

ಕೋಲಾರ: ಟೊಮ್ಯಾಟೊ ಬೆಳೀತೀವಿ, ಕೋಳಿ ಸಾಕ್ತೀವಿ, ಕೋಳಿ ಮೊಟ್ಟೆ ವ್ಯಾಪಾರವನ್ನೂ ಮಾಡ್ತೀವಿ... ಇದ್ಯಾವುದೂ ಮಣ್ಣಿನ ಮಕ್ಕಳಾದ ನಮಗೆ ಅವಮಾನದ ಕೆಲಸವೆನಿಸಿಲ್ಲ, ಸ್ವಾಭಿಮಾನದ ಬದುಕು ನಮ್ಮದು. ನಿನ್ನಂತೆ ಅರ್ಧರಾತ್ರೀಲಿ, ಅರೆಬೆತ್ತಲಾಗಿ ನಡುರಸ್ತೇಲಿ ಓಡಿಹೋದವರು ನಾವಲ್ಲ ಎಂದು ಮಾಜಿ ಸಚಿವ ಆರ್.ವರ್ತೂರು ಪ್ರಕಾಶ್ಗೆ ವಿಧಾನಪರಿಷತ್ ಸದಸ್ಯ ಇಂಚರ ಗೋವಿಂದರಾಜು ತಿರುಗೇಟು ನೀಡಿದರು.
ನಗರದ ಪತ್ರಕರ್ತರ ಭವನದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮೂರು ದಿನದ ಹಿಂದೆ ಬಿಜೆಪಿ ಸಭೆಯೊಂದರಲ್ಲಿ ವರ್ತೂರು ಪ್ರಕಾಶ್ ನಮ್ಮ ವೈಯಕ್ತಿಕ ವಿಚಾರಗಳನ್ನು ತೆಗೆದು ನಾಲಿಗೆ ಹರಿಬಿಟ್ಟಿದ್ದಾರೆ. ಎಲ್ಲ ಪಕ್ಷಗಳನ್ನು ನೋಡಿ ಛೀಮಾರಿ ಹಾಕಿಸಿಕೊಂಡು ಬಂದಿರುವ ಈ ಮನುಷ್ಯ ನಮ್ಮ ಕುರಿತು ಮಾತನಾಡುವುದು ಬಿಟ್ಟು ನಮ್ಮ ವೃತ್ತಿ, ಬದುಕನ್ನೆಲ್ಲ ಎಳೆತರುತ್ತಿರುವುದು ಅವರ ಹೀನ ಸಂಸ್ಕಾರ ತೋರಿಸುತ್ತದೆ. 2 ಬಾರಿ ಶಾಸಕ, ಒಮ್ಮೆ ಸಚಿವನಾದರೂ ಸರಿಯಾಗಿ ವರ್ತಿಸುವುದನ್ನು ಕಲಿಯದೆ ಅಹಂನಲ್ಲಿ ಮಾತನಾಡುತ್ತಿದ್ದ್ದಾರೆ. ಸಂಸ್ಕಾರವಿಲ್ಲದ ನಾಲಿಗೆ ಎಂಬುದನ್ನು ಜನರು ಅರ್ಥೈಸಿಕೊಂಡು ಕ್ಷೇತ್ರದಿಂದ ಮತ್ತೊಮ್ಮೆ ಗೇಟ್ಪಾಸ್ ಕೊಡಲಿದ್ದಾರೆ ಎಂದರು.
ವರ್ತೂರು ಪ್ರಕಾಶ್ 3ನೇ ಬಾರಿಗೆ ಬಿಜೆಪಿ ಬಾಗಿಲು ತಟ್ಟಿದ್ದಾರೆ. ಮೊದಲು ಹೋಗಿದ್ದಾಗ ಇವರ ದುರ್ನಡತೆಯಿಂದಾಗಿ ಬಿ.ಎಸ್.ಯಡಿಯೂರಪ್ಪ ಮನೆಯಲ್ಲಿ ಗನ್ಮ್ಯಾನ್ ಕತ್ತು ಹಿಡಿದು ಹೊರಗೆ ತಳ್ಳಿದ್ದರು. ಸಚಿವರಾದರೂ ನಡತೆ ಸರಿಪಡಿಸಿಕೊಳ್ಳದಿದ್ದರಿಂದ ಎರಡನೇ ಬಾರಿ ಛೀಮಾರಿ ಹಾಕಿ ಹೊರಗೆ ಕಳುಹಿಸಿದ್ದರು. ಇದೀಗ ಉಸ್ತುವಾರಿ ಸಚಿವರ ಆಶೀರ್ವಾದದಿಂದ ಬಿಜೆಪಿಗೆ ಸೇರಿದ್ದಾರೆ. ಕ್ಷೇತ್ರದ ಬಗ್ಗೆ ಕಾಳಜಿಯಿಲ್ಲ ಎಂದು ವಾಚಾಮಗೋಚರ ವಾಗ್ದಾಳಿ ನಡೆಸಿದರು.
ಮುಖಂಡ ಸಿಎಂಆರ್ ಶ್ರೀನಾಥ್ ಮಾತನಾಡಿ, 2018ರ ಚುನಾವಣೆಯಲ್ಲಿ ಸೋತ ಬಳಿಕ ಅಜ್ಞಾತವಾಗಿದ್ದ ವರ್ತೂರು ಪ್ರಕಾಶ್ ಕರೊನಾ ಸಂದರ್ಭದಲ್ಲಿಯೂ ಜನರ ಕಣ್ಣೀರು ಒರೆಸಲಿಲ್ಲ. ಟೊಮ್ಯಾಟೊ ಬೆಳೆಯುವವನು, ಮಾರುವವನೆಂದು ಅಪಮಾನಿಸಿದರೆ ರೈತರು, ವ್ಯಾಪಾರಸ್ಥರು ಅವರ ಮನೆ ಮುಂದೆ ಬೃಹತ್ ಪ್ರತಿಭಟನೆ ನಡೆಸುತ್ತಾರೆ ಎಂದರು.
ಹಳೆಯ ಕಾರ್ಯಕರ್ತರ ಫೋಟೋ ವೈರಲ್ ಮಾಡಿ ಜೆಡಿಎಸ್, ಕಾಂಗ್ರೆಸ್ ತೊರೆದು ಬಿಜೆಪಿಗೆ ಸೇರ್ಪಡೆ ಎಂದು ಪ್ರಚಾರ ಮಾಡುತ್ತಿದ್ದು, ಅದರಲ್ಲಿ ಜೆಡಿಎಸ್ನವರು ಯಾರೂ ಇಲ್ಲ. ಮೂಲ ಬಿಜೆಪಿಯವರ ಅಸಮಾಧಾನ ಕಟ್ಟೆಹೊಡೆಯುವುದನ್ನು ಶೀಘ್ರದಲ್ಲೇ ನೋಡಬಹುದು. ಕಳೆದ ಚುನಾವಣೆಯಲ್ಲಿ 3ನೇ ಸ್ಥಾನಕ್ಕೆ ತಲುಪಿದ್ದರೂ, ಬುದ್ಧಿ ಕಲಿಯದೆ, ನನಗೆ ಮುಸಲ್ಮಾನರ ಮತಗಳು ಬೇಕಿಲ್ಲ ಎಂದು ಹೇಳಿದ್ದು, ಮುಂದಿನ ಚುನಾವಣೆಯಲ್ಲಿ 4ನೇ ಸ್ಥಾನಕ್ಕೆ ಹೋಗಲಿದ್ದಾರೆ ಎಂದು ಭವಿಷ್ಯ ನುಡಿದರು.
ಜೆಡಿಎಸ್ ತಾಲೂಕು ಅಧ್ಯಕ್ಷೆ ಕುರ್ಕಿ ರಾಜೇಶ್ವರಿ, ಜಿಲ್ಲಾ ಕಾರ್ಯಾಧ್ಯಕ್ಷ ಬಣಕನಹಳ್ಳಿ ನಟರಾಜ್, ನಗರಸಭೆ ಅಧ್ಯಕ್ಷೆ ಶ್ವೇತಾ ಶಬರೀಶ್, ಸದಸ್ಯ ರಾಕೇಶ್, ಮುಖಂಡರಾದ ವಕ್ಕಲೇರಿ ಇ.ರಾಮಚಂದ್ರ ಮತ್ತಿತರರಿದ್ದರು.
ಸಿದ್ದರಾಮಯ್ಯ ಬಂದ್ರೂ ಸೋಲಿಸ್ತೀವಿ: ಸಿದ್ದರಾಮಯ್ಯ ಕೋಲಾರ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿದರೆ ಸೋಲಿನ ರುಚಿ ತೋರಿಸ್ತೀವಿ ಎಂದು ಇಂಚರ ಗೋವಿಂದರಾಜು ತಿಳಿಸಿದರು.
ಒಗ್ಗಟ್ಟು ಮತ್ತು ಸಂಘಟನೆಯಲ್ಲಿ ಬಲಿಷ್ಠವಾಗಿರುವ ಜೆಡಿಎಸ್ಗೆ ಪ್ರತಿ ಬೂತ್ ಮಟ್ಟದಲ್ಲಿ ಕಾರ್ಯಕರ್ತರ ಪಡೆ ಇದೆ. ಎಂ.ವಿ.ಕೃಷ್ಣಪ್ಪ, ಪಿ.ವೆಂಕಟಗಿರಿಯಪ್ಪ, ಸಿ.ಬೈರೇಗೌಡರಂತಹ ಮುತ್ಸದ್ಧಿಗಳನ್ನು ಕಂಡಿರುವ ಈ ನೆಲದಲ್ಲಿ ವಲಸಿಗರಿಗೆ ಮಣೆ ಹಾಕುವುದಿಲ್ಲ ಎಂದರು.
ಚಾಮುಂಡೇಶ್ವರಿ ಕ್ಷೇತ್ರ ಅಭಿವೃದ್ಧಿಪಡಿಸಿದ್ದರೆ ಸಿದ್ದರಾಮಯ್ಯ ಅಲ್ಲಿ ಏಕೆ ಸೋಲುತ್ತಿದ್ದರು? ಕೆಲವರು ಅವರನ್ನು ಬಲಿಪಶು ಮಾಡಲು ಇಲ್ಲಿಗೆ ಕರೆತರಲು ಯತ್ನಿಸುತ್ತಿದ್ದಾರೆ. ಸಿದ್ದರಾಮಯ್ಯ ಸ್ಪರ್ಧಿಸದಿದ್ದರೆ ಕಾಂಗ್ರೆಸ್ನಿಂದ ತಾನೇ ಸ್ಪರ್ಧಿಸುವುದಾಗಿ ಶಾಸಕ ಕೆ.ಶ್ರೀನಿವಾಸಗೌಡ ಹೇಳಿಕೊಂಡಿದ್ದಾರೆ. ಅವರೇನಾದರೂ ನಿಂತು ಗೆದ್ದರೆ ಜೀವಮಾನ ಪರ್ಯಂತ ಅವರ ಮನೆ ಕಾವಲುಗಾರನಾಗಿರುತ್ತೇನೆ ಎಂದು ಪುನರುಚ್ಚರಿಸಿದರು.
ಕೆಎಚ್ಎಂ ಆಸ್ತಿಯಿದ್ದಂತೆ: ಕೇಂದ್ರ ಮಾಜಿ ಸಚಿವ ಕೆ.ಎಚ್.ಮುನಿಯಪ್ಪ ಯಾವ ಪಕ್ಷದಲ್ಲಿದ್ದರೂ ಆಸ್ತಿಯಿದ್ದಂತೆ. ಅವರು ಜೆಡಿಎಸ್ಗೆ ಬಂದರೆ ಎಲ್ಲರೂ ಸ್ವಾಗತಿಸುತ್ತೇವೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ಅವರಿಗೆ ಪ್ರಾಮಾಣಿಕವಾಗಿ ಮತಹಾಕಿಸಿದೆ. ಆದರೆಸೋಲು-ಗೆಲುವು ನಮ್ಮ ಕೈಯ್ಯಲ್ಲಿ ಇಲ್ಲವಲ್ಲ ಎಂದು ಹೇಳಿದರು.