ಮೋದಿ ಸುಳ್ಳಿನ 3 ಸಾವಿರ ವಿಡಿಯೋಗಳು ಸಿದ್ಧ

cong laad
Published on

ಹುಬ್ಬಳ್ಳಿ: ಪ್ರಧಾನಿ ನರೇಂದ್ರ ಮೋದಿ ಪ್ರತಿ ಭಾಷಣದಲ್ಲಿ ಸುಳ್ಳು ಹೇಳುತ್ತಾರೆ. ಅವರು ಕಳೆದ 10 ವರ್ಷಗಳಲ್ಲಿ ಹೇಳಿರುವ ಸುಳ್ಳಿನ ಕುರಿತು 3 ಸಾವಿರ ವಿಡಿಯೋ ತುಣುಕುಗಳನ್ನು ಸಿದ್ಧಪಡಿಸಿದ್ದೇವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಹೇಳಿದರು.

ಇಲ್ಲಿಯ ಆರ್.ಎನ್. ಶೆಟ್ಟಿ ಕಲ್ಯಾಣ ಮಂಟಪದಲ್ಲಿ ಶನಿವಾರ ಆಯೋಜಿಸಿದ್ದ ಹುಬ್ಬಳ್ಳಿ-ಧಾರವಾಡ ಮಹಾನಗರ ಹಾಗೂ ಧಾರವಾಡ ಗ್ರಾಮೀಣ ಜಿಲ್ಲಾ ಕಾಂಗ್ರೆಸ್ ಪದಾಧಿಕಾರಿಗಳ ಮತ್ತು ಮುಂಚೂಣಿ ಘಟಕಗಳ ಪ್ರಗತಿ ಪರಿಶೀಲನಾ ಸಭೆ ಉದ್ಘಾಟಿಸಿ ಮಾತನಾಡಿದ ಅವರು, ಬಿಹಾರದಲ್ಲಿ ಒಂದೇ ವಾರದಲ್ಲಿ 8 ಲಕ್ಷ ಶೌಚಗೃಹ ನಿರ್ವಿುಸಿದ್ದೇವೆ...2014ಕ್ಕೂ ಪೂರ್ವ ದೇಶದಲ್ಲಿ 1 ಲಕ್ಷ ಕೋಟಿ ರೂ. ಕಪ್ಪು ಹಣ ಚಲಾವಣೆಯಲ್ಲಿ ಇತ್ತು...ಹೀಗೆ ಪ್ರಧಾನಿ ಮೋದಿ ಪ್ರತಿ ಭಾಷಣದಲ್ಲಿ ಹೇಳಿರುವ ಸುಳ್ಳಿನ ಕುರಿತು ವಿಡಿಯೋ ತುಣಕುಗಳನ್ನು ಲೋಕಸಭೆ ಚುನಾವಣೆ ವೇಳೆ ಪಕ್ಷದ ಕಾರ್ಯಕರ್ತರಿಗೆ ಮುಟ್ಟಿಸಲಾಗುವುದು ಎಂದರು.

2024ರ ಲೋಕಸಭೆ ಚುನಾವಣೆ ಗೆಲ್ಲಲು ಮೋದಿ ಎಲ್ಲ ರೀತಿಯ ಕುತಂತ್ರಗಳನ್ನು ನಡೆಸಲಿದ್ದಾರೆ. ಅವುಗಳನ್ನು ಹಿಮ್ಮೆಟ್ಟಿಸುವ ಜನತೆ ನಮ್ಮದೇ ಆದ ಕಾರ್ಯತಂತ್ರ ಇರಬೇಕಿದೆ. ಮಾಧ್ಯಮಗಳು ನಮಗೆ (ಕಾಂಗ್ರೆಸ್) ಸಹಕಾರ ನೀಡುವುದಿಲ್ಲ ಎಂಬುದು ಗೊತ್ತಿರುವ ಸತ್ಯ. ಹಾಗಾಗಿ ಬಿಜೆಪಿ ಹಾಗೂ ಪ್ರಧಾನಿ ಮೋದಿ ಹಣಿಯಲು 3 ಸಾವಿರ ವಿಡಿಯೋ ತುಣುಕು ಪ್ರಬಲ ಅಸ್ತ್ರವಾಗಲಿದೆ ಎಂದು ಹೇಳಿದರು.

ಲೋಕಸಭೆ ಚುನಾವಣೆಗೆ ದಿಕ್ಸೂಚಿ

ಮಾಜಿ ಸಿಎಂ ಜಗದೀಶ ಶೆಟ್ಟರ್ ಮಾತನಾಡಿ, ಕೇಂದ್ರದಲ್ಲಿ ಕಳೆದ 10 ವರ್ಷಗಳಿಂದ ಅಧಿಕಾರದಲ್ಲಿದ್ದರೂ ಎಷ್ಟೋ ರಾಜ್ಯಗಳಲ್ಲಿ ಬಿಜೆಪಿ ಅಸ್ತಿತ್ವದಲ್ಲಿಯೇ ಇಲ್ಲ. ವಿಧಾನಸಭೆ ಚುನಾವಣೆ ಬಳಿಕ ಕರ್ನಾಟಕದಲ್ಲೂ ಬಿಜೆಪಿ ಅಸ್ತಿತ್ವ ಕಳೆದುಕೊಂಡಿದೆ. ಕಾಂಗ್ರೆಸ್ ಪಕ್ಷ ಹಲವು ರಾಜ್ಯಗಳಲ್ಲಿ ಅಸ್ತಿತ್ವದಲ್ಲಿದೆ. ಇದೀಗ ನಡೆಯುತ್ತಿರುವ ಪಂಚ ರಾಜ್ಯಗಳ ಚುನಾವಣೆ ಫಲಿತಾಂಶ 2024ರ ಲೋಕಸಭೆ ಚುನಾವಣೆಗೆ ದಿಕ್ಸೂಚಿಯಾಗಲಿದೆ ಎಂದರು.

ಶಾಸಕ ಪ್ರಸಾದ ಅಬ್ಬಯ್ಯ ಮಾತನಾಡಿ, ಚುನಾವಣೆ ವೇಳೆ ನಮ್ಮವರಿಂದಲೇ ಕಾಲೆಳೆಯುವ ಕೆಲಸವಾಗುತ್ತಿದೆ. ಅಂಥ ಸಂದರ್ಭದಲ್ಲಿ ಪಕ್ಷ ಶಿಸ್ತು ಕ್ರಮ ಕೈಗೊಳ್ಳಬೇಕು. ವಿಧಾನಸಭೆ ಚುನಾವಣೆ ವೇಳೆ ಯಾವ ಯಾವ ಲೀಡರ್ ಪಕ್ಷಕ್ಕೆ ಅನ್ಯಾಯ ಮಾಡಿದ್ದಾರೋ ಅವರನ್ನು ನಾನು ಬಿಡುವುದಿಲ್ಲ. ನೀವು ಎಷ್ಟೇ ಪ್ರಬಲವಾಗಿದ್ದರೂ ಈಗಲೇ ಬೇರೆ ಪಕ್ಷವನ್ನು ನೋಡಿಕೊಳ್ಳಬೇಕು. ಪಕ್ಷಕ್ಕೆ ದ್ರೋಹ ಮಾಡಿದವರನ್ನು ಗುರುತಿಸಿ ಉಚ್ಚಾಟನೆ ಮಾಡಿ ಎಂದರು.

ಶಾಸಕ ಎನ್.ಎಚ್. ಕೋನರಡ್ಡಿ ಮಾತನಾಡಿ, ರಾಜ್ಯ ಸರ್ಕಾರ ನಿಗಮ ಮಂಡಳಿಗೆ ಶೀಘ್ರ ನೇಮಕ ಮಾಡಬೇಕು. ಈ ನೇಮಕಾತಿಯಲ್ಲಿ 30 ಶಾಸಕರಿಗೆ ಮೊದಲು ಅವಕಾಶ ಸಿಗಲಿದೆ. ಬಳಿಕ ಪಕ್ಷಕ್ಕಾಗಿ ದುಡಿದ ಕಾರ್ಯಕರ್ತರಿಗೆ ಅವಕಾಶ ನೀಡಬೇಕು ಎಂದರು.

ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಸದಾನಂದ ಡಂಗನವರ, ಮಾಜಿ ಸಚಿವ ಎ.ಎಂ. ಹಿಂಡಸಗೇರಿ, ಮಾಜಿ ಸಂಸದ ಐ.ಜಿ.ಸನದಿ, ಮಾಜಿ ಎಂಎಲ್​ಸಿ ಮೋಹನ ಲಿಂಬಿಕಾಯಿ, ಮಾಜಿ ಶಾಸಕ ಎಂ.ಎಸ್. ಅಕ್ಕಿ, ಮಾಧ್ಯಮ ವಕ್ತಾರ ಗಂಗಾಧರ ದೊಡ್ಡವಾಡ, ಅನ್ವರ್ ಮುಧೋಳ, ಮಹೇಂದ್ರ ಸಿಂಘಿ, ಅನಿಲಕುಮಾರ ಪಾಟೀಲ, ಅಲ್ತಾಫ್ ಹಳ್ಳೂರ, ನಾಗೇಶ ಕಲಬುರ್ಗಿ, ಮಲ್ಲಿಕಾರ್ಜುನ ಸಾವಕಾರ, ದೀಪಾ ಗೌರಿ, ಪ್ರಕಾಶ ಬುರಬುರೆ, ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net