ವಿವೇಕರ ಆದರ್ಶ ಯುವಕರಿಗೆ ದಾರಿದೀಪ, ಅಪರ ಜಿಲ್ಲಾಧಿಕಾರಿ ಡಾ.ಜಗದೀಶ್ ಕೆ.ನಾಯಕ್ ಅಭಿಮತ, ಅಂಬೇಡ್ಕರ್ ಭವನದಲ್ಲಿ ರಾಷ್ಟ್ರೀಯ ಯುವ ದಿನಾಚರಣೆ

12 dhl yuvasablikaran vivekananda news 1
Published on

ದೇವನಹಳ್ಳಿ: ಮಹಾಪುರುಷರ ಅಂತರಾಳದಲ್ಲಿ ಮಾನವೀಯ ಮೌಲ್ಯ ಹಾಗೂ ದೇಶಪ್ರೇಮ ತುಂಬಿರುತ್ತದೆ, ಅಂಥವರೇ ನಾಡಿನ ಜ್ಞಾನದ ಬೆಳಕಾಗಿ ಜಗತ್ತಿನ ಜ್ಯೋತಿಯಾಗಿ ಮುನ್ನೆಡೆಯಲು ಸಾಧ್ಯ ಎಂದು ಅಪರ ಜಿಲ್ಲಾಧಿಕಾರಿ ಡಾ.ಜಗದೀಶ್ ಕೆ. ನಾಯಕ್ ಹೇಳಿದರು.

ಪಟ್ಟಣದ ಅಂಬೇಡ್ಕರ್ ಭವನದಲ್ಲಿ ಜಿಲ್ಲಾಡಳಿತ, ಜಿಪಂ, ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಯೋಗದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ವಿವೇಕಾನಂದ ಜಯಂತಿ ಹಾಗೂ ರಾಷ್ಟ್ರೀಯ ಯುವ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. 2021 ನೇ ವರ್ಷವನ್ನು ಯುವಸಬಲೀಕರಣ ವರ್ಷವನ್ನಾಗಿ ಆಚರಿಸಲು ಕೇಂದ್ರ ಸರ್ಕಾರ ಸೂಚಿಸಿದೆ. ಅದರಂತೆ ಈ ವರ್ಷದ ಯುವಕಾರ್ಯಕ್ರಮಗಳಿಗೆ ಯುವಕರ ದಾರಿದೀಪ ಸ್ವಾಮಿ ವಿವೇಕಾನಂದರ ಜಯಂತಿ ಮೂಲಕ ಚಾಲನೆ ದೊರೆಯುತ್ತಿದೆ ಎಂದರು.

1893ರ ಶಿಕಾಗೊ ಸರ್ವಧರ್ಮ ಸಮ್ಮೇಳನಕ್ಕೂ ಮುನ್ನ ಭಾರತದ ಧಾರ್ಮಿಕ ಸಂಸ್ಕೃತಿಯ ದಾರಿದೀಪ ಸ್ವಾಮಿ ವಿವೇಕಾನದರಂತ ಮಹಾಜ್ಞಾನಿ ವಿಶ್ವಕ್ಕೆ ಪರಿಚಯವಿರಲಿಲ್ಲ. ಇಂತಹ ಮಹನೀಯರ ಆದರ್ಶವನ್ನು ಇಂದಿನ ಯುವಶಕ್ತಿಗೆ ಮನವರಿಕೆ ಮಾಡಿಕೊಡಬೇಕು ಎಂದರು.

ದೊಡ್ಡಬಳ್ಳಾಪುರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಸದಾಶಿವರಾಮಚಂದ್ರ ಮಾತನಾಡಿ, ಅಪರಿಮಿತ ಜ್ಞಾನದಿಂದ ರಾಮಕೃಷ್ಣ ಪರಮಹಂಸರ ನೆಚ್ಚಿನಶಿಷ್ಯನಾಗಿ ವಿವೇಕಾನಂದು ಪ್ರವರ್ಧಮಾನಕ್ಕೆ ಬಂದರು. ಬಾಲ್ಯದಿಂದಲೂ ಅಂತ್ಯದವರೆಗೂ ಸತ್ಯದ ಹುಡುಕಾಟದಲ್ಲಿ ತೊಡಗಿಸಿಕೊಂಡಿದ್ದರು ಏಕಾಗ್ರತೆ ಶಕ್ತಿಯಿಂದ ಗಂಟಗೆ 700 ಪುಟಗಳನ್ನು ಓದುವ ಶಕ್ತಿ ಬೆಳೆಸಿಕೊಂಡಿದ್ದರು ಎಂದರು.

ಜಿಪಂ ಅಧ್ಯಕ್ಷ ವಿ.ಪ್ರಸಾದ್ ಮಾತನಾಡಿ, ಯುವಕರು ವಿವೇಕಾನಂದರ ತತ್ವಾದರ್ಶ ಅಳವಡಿಸಿಕೊಂಡು ನಿರ್ದಿಷ್ಟ ಗುರಿಯೊಂದಿಗೆ ಸಾಗಿದರೆ ಸಾಧಕರಾಗಿ ಯಶಸ್ಸು ಕಾಣಬಹುದು ಎಂದರು.

ಶಾಸಕ ನಿಸರ್ಗ ನಾರಾಯಣಸ್ವಾಮಿ ಮಾತನಾಡಿ, ಮಹಾನುಭಾವ ಜೀವಿಸಿದ್ದು ಕೇವಲ 39 ವರ್ಷ ಮಾತ್ರ ಆದರೆ ಅವರ ಸಾಧನೆ ಶಾಶ್ವತವಾದದ್ದು ಎಂದು ಸ್ಮರಿಸಿದರು.

ವಿವೇಕಾನಂದರೆಂದರೆ ಅಸಮಾನ್ಯ ಶಕ್ತಿ. ಅವರೊಬ್ಬ ಸರ್ವಸಂಗ ಪರಿತ್ಯಾಗಿಯಾದ ವೀರಸನ್ಯಾಸಿ ಏಳಿ ಎದ್ದೇಳಿ ಗುರಿ ಮುಟ್ಟುವ ತನಕ ನಿಲ್ಲದಿರಿ ಎಂದು ಯುವಕರಿಗೆ ಕರೆ ನೀಡಿದ ಮಹಾನ್ ಚೇತನ ಎಂದು ಬಣ್ಣಿಸಿದರು.

ಯುವಕರು ದುಶ್ಚಟಗಳ ದಾಸರಾಗದೇ ವಿವೇಕವಾಣಿ ಅನುಸರಿಸಿ ಮುನ್ನೆಡೆದರೆ ದೇಶದ ಅಭಿವೃದ್ಧಿ ಚಿತ್ರಣವೇ ಬದಲಾಗಲಿದೆ ಎಂದರು.

ಕ್ರೀಡಾ ತರಬೇತಿ ಪಡೆದ ಹಿರಿಯ ಪ್ರಾಥಮಿಕ ಶಾಲೆಗಳ ವಿದ್ಯಾರ್ಥಿಗಳಿಗೆ ಕ್ರೀಡಾಸಾಮಾಗ್ರಿ ಕಿಟ್ ವಿತರಿಸಲಾಯಿತು. ಸ್ವಾಮಿ ವಿವೇಕಾನಂದರ ಬಗ್ಗೆ ಚಿತ್ರಕಲಾ, ಪ್ರಬಂಧ, ಆಶುಭಾಷಣ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.

ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಪ್ರಾಂಶುಪಾಲ ಕೆ.ಎಸ್.ಶಿವಶಂಕರಪ್ಪ, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಮುನಿರಾಜು, ಯುವಸಬಲೀಕರಣ ಇಲಾಖೆಯ ಸಹಾಯಕ ನಿರ್ದೇಶಕಿ ಆರ್. ಗೀತಾ, ಪುರಸಭಾ ಸದಸ್ಯ ಜಿ.ಎ.ರವೀಂದ್ರ, ಜಿಲ್ಲಾ ಸ್ಕೌಟ್ ಮತ್ತು ಗೈಡ್ಸ್‌ನ ಸದಸ್ಯ ನಾಗರಾಜ್, ಜಿಲ್ಲಾ ದೈಹಿಕ ಶಿಕ್ಷಣ ಅಧೀಕ್ಷಕ ಪರಶುರಾಮಪ್ಪ, ಜಿಲ್ಲಾ ದೈಹಿಕ ಶಿಕ್ಷಣಶಿಕ್ಷಕರ ಸಂಘದ ಅಧ್ಯಕ್ಷ ಮುನಿಯಪ್ಪ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net