ವೇವ್‌ರೇಡಾರ್ ಬೋಯ್ ಅಳವಡಿಕೆ

WAVE REDOR
Published on

ಕಾರವಾರ: ಹೈದರಾಬಾದ್‌ನಲ್ಲಿರುವ ಭಾರತೀಯ ರಾಷ್ಟ್ರೀಯ ಸಾಗರ ಮತ್ತು ಮಾಹಿತಿ ಸೇವಾ ಕೇಂದ್ರ (ಇನ್‌ಕಾಯಿಸ್) ಒದಗಿಸಿರುವ ಎಂ.ಕೆ3 ಮಾದರಿಯ ವೇವ್‌ರೇಡಾರ್ ಬೋಯ್‌ನ್ನು ಸಮೀಪದ ಲೈಟ್‌ಹೌಸ್ ದ್ವೀಪದ ಬಳಿ ಏ.3ರಂದು ಅಳವಡಿಸಲಾಗುವುದು ಎಂದು ಕಡಲಜೀವಶಾಸ್ತ್ರ ಸ್ನಾತಕೋತ್ತರ ಅಧ್ಯಯನ ಕೇಂದ್ರದ ಪ್ರಧಾನ ಸಂಶೋಧಕ ಜೆ.ಎಲ್. ರಾಠೋಡ್ ತಿಳಿಸಿದರು.

ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 17 ರಿಂದ 20 ಮೀಟರ್ ಆಳದಲ್ಲಿ 300 ಕೆಜಿ ಭಾರದ ವಸ್ತುವಿನೊಂದಿಗೆ ಅಳವಡಿಸಲಾಗುತ್ತಿದೆ. ಬೋಯ್ ಅಳವಡಿಕೆಯಿಂದ ಸಮುದ್ರದಲ್ಲಿನ ವಾತಾವರಣದ ಏರುಪೇರಿನ ಮಾಹಿತಿ ನಿಖರವಾಗಿ ತಿಳಿಯಲಿದ್ದು, ಮೀನುಗಾರರಿಗೆ ಹೆಚ್ಚು ಅನುಕೂಲವಾಗಲಿದೆ. ಬೋಟ್‌ಗಳ ಚಲನವಲನದ ವೇಳೆ ಬೋಯ್‌ಗೆ ಹಾನಿಯಾಗದಂತೆ ಎಚ್ಚರವಹಿಸಲು ಜಾಗೃತಿ ಮೂಡಿಸಲಾಗುತ್ತದೆ ಎಂದರು.

ಕಾರವಾರದಿಂದ ಉಡುಪಿ ಜಿಲ್ಲೆಯ ಬೈಂದೂರಿನವರೆಗಿನ ಸಮುದ್ರದ ಹವಾಗುಣದ ಮಾಹಿತಿಯನ್ನು ಬೋಯ್ ಒದಗಿಸುತ್ತದೆ. ಅಲೆಗಳ ಎತ್ತರ, ರಭಸ, ಕಂಪನ, ಇತರ ಯಾವುದೇ ಬದಲಾವಣೆಗಳನ್ನು ಗ್ರಹಿಸಿ ನಿಖರ ಮಾಹಿತಿ ಒದಗಿಸಲಿದೆ ಎಂದರು.

ಈ ಹಿಂದೆ ಲೈಟ್‌ಹೌಸ್ ಸಮೀಪ ಇದ್ದ ಎಂಕೆ4 ಮಾದರಿಯ ವೇವ್ ರೇಡಾರ್ ಬೋಯ್ ಯಂತ್ರವು ಕಳೆದ ವರ್ಷ ಕಳವಾಗಿತ್ತು. ಈಗ ಇನ್ನೊಂದು ಯಂತ್ರ ಅಳವಡಿಸಲಾಗುತ್ತಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net