ಸೋಲು ಸವಾಲಾಗಿ ಸ್ವೀಕರಿಸುವೆವು

Pralhad Joshi
Published on

ಹುಬ್ಬಳ್ಳಿ: ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ನಮ್ಮ ಪಕ್ಷಕ್ಕೆ ಸೋಲಾಗಿರುವುದನ್ನು ಸವಾಲಾಗಿ ಸ್ವೀಕರಿಸುತ್ತೇವೆ. ಇಷ್ಟರಲ್ಲಿಯೇ ಸಭೆ ನಡೆಸಿ, ಸೋಲಿನ ಪರಾಮರ್ಶೆ ನಡೆಸುತ್ತೇವೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದರು.

ನಗರದ ತಮ್ಮ ನಿವಾಸದಲ್ಲಿ ಶನಿವಾರ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾವು ಸೋತಿದ್ದೇವೆ. ನಮ್ಮ ಇಂಜಿನ್ ಫೇಲಾಗಿದೆ. ಇದಕ್ಕೆ ಆಡಳಿತ ವಿರೋಧಿ ಅಲೆ ಮುಖ್ಯ ಕಾರಣವಾಗಿರಬಹುದು. ಇದು ಲೋಕಸಭೆ ಚುನಾವಣೆ ಮೇಲೆ ಪರಿಣಾಮ ಬೀರುವುದಿಲ್ಲ ಎಂದರು.

ರಾಜ್ಯದ ಜನರು ಕೊಟ್ಟ ತೀರ್ಪನ್ನು ವಿನಮ್ರವಾಗಿ ಸ್ವೀಕರಿಸುತ್ತೇವೆ. ಕಾಂಗ್ರೆಸ್ ಅಧಿಕಾರಕ್ಕೆ ಬರುವುದು ನಿಶ್ಚಿತವಾಗಿದೆ. ಅವರು ಕೊಟ್ಟ ಭರವಸೆಗಳನ್ನು ಈಡೇರಿಸುತ್ತಾರೆ ಎನ್ನುವ ಆಶಾಭಾವನೆ ಹೊಂದಿದ್ದೇವೆ. ಹೊಸ ಸರ್ಕಾರಕ್ಕೆ ಎಲ್ಲ ರೀತಿಯ ಸಹಕಾರ ನೀಡುತ್ತೇವೆ. ಸೋಲಿನಿಂದ ಎದೆಗುಂದುವುದಿಲ್ಲ. ಸೋಲು-ಗೆಲುವು ಸ್ವಾಭಾವಿಕ ಎಂದರು.

2013ರಲ್ಲಿ ಕಾಂಗ್ರೆಸ್​ಗೆ ಭಾರಿ ಬಹುಮತ ಬಂದಿತ್ತು. ಆದರೆ, ಒಂದು ವರ್ಷದ ಅವಧಿಯಲ್ಲಿ ನಡೆದ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಅತ್ಯಧಿಕ ಸ್ಥಾನ ಗಳಿಸಿತ್ತು. ಈ ಚುನಾವಣೆಯಲ್ಲಿ ಲಿಂಗಾಯತ ನಾಯಕರನ್ನು ಕಡೆಗಣಿಸಿಲ್ಲ. ಯಡಿಯೂರಪ್ಪ ಅವರು ನಂಬರ್ ಒನ್ ಲಿಂಗಾಯತ ನಾಯಕರು. ಅವರೂ ಪ್ರಚಾರ ಮಾಡಿದರು ಎಂದರು.

ಪ್ರಧಾನಿ ನರೇಂದ್ರ ಮೋದಿ ಸಂಚಾರ ಮಾಡಿದ ಕಡೆಗಳಲ್ಲಿ ಬಿಜೆಪಿ ಸೋತಿದೆ ಎನ್ನಲು ಆಗುವುದಿಲ್ಲ. ಉತ್ತರ ಪ್ರದೇಶದಲ್ಲಿ ನರೇಂದ್ರ ಮೋದಿ ಅವರು ಪ್ರಚಾರ ಮಾಡಿದ್ದರು. ಅಲ್ಲಿ ಅಭೂತಪೂರ್ವ ಗೆಲುವು ಸಿಕ್ಕಿತ್ತು. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಹೆಚ್ಚು ಕಡೆ ಪ್ರಚಾರ ಮಾಡಿಲ್ಲ. ಹಾಗಾಗಿ, ಕಾಂಗ್ರೆಸ್ ಅಭ್ಯರ್ಥಿಗಳು ರಾಜ್ಯದಲ್ಲಿ ಹೆಚ್ಚು ಗೆದ್ದಿದ್ದಾರೆ ಎಂದು ವಿಶ್ಲೇಷಿಸಿದರು.

ಹು-ಧಾ ಸೆಂಟ್ರಲ್ ಕ್ಷೇತ್ರದಲ್ಲಿ ಜಗದೀಶ ಶೆಟ್ಟರ್ ಸೋಲು ಎನ್ನುವುದಕ್ಕಿಂತ ಬಿಜೆಪಿ ಗೆದ್ದಿದೆ. ಶೆಟ್ಟರ್ ಬಗ್ಗೆ ಏನೂ ಮಾತನಾಡುವುದಿಲ್ಲ ಎಂದು ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net