ಅಭಿವೃದ್ಧಿ ಸಂಬಂಧ ಚರ್ಚೆಗೆ ನಾವು ಸಿದ್ಧ: ಆಯನೂರು

ayanoor manjunath
ಆಯನೂರು ಮಂಜುನಾಥ್, ಕೆಪಿಸಿಸಿ ವಕ್ತಾರ
Published on

ಶಿವಮೊಗ್ಗ: ಅಭಿವೃದ್ಧಿಗೆ ಸಂಬಂಧಿಸಿದಂತೆ ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಬಹಿರಂಗ ಚರ್ಚೆಗೆ ಕರೆದಿದ್ದು, ನಾವು ಚರ್ಚೆಗೆ ಸಿದ್ಧರಿದ್ದೇವೆ ಎನ್ನುವ ಮೂಲಕ ಕೆಪಿಸಿಸಿ ವಕ್ತಾರ ಆಯನೂರು ಮಂಜುನಾಥ್ ಶುಕ್ರವಾರ ಬಿವೈಆರ್ ಪಂಥಾಹ್ವಾನವನ್ನು ಸ್ವೀಕರಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಭಿವೃದ್ಧಿ ಬಗ್ಗೆ ನಾವು ಚರ್ಚೆಗೆ ಸಿದ್ಧ. ಆದರೆ ಚರ್ಚೆಗೆ ಬರುವಷ್ಟು ಸಮಯ ಸಂಸದರ ಬಳಿ ಇದೆಯೇ ಎಂದು ಪ್ರಶ್ನಿಸಿದ ಆಯನೂರು, ಜಿಲ್ಲೆಯ ಅಭಿವೃದ್ಧಿ ಕಾಂಗ್ರೆಸ್ ಆಡಳಿತದ ಅವಧಿಯಲ್ಲೂ ನಡೆದಿತ್ತು ಎಂದು ಹೇಳಿದರು.
ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಅವರಿಗೆ ಸಂಸ್ಕೃತಿಯೇ ಇಲ್ಲ ಎಂದು ಬಿ.ವೈ.ರಾಘವೇಂದ್ರ ಹೇಳಿದ್ದಾರೆ. ಅವರ ಪಕ್ಷದ ಕೆ.ಎಸ್.ಈಶ್ವರಪ್ಪ ಅವರು ಯಡಿಯೂರಪ್ಪ ಬಗ್ಗೆ ಸಂಸ್ಕೃತಿ ಹೀನವಾಗಿ ಮಾತನಾಡಿದಾಗ ಇವರು ಏಕೆ ಖಂಡಿಸಲಿಲ್ಲ ಎಂದು ಪ್ರಶ್ನಿಸಿದರು. ಮಾಜಿ ಮುಖ್ಯಮಂತ್ರಿ ಎಸ್.ಬಂಗಾರಪ್ಪ ಅವರ ಸಾಧನೆ ಬಗ್ಗೆ ಲಘುವಾಗಿ ಮಾತನಾಡುವುದು ಸಲ್ಲದು. ಕೃಷಿ ಪಂಪ್‌ಸೆಟ್‌ಗೆ ಕರೆಂಟ್ ಕೊಟ್ಟಿದ್ದು ಬಂಗಾರಪ್ಪ ಅವರು. ಅದನ್ನು ಮುಂದುವರಿಸಿದ್ದು ಬಿಜೆಪಿಯವರು ಎಂದು ಹೇಳಿದರು.
ಮಾಜಿ ಎಂಎಲ್‌ಸಿ ಆರ್.ಪ್ರಸನ್ನಕುಮಾರ್, ಮಾಜಿ ಮೇಯರ್ ಎಸ್.ಕೆ. ಮರಿಯಪ್ಪ, ಜಿಪಂ ಮಾಜಿ ಸದಸ್ಯ ಕಲಗೋಡು ರತ್ನಾಕರ್, ಕೆಪಿಸಿಸಿ ಸದಸ್ಯ ವೈ.ಎಚ್.ನಾಗರಾಜ್ ಮುಂತಾದವರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net