

ವಿಜಯವಾಣಿ ಸುದ್ದಿಜಾಲ ಧಾರವಾಡ
ರಾಜ್ಯ ಜಲ ಸಂಪನ್ಮೂಲ ಇಲಾಖೆಯಡಿ ಕಾರ್ಯನಿರ್ವಹಿಸುತ್ತಿರುವ ಇಲ್ಲಿನ ಜಲ ಮತ್ತು ನೆಲ ನಿರ್ವಹಣೆ ಸಂಸ್ಥೆಯು (ವಾಲ್ಮಿ) ಅಂತಾರಾಷ್ಟ್ರೀಯ ನೀರಾವರಿ ಮತ್ತು ಒಳಚರಂಡಿ ಮಂಡಳಿಯು (ಐಸಿಐಡಿ) ಕೊಡಮಾಡುವ ಅಂತಾರಾಷ್ಟ್ರೀಯ ವಾಟ್ಸೇವ್ ಪ್ರಶಸ್ತಿಗೆ ಭಾಜನವಾಗಿದೆ ಎಂದು ವಾಲ್ಮಿ ನಿರ್ದೇಶಕ ಡಾ. ರಾಜೇಂದ್ರ ಪೋದ್ದಾರ ಹೇಳಿದರು.
ಸಂಸ್ಥೆಯಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ ನೀರಾವರಿ ಅಚ್ಚುಕಟ್ಟು ಪ್ರದೇಶದಲ್ಲಿ ರೈತರ ಸಹಭಾಗಿತ್ವದ ನೀರಾವರಿ ಪದ್ಧತಿಯನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಲು ಕೈಕೊಂಡ ಕ್ರಮಗಳನ್ನು ಗುರುತಿಸಿ 2024ನೇ ಸಾಲಿನ ಪ್ರಶಸ್ತಿ ಲಭಿಸಿದೆ. ಆಸ್ಟ್ರೇಲಿಯಾದ ಸಿಡ್ನಿಯಲ್ಲಿ ಸೆ. 3ರಂದು ನಡೆದ 75ನೇ ಆಡಳಿತ ಕಾರ್ಯಕಾರಿಣಿ ಸಮಿತಿ ಅಽವೇಶನ ಮತ್ತು 9ನೇ ಏಷ್ಯನ್ ಪ್ರಾದೇಶಿಕ ಸಮ್ಮೇಳನದಲ್ಲಿ ಐಸಿಐಡಿ ಅಧ್ಯಕ್ಷ ಡಾ. ಮಾರ್ಕೊ ಆರ್ಸಿಯೆರಿ ಪ್ರಶಸ್ತಿ ಪ್ರದಾನ ಮಾಡಿದರು.
ವಾಲ್ಮಿ ಸಂಸ್ಥೆಯು ತರಬೇತಿ, ಸಂಶೋಧನೆ, ಪ್ರಾತ್ಯಕ್ಷಿಕೆ, ಪ್ರಕಟಣೆ, ಕ್ಷೇತ್ರ ಭೇಟಿ, ಒಡಂಬಡಿಕೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ. ವೈಜ್ಞಾನಿಕ ಜಲ ಮತ್ತು ನೆಲ ನಿರ್ವಹಣೆ ತರಬೇತಿ ಮತ್ತು ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ ಎಂದರು.
ವಾಲ್ಮಿ ಅಽಕಾರಿಗಳು ಮತ್ತು ಸಿಬ್ಬಂದಿ ಇದ್ದರು.