

ಬೆಂಗಳೂರು: ವಿವಾದಿತ ಟಿಪ್ಪು ಜಯಂತಿ ಕೈಬಿಟ್ಟ ರಾಜ್ಯ ಸರ್ಕಾರ ಇದೀಗ ತನ್ನ ನಿಲುವಿಗೆ ಬದ್ಧವಾಗಿರುವ ಅಗತ್ಯ ಮಾಹಿತಿ ಕ್ರೋಡೀಕರಿಸಿ ಅದನ್ನು ನ್ಯಾಯಾಲಯಕ್ಕೆ ಸಲ್ಲಿಸಲು ನಿರ್ಧರಿಸಿದೆ. ಬುಧವಾರ ನಡೆದ ಸಂಪುಟ ಸಭೆಯಲ್ಲಿ ಈ ಬಗ್ಗೆ ಸುದೀರ್ಘ ಚರ್ಚೆ ನಡೆದಿದ್ದು, ತನ್ನ ನಿರ್ಧಾರಕ್ಕೆ ಪೂರಕವಾದ ಅಂಶಗಳ ಕುರಿತಂತೆ ವಿಚಾರ ವಿನಿಮಯ ಮಾಡಿಕೊಂಡು ಒಮ್ಮತಾಭಿಪ್ರಾಯಕ್ಕೆ ಬಂದಿದೆ ಎಂದು ಮೂಲಗಳು ತಿಳಿಸಿವೆ.
ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿದ್ದ ಟಿಪ್ಪು ಜಯಂತಿಯನ್ನು ಬಿಜೆಪಿ ಸರ್ಕಾರ ರದ್ದುಗೊಳಿಸಿತ್ತು. ಸರ್ಕಾರದ ನಿರ್ಧಾರ ವಿರುದ್ಧ ಕೆಲವರು ಹೈಕೋರ್ಟ್ ಮೆಟ್ಟಿಲೇರಿದ್ದರು. ತನ್ನ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದ ಸರ್ಕಾರ, 2015ಕ್ಕೂ ಮುನ್ನ ರಾಜ್ಯದಲ್ಲಿ ಟಿಪ್ಪು ಜಯಂತಿ ಆಚರಣೆ ಇರಲಿಲ್ಲ. ಆಗ ಇದ್ದ ಸರ್ಕಾರ ರಾಜ್ಯಾದ್ಯಂತ ಆಚರಣೆ ಮಾಡಲು ಆದೇಶ ಹೊರಡಿಸಿತ್ತು. ಜಯಂತಿ ಆಚರಣೆ ರದ್ದು ಮಾಡಿರುವುದು ನಮ್ಮ ನೀತಿ- ನಿರ್ಧಾರದ ವಿಚಾರ ಎಂದು ವಾದಿಸಿತ್ತು. ಆದರೆ, ನೀತಿ -ನಿರ್ಧಾರದ ವಿಚಾರದಲ್ಲಿ ನ್ಯಾಯಾಲಯ ಮಧ್ಯ ಪ್ರವೇಶ ಮಾಡುವುದಿಲ್ಲ. ನಿರ್ಧಾರ ಕೈಗೊಳ್ಳುವ ಪ್ರಕ್ರಿಯೆಯನ್ನು ಪರಾಮರ್ಶೆ ನಡೆಸಲಾಗುವುದು. 4 ವರ್ಷಗಳಲ್ಲಿ ಸರ್ಕಾರ ಏಕೆ ತನ್ನ ನಿರ್ಧಾರ ಬದಲಿಸಿತು ಎಂದು ನ್ಯಾಯಾಲಯ ಕೇಳಿತ್ತು. ಅರ್ಜಿದಾರರ ಪರ ವಕೀಲರು, ಸರ್ಕಾರ ಸಕಾರಣ ನೀಡದೆ ಜಯಂತಿ ರದ್ದುಗೊಳಿಸಿದೆ ಎಂದು ಆರೋಪಿಸಿದ್ದರು.
ಈ ಪ್ರಕರಣದಲ್ಲಿ ಸರ್ಕಾರ ತನ್ನ ನಿಲುವನ್ನು ನ್ಯಾಯಾಲಯದಲ್ಲಿ ಸಮರ್ಥಿಸಿಕೊಳ್ಳಬೇಕಿದ್ದು, ಹಿನ್ನೆಲೆಯಲ್ಲಿ ಸೂಕ್ತ ಕಾರಣದ ಬಗ್ಗೆ ಸಂಪುಟದಲ್ಲಿ ಚರ್ಚೆ ನಡೆಸಿದೆ. ಕಾನೂನು ಸುವ್ಯವಸ್ಥೆ, ಕೊಡಗಿನಲ್ಲಿ ಟಿಪು್ಪ ಮಾಡಿದ ದಾಳಿಯನ್ನು ದಾಖಲೆಯಾಗಿ ಪರಿಗಣಿಸಲಾಗಿದೆ ಎಂಬ ಅಂಶವನ್ನು ನ್ಯಾಯಾಲಯಕ್ಕೆ ಮನವರಿಕೆ ಮಾಡಿಕೊಡಲಾಗುತ್ತದೆ ಎನ್ನಲಾಗಿದೆ.
ಸಚಿವ ಸಂಪುಟದ ಪ್ರಮುಖ ನಿರ್ಣಯಗಳು