

ಚಿಕ್ಕರಾಜು ಬರಗೇನಹಳ್ಳಿ, ದಾಬಸ್‌ಪೇಟೆ
ಗ್ರಾಮೀಣ ಭಾಗದ ಜನರಿಗೆ ಶುದ್ಧ ನೀರು ಪೂರೈಸಬೇಕೆಂಬ ಸದುದ್ದೇಶದಿಂದ ಆರಂಭವಾದ ಶುದ್ಧ ನೀರಿನ ಘಟಕಗಳು ನಿರ್ವಹಣೆ ಕೊರತೆ ಎದುರಿಸುತ್ತಿವೆ, ಬಾಯಾರಿಕೆ ತೀರಿಸಬೇಕಾದ ಘಟಕಗಳೇ ಬಾಯಾರಿ ನಿಲ್ಲುವಂತಾಗಿದೆ.
ಹೌದು..! ನೆಲಮಂಗಲ ತಾಲೂಕು, ಸೋಂಪುರ ಹೋಬಳಿ, ನರಸೀಪುರ ಗ್ರಾಮ ಪಂಚಾಯಿತಿಗೆ ಸೇರುವ ಹಾಲೇನಹಳ್ಳಿ ಗ್ರಾಮದ ಶುದ್ಧ ಕುಡಿಯುವ ನೀರಿನ ಘಟಕ ಸ್ಥಗಿತಗೊಂಡು ಸುಮಾರು 2 ವರ್ಷವೇ ಕಳೆದಿದೆ. ನಿರ್ವಹಣೆ ಕೊರತೆಯಿಂದ ಘಟಕ ಬಂದ್ ಆಗಿದ್ದು ಶುದ್ಧ ಕುಡಿವ ನೀರಿಗಾಗಿ ಗ್ರಾಮಸ್ಥರು ಪರದಾಡುವಂತಾಗಿದೆ.
ರಿಪೇರಿಗೆ ಮೀನಮೇಷ: ಘಟಕದ ಯಂತ್ರಗಳು ಹಾಳಾಗಿರುವ ಕಾರಣದಿಂದ ಸ್ಥಗಿತಗೊಂಡಿವೆ ಎನ್ನಲಾಗಿದೆ. ಸುಮಾರು 2 ವರ್ಷ ಇದೇ ಪರಿಸ್ಥಿತಿ ಇದ್ದರೂ ಇದರ ನಿರ್ವಹಣೆ ಹೊಣೆ ಹೊತ್ತವರು ಹೊಣೆಗಾರಿಗೆ ಮರೆತಿದ್ದಾರೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.ಮಾರುತಿ ಸುಜುಕಿ ಕಂಪನಿಯವರು ಕೆಲ ವರ್ಷಗಳ ಹಿಂದೆ ಈ ಘಟಕ ನಿರ್ಮಾಣ ಮಾಡಿದ್ದು, ವಾಟರ್ ಲ್ೈ ಇಂಡಿಯಾ ಕಂಪನಿ ಘಟಕದ ನಿರ್ವಹಣೆ ಮಾಡುತ್ತಿತ್ತು. ಆದರೆ ಕಳೆದೆರಡು ವರ್ಷದಿಂದ ಯಾರೂ ಇತ್ತ ತಲೆ ಹಾಕದ ಕಾರಣ ಘಟಕ ಬಂದ್ ಆಗಿದೆ ಎಂಬುದು ಗ್ರಾಮಸ್ಥರ ಆರೋಪವಾಗಿದೆ.
ಗ್ರಾಮಗಳ ಜನರ ಪರದಾಟ: 100ಕ್ಕೂ ಹೆಚ್ಚು ಕಟುಂಬ ವಾಸವಿರುವ ಹಾಲೇನಹಳ್ಳಿ ಗ್ರಾಮದಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗ ಹಾಗೂ ಅಲ್ಪಸಂಖ್ಯಾತ ಸಮುದಾಯದ ಜನ ಹೆಚ್ಚಿನ ಸಂಖ್ಯೆಯಲ್ಲಿ ವಾಸಿಸುತ್ತಿದ್ದಾರೆ. ಅಷ್ಟೇ ಅಲ್ಲ ಹಾಲೇನಹಳ್ಳಿ ಗ್ರಾಮಕ್ಕೆ ಹೊಂದಿಕೊಂಡಂತೆ ಇರುವ ಸಾಲಹಟ್ಟಿ, ಜಾಜೂರು, ಲಕ್ಷ್ಮೀಪುರ, ಪಾಂಡವಪುರ ಹಾಗೂ ಸಣ್ಣಪುಟ್ಟ ಹಳ್ಳಿಗಳ ಜನರೂ ಕುಡಿಯುವ ನೀರಿಗೆ ಇದೇ ಘಟಕವನ್ನು ಅವಲಂಬಿಸಿದ್ದಾರೆ ಆದರೆ ಇಷ್ಟೂ ಗ್ರಾಮದ ಸಾವಿರಾರು ಜನರು ಶುದ್ಧ ನೀರಿಗಾಗಿ ಪರದಾಡುವಂತ ಸನ್ನಿವೇಶ ನಿರ್ಮಾಣವಾಗಿದೆ.
ವಿದ್ಯುತ್ ಬಿಲ್ ಪಾವತಿಸರೆ ನಕಾರ: ಈ ಹಿಂದೆ ಘಟಕ ಕಾರ್ಯನಿರ್ವಹಿಸಲು ಬಳಸಿಕೊಂಡಿರುವ ವಿದ್ಯುತ್ ಸಂಪರ್ಕದ ಬಿಲ್ ಪಾವತಿ ಮಾಡದ ಕಾರಣ ಬೆಸ್ಕಾಂ ಇಲಾಖೆ ಘಟಕಕ್ಕೆ ವಿದ್ಯುತ್ ಸಂಪರ್ಕ ಕಡಿತ ಮಾಡಿತ್ತು. ಬಿಲ್ ಪಾವತಿಸುವುದಾಗಿ ಬೆಸ್ಕಾಂ ಅವರಲ್ಲಿ ಮನವಿ ಮಾಡಿದ್ದರಿಂದ ಒಂದಷ್ಟು ತಿಂಗಳು ಘಟಕಕ್ಕೆ ವಿದ್ಯುತ್ ಸಂಪರ್ಕ ನೀಡಿದ್ದರು. ಮತ್ತೆ ವಿದ್ಯುತ್ ಬಿಲ್ ಪಾವತಿಸದ್ದರಿಂದ ಕಡಿತ ಮಾಡಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದರು.
ಸಂಬಂಧಿಸಿದವರಲ್ಲಿ ಹಾಗೂ ಸ್ಥಳೀಯ ಪಂಚಾಯಿತಿಯಲ್ಲಿ ಈ ಬಗ್ಗೆ ಮನವಿ ಮಾಡಿದರೂ, ದೂರು ನೀಡಿದರೂ ಘಟಕ 2 ವರ್ಷದಿಂದ ರಿಪೇರಿ ಆಗಿಲ್ಲ. ಘಟಕ ಕಾರ್ಯನಿರ್ವಹಿಸಿದೆ ಹೋಗಿರುವುದರಿಂದ ಪಾಳು ಬೀಳುತ್ತಿದೆ. ನೂರಾರು ಜನರು ಶುದ್ಧ ನೀರಿಗಾಗಿ ಪರದಾಡುವಂತಾಗಿದೆ. ಸಂಬಂಧಪಟ್ಟವರು ಗಮನ ಹರಿಸಬೇಕು.
ರಾಜಣ್ಣ ಹಾಲೇನಹಳ್ಳಿ