

ಸಿಂದಗಿ:ನಗರದ 842ರಲ್ಲಿ ವಾಸವಾಗಿರುವ ಕುಟುಂಬಗಳ ಮಹಿಳೆಯರು, ನಾವು ಬಡವರು.. ನಮ್ಮ ಕೈಯಲ್ಲಿ ದುಡ್ಡು ಕೊಡುವುದು ನೀಗದು. ಇದು ಪುರಸಭೆಯೇ ಹಕ್ಕು ಪತ್ರ ನೀಡಿ ನಮಗೆ ಕೊಟ್ಟಿದ್ದು, ನಮ್ಮ ಮನೆಗಳನ್ನು ಉಳಿಸಿ. ಇಲ್ಲವೇ ವಿಷ ಕೊಟ್ಟರೆ ಉಪಕಾರವಾದೀತು ಎಂದು ಇಂಡಿಯ ಉಪವಿಭಾಗಾಧಿಕಾರಿ ಅನುರಾಧಾ ವಸ್ತ್ರದ ಅವರ ಮುಂದೆ ಅಲವತ್ತುಕೊಂಡರು.
ಇಲ್ಲಿನ 842ರ ಆಸ್ತಿಯಲ್ಲಿನ 84 ಕುಟುಂಬಗಳನ್ನು ತೆರವುಗೊಳಿಸುವಂತೆ ನ್ಯಾಯಾಲಯ ನೀಡಿದ ಆದೇಶದನ್ವಯ ಗುರುವಾರ ಮಧ್ಯಾಹ್ನ ಪುರಸಭೆ ಅಧಿಕಾರಿ ಹಾಗೂ ಸಿಬ್ಬಂದಿ ಆ. 23ರೊಳಗೆ ತೆರವುಗೊಳಿಸುವ ಆದೇಶವನ್ನು ಅಲ್ಲಿನ ಕುಟುಂಬಗಳ ಮನೆ ಬಾಗಿಲಿಗೆ ಲಗತ್ತಿಸಿದರು.
ಇಂಡಿ ಉಪವಿಭಾಗಾಧಿಕಾರಿ ಅನುರಾಧಾ ವಸ್ತ್ರದ ಮಾತನಾಡಿ, ನಿಮ್ಮನ್ನು ತೆರವುಗೊಳಿಸುವುದು ನಮಗೂ ಇಷ್ಟವಿಲ್ಲ. ಆದರೆ ನ್ಯಾಯಾಲಯದ ಆದೇಶದ ಹಿನ್ನೆಲೆಯಲ್ಲಿ ಇಲ್ಲಿಗೆ ಭೇಟಿ ನೀಡಿರುವೆ. ನ್ಯಾಯಾಲಯದ ಆದೇಶವನ್ನು ನಾವೆಲ್ಲರೂ ಪಾಲಿಸಲೇಬೇಕು. ಇಲ್ಲಿನ ತೆರವು ಕಾರ್ಯ ಮುಖ್ಯಾಧಿಕಾರಿಗಳೇ ಮಾಡಬೇಕಿದೆ. ಈ ಹಿನ್ನೆಲೆಯಲ್ಲಿ ಯಾವುದೇ ಅಹಿತಕರ ಟನೆ ನಡೆಯದಂತೆ ಜಿಲ್ಲಾಧಿಕಾರಿಗಳ ಸೂಚನೆಯನ್ವಯ ನಾನು ಮುಖ್ಯಾಧಿಕಾರಿಗಳ ಬೆಂಬಲಕ್ಕೆ ಬಂದಿರುವುದಾಗಿ ತಿಳಿಸಿದರು.
ಆಗ ಮುಖ್ಯಾಧಿಕಾರಿಗಳ ಬೆಂಬಲಕ್ಕೆ ಬಂದಿದ್ದೀರಿ. ನಮ್ಮ ಬೆಂಬಲಕ್ಕೆ ಯಾರಿದ್ದಾರೆ ಎಂದು ಪ್ರಶ್ನಿಸಿದ ಕೆಲ ಮಹಿಳೆಯರು, ನೋಡಿ ನೀವು ಮುಖ್ಯಾಧಿಕಾರಿ ಬೆಂಬಲಕ್ಕೆ ನಿಲ್ಲುತ್ತೀರೋ, ಬಡವರ ಪರ ನಿಲ್ಲುತ್ತೀರೋ?, ಇಲ್ಲಿಂದ ಹೋಗಿ ಎಂದರೆ ನಾವೆಲ್ಲಿ ಹೋಗಬೇಕು? ಕೊಡೋದು ಪುರಸಭೆಯೇ..ಕಿತ್ತು ಎನ್ನೋದು ಪುರಸಭೆಯೇ? ಇದು ಯಾವ ನ್ಯಾಯ? ಇಷ್ಟು ದಿನವೂ ಪುರಸಭೆ ಯಾವುದೇ ನೋಟೀಸ್ ಕೊಟ್ಟಿಲ್ಲ. ಇಂದೇ ನೋಟೀಸ್ ಮನೆಗೆ ಹಚ್ಚಿದ್ದಾರೆ ಎಂದರು.
ಆಗ ಮುಖ್ಯಾಧಿಕಾರಿಗಳನ್ನು ಎಸಿ ಅವರು ಯಾವ್ಯಾಗ್ಯಾವಗ ನೋಟಿಸ್ ಕೊಟ್ಟಿದ್ದೀರಿ ಎಂದು ಪ್ರಶ್ನಿಸಿದಾಗ, ಮುಖ್ಯಾಧಿಕಾರಿ ಎಸ್. ರಾಜಶೇಖರ ಅವರು ಕೊಟ್ಟಿದ್ದೇವೆ ಮೇಡಮ್ ಎಂದು ಉತ್ತರಿಸಿದಾಗ ಅಲ್ಲಿ ನೆರೆದಿದ್ದ ಎಲ್ಲ ಕುಟುಂಬಸ್ಥರು, ಯಾವಾಗ ಕೊಟ್ಟಿದ್ದೀರಿ ಎಂದಾಗ, ತಪ್ಪೊಪ್ಪಿಕೊಂಡ ಮುಖ್ಯಾಧಿಕಾರಿ, ಇದೇ ಮೊದಲು ನೋಟಿಸ್ ಕೊಟ್ಟಿದ್ದೇನೆ ಎಂದರು.
ಸ್ಥಳದಲಿದ್ದ ಪುರಸಭೆ ಮಾಜಿ ಉಪಾಧ್ಯಕ್ಷ ಶಾಂತವೀರ ಬಿರಾದಾರ ಮಾತನಾಡಿ, ಮೇಡಂ ಈ ಅನ್ಯಾಯಕ್ಕೆ ಪುರಸಭೆಯೇ ನೇರ ಹೊಣೆ. ಆದರೆ ದಿಢೀರ್ನೆ ತೆರವುಗೊಳಿಸುವುದು ಹೇಗೆ? ಆದರೆ, ಕೆಲವು ದಿನ ಕಾಲಾವಕಾಶ ನೀಡಿ ಎಂದು ಮನವಿ ಮಾಡಿದರು. ಆಗ ಮುಖ್ಯಾಧಿಕಾರಿ, ಆ.23 ರಂದು ನ್ಯಾಯಾಧೀಶರ ಮುಂದೆ ತೆರವಿಗೆ ಕಾಲಾವಕಾಶ ಕೇಳಿದ್ದಾರೆ ಎಂದು ಮನವಿ ಮಾಡುವೆ. ಆಗ ನ್ಯಾಯಾಧೀಶರು ಏನೂ ಆದೇಶ ಮಾಡುತ್ತಾರೋ ಹಾಗೆ ಪಾಲಿಸುವೆ ಎಂದರು.
ಡಿವೈಎಸ್ಪಿ ಎಚ್. ಜಗದೀಶ, ವಾರ್ಡ್ ಸದಸ್ಯ ಗೊಲ್ಲಾಳ ಬಂಕಲಗಿ, ಖಾಜು ಬಂಲಗಿ ಸೇರಿ ಹಲವಾರು ನಿವಾಸಿಗಳು ಇದ್ದರು.
ಸಿಂದಗಿ ಪಟ್ಟಣದ ಆಸ್ತಿ ನಂ. 842ರಲ್ಲಿನ ನಿವಾಸಿಗಳನ್ನು ಎಸಿ ಅನುರಾಧಾ ವಸ್ತ್ರದ ಭೇಟಿ ಮಾಡಿದರು. ಡಿವೈಎಸ್ಪಿ ಎಚ್. ಜಗದೀಶ, ಮುಖ್ಯಾಧಿಕಾರಿ ರಾಜಶೇಖರ, ಸದಸ್ಯ ಶಾಂತವೀರ ಬಿರಾದಾರ, ಗೊಲ್ಲಾಳ ಬಂಕಲಗಿ ಮತ್ತಿತರರಿದ್ದರು.