್ದಾರಿ ಎಂದ ಅವರು, ಗೋಶಾಲೆಗೆ ಟ್ರಸ್ಟ್‌ನಿಂದ ಪ್ರತಿ ವರ್ಷ 2 ಲಕ್ಷ ರೂ. ದೇಣಿಗೆ ನೀಡುವುದಾಗಿ ಭರವಸೆ ನೀಡಿದರು.
ನಂತರ ಗೋ ರಕಕ್ಷಕರಾದ ಮಹೇಂದ್ರ ಮುನ್ನೋತ್, ಮಧುಸೂದನ್ ಬಾಹಿತಿ, ಜುಗರಾಜ್ ಜೈನ್, ಮದನ್‌ಲಾಲ್ ಭಂಡಾರಿ ಮತ್ತಿತರರನ್ನು ಸನ್ಮಾನಿಸಲಾಯಿತು.
ತಹಸೀಲ್ದಾರ್ ಎಂ. ಶ್ರೀನಿವಾಸಯ್ಯ, ಗ್ರಾಪಂ ಮಾಜಿ ಅಧ್ಯಕ್ಷ ಎಸ್.ಸಿ. ಹೊನ್ನಗಂಗಶೆಟ್ಟಿ, ಅಭಾವಿಮ ಯುವಘಟಕದ ಹೋಬಳಿ ಅಧ್ಯಕ್ಷ ಉಮೇಶ್, ವೀರಶೈವ ಲಿಂಗಾಯತ ಮುಖಂಡರಾದ ವಕೀಲ ಮಹೇಶ್, ಮೋಹನ್‌ಕುಮಾರ್, ಹೊಸಳ್ಳಿ ಬಾಬು, ಯಡಿಯೂರಪ್ಪ, ಗ್ರಾಪಂನ ಮಾಜಿ ಸದಸ್ಯರಾದ ಎಸ್.ಟಿ. ಸಿದ್ದರಾಜು, ಪ್ರಭುದೇವ್, ದಿಗ್ವಿಜಯ ವಾಹಿನಿ ನಿರೂಪಕ ಪ್ರಶಾಂತ್ ರಿಪ್ಪನ್‌ಪೇಟೆ, ಶಿಕ್ಷಕ ಗೋ.ನಾ. ಸ್ವಾಮಿ ಮತ್ತಿತರರಿದ್ದರು.
ಭಾರತದ ದೇಸಿ ಗೋವು ಆರೋಗ್ಯಯುತ ಹಾಲು ಕೊಡುತ್ತವೆ. ಗೋವಿನ ಎಲ್ಲ ಉತ್ಪನ್ನಗಳು ನಮ್ಮ ದಿನನಿತ್ಯದ ಬದುಕಿಗೆ ಅವಶ್ಯಕವಾಗಿವೆ. ಹಾಗಾಗಿ ಗೋವುಗಳ ರಕ್ಷಣೆಗೆ ಮಠದಲ್ಲಿ ಗೋಶಾಲೆ ನಿರ್ಮಾಣ ಮಾಡಿದ್ದೇವೆ. ಶ್ರೀ ಮಲಯ ಶಾಂತಮುನಿ ದೇಶೀಕೇಂದ್ರ ಶಿವಾಚಾರ್ಯ ಸ್ವಾಮೀಜಿ ಮೇಲಣಗವಿ ಮಠಾಧ್ಯಕ್ಷ