

ಹಾಸನ: ಸರ್ಕಾರಿ ಶಾಲಾ- ಕಾಲೇಜುಗಳ ಅಭಿವೃದ್ಧಿಗಾಗಿ ರೋಟರಿ ಸಂಸ್ಥೆ ತನ್ನದೇ ಆದ ಕೊಡುಗೆ ನೀಡುತ್ತಾ ಬರುತ್ತಿದ್ದು, ಮುಂದಿನ ದಿನಗಳಲ್ಲಿ ಸರ್ಕಾರಿ ಶಿಕ್ಷಣ ಸಂಸ್ಥೆಗಳ ಅಭಿವೃದ್ಧಿಗೆ ಸಹಕಾರಿಯಾಗುವಂತಹ ಯೊಜನೆಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ರೋಟರಿ ಜಿಲ್ಲಾ ಗೌವರ್ನರ್ ದೇವ್ ಆನಂದ್ ಹೇಳಿದರು.
ನಗರದ ಸಮೀಪದ ದೇವರಾಯಪಟ್ಟಣದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ, ದೊಡ್ಡ ಮಂಡಿಗನಹಳ್ಳಿ ಸರ್ಕಾರಿ ಶಾಲಾ ಆವರಣದಲ್ಲಿ ಸಸಿ ನೆಡುವ ಕಾರ್ಯಕ್ರಮ ಹಾಗೂ ನಗರದ ಎಂಜಿ ರಸ್ತೆಯಲ್ಲಿರುವ ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ರೋಟರಿ ಕ್ಲಬ್ ಆಫ್ ಹಾಸನ ರಾಯಲ್ ಸಂಸ್ಥೆ ವತಿಯಿಂದ ಶುಕ್ರವಾರ ಆಯೋಜಿಸಿದ್ದ ಉಚಿತ ಗ್ರಿನ್ ಬೋರ್ಡ್ ವಿತರಣೆ ಹಾಗೂ ಸಸಿ ನೆಡುವ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಮಾತನಾಡಿದ ಅವರು, ಯಾವುದೇ ಸೌಲಭ್ಯವಿಲ್ಲದ ಸರ್ಕಾರಿ ಶಿಕ್ಷಣ ಸಂಸ್ಥೆಗಳನ್ನು ಗುರುತಿಸಿ ಅಂತಹ ಶಾಲೆಗಳಿಗೆ ತಮ್ಮ ಕೈಲಾದಷ್ಟು ಸಹಾಯವನ್ನು ನಾವೆಲ್ಲರೂ ಮಾಡಬೇಕಿದೆ ಎಂದರು.
ಉಚಿತ ಪುಸ್ತಕ, ಸಲಕರಣೆ ವಿತರಣೆ
ರೋಟರಿ ವಲಯ ಸೇನಾನಿ ಡಾ.ಬಿ. ವಿಕ್ರಂ ಅವರು ಶಾಲೆಯ ಮಕ್ಕಳಿಗೆ ಉಚಿತವಾಗಿ ನೋಟ್ ಬುಕ್ ಹಾಗೂ ಪೆನ್ ವಿತರಣೆ ಮಾಡಿ ಮಾತನಾಡಿ, ಸರ್ಕಾರಿ ಶಾಲಾ ಮಕ್ಕಳು ಹಲವು ಸೌಲಭ್ಯಗಳಿಂದ ವಂಚಿತರಾಗಿದ್ದಾರೆ.. ಇನ್ನೂ ಅನೇಕ ಪೋಷಕರು ಸರ್ಕಾರಿ ಶಾಲೆಗಳಿಗೂ ಕಳುಹಿಸಲು ಕಷ್ಟಪಡಬೇಕಾದ ಸ್ಥಿತಿ ಎದುರಿಸುತ್ತಿದ್ದು, ಸರ್ಕಾರಿ ಶಾಲೆಗೆ ಪ್ರತಿಯೊಬ್ಬರೂ ತಮ್ಮ ಕೈಲಾದಷ್ಟು ಸಹಾಯವನ್ನು ಮಾಡಬೇಕು. ಏನೂ ಸೌಲಭ್ಯವಿಲ್ಲದೆ ಇದ್ದರು, ಸರ್ಕಾರಿ ಶಾಲಾ ಮಕ್ಕಳು ಇಂದಿಗೂ ಪರೀಕ್ಷೆಯಲ್ಲಿ ಉತ್ತಮ ಅಂಕಗಳಿಸುತ್ತಿದ್ದಾರೆ. ಹಾಗಾಗಿ ಆರ್ಥಿಕವಾಗಿ ಉತ್ತಮವಾಗಿರುವ ಪ್ರತಿಯೊಬ್ಬರೂ ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಸಹಕರಿಸಬೇಕು ಎಂದರು.
ಇದಾದ ಬಳಿಕ ನಗರದ ದೊಡ್ಡ ಮಂಡಿಗನಹಳ್ಳಿ ಸರ್ಕಾರಿ ಶಾಲಾ ಆವರಣದಲ್ಲಿ ಹಣ್ಣಿನ ಗಿಡಗಳನ್ನು ನೆಡಲಾಯಿತು. ನಂತರ ನಗರದ ಎಂ.ಜಿ. ರಸ್ತೆಯಲ್ಲಿರುವ ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಆವರಣದಲ್ಲಿ ರೋಟರಿ ಕ್ಲಬ್ ಆಪ್ ಹಾಸನ ರಾಯಲ್ ಸಂಸ್ಥೆ ಸಹಯೋಗದಲ್ಲಿ ಪುಟ್ಟ ಅಡವಿ ಉದ್ಯಾನವನ ನಿರ್ಮಾಣ ಮಾಡಲು ಆರಂಭಿಕ ಹಂತವಾಗಿ ವಿವಿಧ ಗಿಡ ಹಾಗೂ ಹಣ್ಣಿನ ಸಸಿಗಳನ್ನು ನೆಡುವುದರ ಮೂಲಕ ಚಾಲನೆ ನೀಡಲಾಯಿತು.
ಮಹಿಳಾ ಕಾಲೇಜಿನ ಪ್ರಾಂಶುಪಾಲರಾದ ಡಾ.ಕೆ.ಜಿ. ಕವಿತಾ ಮಾತನಾಡಿ, ನಗರ ಭಾಗದಲ್ಲಿರುವ ಅನೇಕ ಕಾಲೇಜುಗಳಿಗೆ ಜಾಗವೇ ಇಲ್ಲದಂತಾಗಿದೆ. ನಮ್ಮ ಕಾಲೇಜಿನಲ್ಲಿ ಉಳಿದಿರುವ ಒಂದಿಷ್ಟು ಜಾಗದಲ್ಲಿ ಮಕ್ಕಳಿಗೆ ಹಾಗೂ ಪ್ರಾಣಿ ಪಕ್ಷಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಪುಟ್ಟ ಅಡವಿ ಪರಿಕಲ್ಪನೆಯೊಂದಿಗೆ ರೋಟರಿ ಕ್ಲಬ್ ಹಾಸನ ರಾಯಲ್ ಸಹಯೋಗದಲ್ಲಿ ಒಂದು ಮಿನಿ ಉದ್ಯಾನವನ ನಿರ್ಮಾಣ ಮಾಡಲು ಯೋಜನೆ ರೂಪಿಸಿಕೊಳ್ಳಲಾಗಿದೆ. ಖಾಲಿ ಜಾಗದಲ್ಲಿ ವಿವಿಧ ಬಗೆಯ ಸಸಿ ಹಾಗೂ ಹಣ್ಣಿನ ಗಿಡಿಗಳನ್ನು ಬೆಳೆಸುವ ಮೂಲಕ ಪ್ರಾಣಿ ಪಕ್ಷಿಗಳಿಗೆ ಆಹಾರ ಒದಗಿಸುವುದರೊಂದಿಗೆ ಮಕ್ಕಳಿಗೆ ಮರದಡಿ ಕುಳಿತು ಓದಲು ಸಹಕಾರಿಯಾಗಲಿದೆ ಎಂದರು.
ರೋಟರಿ ಸಹಾಯಕ ಗೌವರ್ನರ್ ಎ.ಜಿ. ಸಂತೋಷ್, ರೋಟೆರಿಯನ್ ರೇಖಾ ದೇವಾನಂದ, ದೇವರಾಯಪಟ್ಟಣ ಶಾಲೆಯ ಮುಖ್ಯ ಶಿಕ್ಷಕಿ ಪೆನಿನ, ಶಿಕ್ಷಕಿ ಟಿ. ಗೌರಮ್ಮ, ದೊಡ್ಡ ಮಂಡಿಗನಹಳ್ಳಿ ಶಾಲಾ ಶಿಕ್ಷಕರು, ಮಹಿಳಾ ಕಾಲೇಜು ಅಧ್ಯಾಪಕರಾದ ಯೋಗೇಶ್, ಡಾ. ಹರೀಶ್, ರಾಜಶೇಖರ್, ರಾಮೇಗೌಡ, ರೋಟರಿ ಕ್ಲಬ್ ಹಾಸನ್ ರಾಯಲ್ ಸಂಸ್ಥೆಯ ಅಧಕ್ಷ ಯು.ವಿ. ಸಚ್ಚಿನ್, ಕಾರ್ಯದರ್ಶಿ ಪುನೀತ್, ಖಜಾಂಚಿ ಪಿ.ರವಿ ಕುಮಾರ್, ಸದಸ್ಯರಾದ ಎಸ್. ಯೋಗೇಶ್, ಶೋಭನ್ ಬಾಬು, ದಿಲೀಪ್ ಕುಮಾರ್ ಕಿರಣ್, ಶ್ರೀನಂದ ಹಾಗೂ ಇತರರು ಹಾಜರಿದ್ದರು.