

ಬೆಂಗಳೂರು: ವಿಶ್ವಬ್ಯಾಂಕ್ ನೆರವಿನಲ್ಲಿ ಕೈಗೆತ್ತಿಕೊಂಡಿರುವ ನವೀನ ವಿಧಾನಗಳಿಂದ ಜಲಾನಯನ ಪ್ರದೇಶವನ್ನು ಪುನಶ್ಚೇತನಗೊಳಿಸಿ ಕೃಷಿಯಲ್ಲಿ ಸ್ಥಿತಿಸ್ಥಾಪಕತ್ವ ಸಾಧಿಸುವ ಪ್ರಯಾಯೋಜನೆಯ (ರಿವಾರ್ಡ್) ಬಾಕಿ ಉಳಿದಿರುವ ಸರ್ವೆಯನ್ನು ಮುಂಬರುವ ಡಿಸೆಂಬರ್‌ನಲ್ಲಿ ಚಾಲನೆ ನೀಡಲಾಗುವುದು ಎಂದು ಜಲಾನಯನ ಅಭಿವೃದ್ಧಿ ಇಲಾಖಾ ನಿದೇರ್ಶಕ ಎಂ.ಪಿ.ಬಂತನಾಳ ತಿಳಿಸಿದರು.
ಜಲಾನಯನ ಅಭಿವೃದ್ಧಿ ಇಲಾಖೆಯು ಕೃಷಿ ವಿವಿಗಳು, ಐಐಎಸ್ಸಿ, ರಾಜ್ಯ ದೂರ ಸಂವೇದನಾ ಕೇಂದ್ರ, ರಾಜ್ಯ ವಿಪತ್ತು ನಿರ್ವಹಣಾ ಕೇಂದ್ರ ಹಾಗೂ ಭೂ ಬಳಕೆ ಸಂಸ್ಥೆ ಸಹಯೋಗದಲ್ಲಿ 25 ಜಿಲ್ಲೆಗಳಲ್ಲಿ ಅಂದಾಜು 35 ಲಕ್ಷ ಹೆಕ್ಟೇರ್ನಲ್ಲಿ ಭೂ ಸಂಪನ್ಮೂಲ ಹಾಗೂ ಜಲವಿಜ್ಞಾನಿಗಳು ಅಧ್ಯಯನ ನಡೆಸಿದ ಮಾಹಿತಿಯನ್ನು ಪೋರ್ಟಲ್‌ನಲ್ಲಿ ಶೇಖರಿಸಿಡಲಾಗಿದೆ. ಈ ವರ್ಷ ಡಿಸೆಂಬರ್‌ನಿಂದ 6 ತಿಂಗಳ ಕಾಲ 20 ಜಿಲ್ಲೆಗಳಲ್ಲಿ ಸಮೀಕ್ಷೆ ನಡೆಸಲಾಗುವುದು ಎಂದು ಅವರು ಸುದ್ದಿಗೋಷ್ಠಿಯಲ್ಲಿ ಸೋಮವಾರ ತಿಳಿಸಿದರು.
ಕೃಷಿಯಲ್ಲಿ ಸ್ಥಿತಿಸ್ಥಾಪಕತ್ವ ಸಾಧಿಸುವ ನಿಟ್ಟಿನಲ್ಲಿ ಬೆಂಗಳೂರು ಕೃಷಿ ವಿವಿಯ ಜಿಕೆವಿಕೆಯಲ್ಲಿ ಜಲಾನಯನ ಅಭಿವೃದ್ಧಿ ಉತ್ಕ ಉತ್ಕೃಷ್ಟತಾ ಕೇಂದ್ರ ಸ್ಥಾಪಿಸಲಾಗಿದೆ. ಈ ಕೇಂದ್ರವು ದೇಶದ ಎಲ್ಲ ರಾಜ್ಯಗಳಲ್ಲಿನ ಜಲಾನಯನ ಅಭಿವೃದ್ಧಿಯನ್ನು ರಿವಾರ್ಡ್ ಯೋಜನೆಯಲ್ಲಿ ಅಳವಡಿಸಿರುವ ಮಾದರಿಯನ್ನು ಉನ್ನತೀಕರಿಸಲು ಬೇಕಿರುವ ವಿಧಾನಗಳ ಬಗ್ಗೆ ಅಧಿಕಾರಿಗಳಿಗೆ ಸಾಮರ್ಥ್ಯ ಬಲವರ್ಧನೆಗೆ ಕೆಲಸ ಮಾಡುತ್ತಿದೆ ಎಂದರು.
600 ಕೋಟಿ ರೂ. ರೂ. ಯೋಜನೆ:
ರಾಜ್ಯದಲ್ಲಿ ಅನುಷ್ಠಾನಿಸುತ್ತಿರುವ ಜಲಾನಯನ ಅಭಿವೃದ್ಧಿ ಕಾರ್ಯಕ್ರಮವು 600 ಕೋಟಿ ರೂ. ವೆಚ್ಚದ್ದಾಗಿದೆ. ಇದರಲ್ಲಿ ವಿಶ್ವಬ್ಯಾಂಕ್ 420 ಕೋಟಿ ರೂ. ನೆರವು ನೀಡಿದ್ದು, ಉಳಿದ 180 ಕೋಟಿ ರೂ. ರಾಜ್ಯ ಸರ್ಕಾರ ಭರಿಸುತ್ತಿದೆ. ಇದುವರೆಗೆ 1,545 ತರಬೇತಿ ಶಿಬಿರಗಳಲ್ಲಿ 7.25 ಲಕ್ಷ ರೈತರಿಗೆ ಭೂ ಸಂಪನ್ಮೂಲ ಸಮೀಕ್ಷಾ ಕಾರ್ಡ್‌ಗಳನ್ನು ವಿತರಿಸಲಾಗಿದೆ. ಜತೆಗೆ ಜಲಾನಯನ ಉತ್ಕೃಷ್ಠತಾ ಕೇಂದ್ರದಿಂದ 923 ಅಧಿಕಾರಿ/ವಿಜ್ಞಾನಿ ಹಾಗೂ ಜಲಾನಯನ ನಿರ್ವಹಣೆಯ ಸಿಇಒಗಳಿಗೆ ನವೀನ ಪದ್ಧತಿಗೆ ತರಬೇತಿ ನೀಡಲಾಗಿದೆ ಎಂದು ಬಂತನಾಳ ವಿವರಿಸಿದರು.
ಕೇಂದ್ರ ಸರ್ಕಾರಕ್ಕೆ ಶಿಫಾರಸು:
ಬೆಂಗಳೂರು ಕೃಷಿ ವಿವಿ ಕುಲಪತಿ ಡಾ. ಎಸ್.ವಿ.ಸುರೇಶ್ ಮಾತನಾಡಿ, ಭೂ ಸಂಪನ್ಮೂಲ ಸಮೀಕ್ಷೆ ಕುರಿತಾದ ಸಮ್ಮೇಳನದಲ್ಲಿ ದೇಶದ ವಿವಿಧ ರಾಜ್ಯಗಳ ಆಯ್ದ 250 ಪ್ರತಿನಿಧಿಗಳು ಜಲಾನಯನ ಅಭಿವೃದ್ಧಿ ಯೋಜನೆಯ ಹೊಸ ವಿಧಾನಗಳ ಬಗ್ಗೆ ಚರ್ಚಿಸಿ ನಿರ್ಣಯ ಕೈಗೊಳ್ಳಲಾಗುವುದು. ಇದನ್ನು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿ ಇತರ ರಾಜ್ಯಗಳಲ್ಲೂ ವಿಸ್ತರಿಸಲು ಸಲಹೆ ನೀಡಲಾಗುವುದು. ನೀರಿನ ಸದ್ಬಳಕೆ ಹಾಗೂ ಭೂ ಬಳಕೆ ಬಗ್ಗೆ ತಾಂತ್ರಿಕ ಗೋಷ್ಠಿಗಳಲ್ಲಿ ನೀವನ ಕಾರ್ಯವಿಧಾನಗಳ ಜಾರಿಗೆ ಒತ್ತು ನೀಡಲಾಗುವುದು ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಜಲಾನಯನ ಅಭಿವೃದ್ಧಿ ಉತ್ಕೃಷ್ಟತಾ ಕೇಂದ್ರದ ವಿಶೇಷಾಧಿಕಾರಿ ಡಾ. ಎನ್.ಬಿ.ಪ್ರಕಾಶ್, ಇಲಾಖಾ ಉಪನಿರ್ದೇಶಕಿ ಗೀತಾ ಹಳ್ಳಿ ಹಾಜರಿದ್ದರು.
3 ದಿನದ ಸಮ್ಮೇಳನಕ್ಕೆ ಇಂದು ಚಾಲನೆ:
‘ಭೂ ಸಂಪನ್ಮೂಲ ಸಮೀಕ್ಷೆ ಆಧಾರಿತ ಸುಸ್ಥಿರ ಜಲಾನಯನ ನಿರ್ವಹಣೆ’ ಕುರಿತ ರಾಷ್ಟ್ರೀಯ ಸಮ್ಮೇಳನ ಮಂಗಳವಾರದಿಂದ (ಮೇ 3) ಮೂರು ದಿನ ಬೆಂಗಳೂರು ಕೃಷಿ ವಿವಿ ಕ್ಯಾಂಪಸ್ ಜಿಕೆವಿಕೆಯ ಡಾ. ಬಾಬು ರಾಜೇಂದ್ರಪ್ರಸಾದ್ ಅಂತಾರಾಷ್ಟ್ರೀಯ ಸಭಾಂಗಣ ಕೇಂದ್ರದಲ್ಲಿ ನಡೆಯಲಿದೆ. ಸಮ್ಮೇಳನವನ್ನು ಬೆಳಗ್ಗೆ 10ಕ್ಕೆ ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಕೇಂದ್ರದ ಭೂ ಸಂಪನ್ಮೂಲ ಇಲಾಖೆಯ ಜಂಟಿ ಕಾರ್ಯದರ್ಶಿ ನಿತಿನ್ ಖಾಡೆ, ರಾಜ್ಯ ಕೃಷಿ ಬೆಲೆ ಆಯೋಗದ ಅಧ್ಯಕ್ಷ ಡಾ. ಅಶೋಕ್ ದಳವಾಯಿ, ಕೃಷಿ ಕಾರ್ಯದರ್ಶಿ ಡಾ. ಜೆ.ರವಿಶಂಕರ್, ವಿಶ್ವಬ್ಯಾಂಕ್ ಕನ್ಸಲ್ಟೆಂಟ್ ಜೆ.ವಿ.ಆರ್.ಮೂರ್ತಿ ಆಗಮಿಸಲಿದ್ದಾರೆ.