

ಕೋಲಾರ: ಕಲ್ಲಂಗಡಿ ಹಣ್ಣಿನಲ್ಲಿ ಕೃತಕ ಬಣ್ಣ ಅಳವಡಿಕೆ ಹಾಗೂ ಕೋಳಿಗಳಿಗೆ ಹಕ್ಕಿ ಜ್ವರ ಇದೆ ಎಂಬ ಸುದ್ದಿ ಹರಿದಾಡುತ್ತಿರುವುದರಿಂದ ಗ್ರಾಹಕರಲ್ಲಿ ಮತ್ತು ರೈತರಲ್ಲಿ ಆತಂಕ ಮೂಡುವಂತಾಗಿದ್ದು, ಅಧಿಕಾರಿಗಳು ಕಲ್ಲಂಗಡಿ ಹಣ್ಣಿನ ಸ್ಯಾಂಪಲ್ ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳಿಸಿದ್ದಾರೆ. ಇತ್ತ ಜಿಲ್ಲೆಯಲ್ಲಿ ಎಲ್ಲಿಯೂ ಹಕ್ಕಿಜ್ವರ ದೃಢಪಟ್ಟಿಲ್ಲ ಎಂದು ಜಿಲ್ಲಾಡಳಿತ ಸ್ಪಷ್ಟನೆ ನೀಡಿದೆ.
ಕೋಲಾರದಲ್ಲಿ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆಯ ಸಿಬ್ಬಂದಿ ಕಲ್ಲಂಗಡಿ ಹಣ್ಣುಗಳನ್ನು ಮಾರಾಟ ಮಾಡುವ ಅಂಗಡಿಗಳಿಗೆ ಸೋಮವಾರ ಭೇಟಿ ನೀಡಿ, ಹಣ್ಣಿನ ಸ್ಯಾಂಲ್ ಪಡೆದು ಬೆಂಗಳೂರಿನ ಸರ್ಕಾರಿ ಪ್ರಯೋಗಾಲಯಕ್ಕೆ ಕಳುಹಿಸಿಕೊಡಲಾಗಿದೆ. ವರದಿ ಬಂದ ನಂತರ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
ವಿಭಜಿತ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಕೋಳಿಗಳಲ್ಲಿ ಹಕ್ಕಿಜ್ವರ ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ ಪಶು ಇಲಾಖೆಯವರು ಮುನ್ನೆಚ್ಚರಿಕಾ ಕ್ರಮ ಕೈಗೊಂಡಿದ್ದು, ಗಡಿ ಭಾಗಗಳಲ್ಲಿ ಚೆಕ್ಪೋಸ್ಟ್ಗಳನ್ನು ನಿಮಾರ್ಣ ಮಾಡಿ ಚಿಕ್ಕಬಳ್ಳಾಪುರ, ಪಕ್ಕದ ಆಂಧ್ರಪ್ರದೇಶ ಮತ್ತು ತಮಿಳುನಾಡಿನಿಂದ ಜಿಲ್ಲೆಗೆ ಆಗಮಿಸುವ ಕೋಳಿಗಳನ್ನು ಪರಿಶೀಲಿಸಿ ಅವುಗಳಿಗೆ ಸ್ಯಾನಿಟೈಸರ್ ಮಾಡಿ, ಜಿಲ್ಲೆಯ ಒಳಗೆ ಬರುವಂತೆ ವ್ಯವಸ್ಥೆ ಮಾಡಿದ್ದಾರೆ.
ಜಿಲ್ಲೆಯಲ್ಲಿರುವ ಕೋಳಿ ಫಾಮ್ರ್ಗೆ ವೈದ್ಯಾಧಿಕಾರಿಗಳ ತಂಡ ಭೇಟಿ ನೀಡಿ ಶುಚಿತ್ವ ಕಾಪಾಡುವುದು ಹಾಗೂ ಕೋಳಿಗಳಿಗೆ ಹಕ್ಕಿಜ್ವರ ಇದೆಯೇ ಎಂಬುದನ್ನು ಪರಿಶೀಲನೆ ಮಾಡಲಾಗುತ್ತಿದೆ. ನಗರ ಮತ್ತು ಪುರಸಭಾ ವ್ಯಾಪ್ತಿಗಳಲ್ಲಿ ಕೋಳಿ ಅಂಗಡಿಗಳಲ್ಲಿ ಶುಚಿತ್ವ ಕಾಪಾಡುವ ಬಗ್ಗೆ ಅಧಿಕಾರಿಗಳು ಸೂಚನೆ ನೀಡಿದ್ದಾರೆ. ಸದ್ಯಕ್ಕೆ ಜಿಲ್ಲೆಯಲ್ಲಿ ಯಾವುದೇ ರೀತಿಯ ಹಕ್ಕಿ ಜ್ವರದ ಆತಂಕ ಇಲ್ಲ ಎಂದು ಪಶುಪಾಲನಾ ಇಲಾಖೆಯ ಉಪನಿರ್ದೇಶಕರು ಮಾಹಿತಿ ನೀಡಿದ್ದು, ಇದರಿಂದ ರೈತರು ಆತಂಕ ಪಡುವ ಅವಶ್ಯ ಇಲ್ಲ ಎಂದಿದ್ದಾರೆ.
ರೈತರ ಆಕ್ರೋಶ
ಕಲ್ಲಂಗಡಿ ಕಾಯಿ ಕೆಂಪು ಬಣ್ಣ ಬರಲು ಕಾಯಿಗೆ ಚುಚ್ಚು ಮದ್ದು ನೀಡಲಾಗುತ್ತಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ ಪ್ರಚಾರ ಮಾಡುವ ಮೂಲಕ ಸಾರ್ವಜನಿಕರಲ್ಲಿ ಆತಂಕ ಸೃಷ್ಟಿಸಿ ರೈತರು ಬೆಳೆದ ಕಲ್ಲಂಗಡಿ ಬೆಳೆಗೆ ಬೆಲೆ ಇಲ್ಲದಂತಾಗುತ್ತಿದೆ ಎಂದು ಕಲ್ಲಂಗಡಿ ಬೆಳೆಗಾರರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಬೀಜ ನಾಟಿ ಮಾಡಿದ 90 ದಿನಕ್ಕೆ ಕಾಯಿ ಕಟಾವಿಗೆ ಬರುತ್ತದೆ, ಈಗ ಬೇಸಿಗೆ ಕಾಲ ಆಗಿರುವುದರಿಂದ ಕಲ್ಲಂಗಡಿ ಬೆಳೆಗೆ 75 ದಿನ ತುಂಬುತ್ತಿದ್ದಂತೆ ನೈಸರ್ಗಿಕವಾಗಿಯೇ ಒಳಗೆ ಕೆಂಪು ಬಣ್ಣಕ್ಕೆ ತಿರುಗುತ್ತದೆ. ಸುಳ್ಳು ಸುದ್ದಿ ಹರಡಿಸಿ ಬೆಳೆಗೆ ಬೆಲೆ ಇಲ್ಲದಂತೆ ಮಾಡುವ ಹುನ್ನಾರ ನಡೆದಿದೆ ಎಂದು ರೈತರು ಆರೋಪಿಸುತ್ತಿದ್ದಾರೆ.
ಕೋಲಾರದ ಎಲ್ಐಸಿ ಕಚೇರಿ ಮುಂಭಾಗದ ಕಲ್ಲಂಗಡಿ ಹಣ್ಣು ಅಂಗಡಿ ಮತ್ತು ಬಂಗಾರಪೇಟೆ ರಸ್ತೆಯಲ್ಲಿರುವ ಕಲ್ಲಂಗಡಿ ಹಣ್ಣಿನ ಅಂಗಡಿಯಲ್ಲಿ ಹಣ್ಣಿನ ಸ್ಯಾಂಪಲ್ಅನ್ನು ಪಡೆದು ಲ್ಯಾಬಿಗೆ ಕಳುಹಿಸಿಕೊಡಲಾಗಿದೆ. ಒಂದು ಅಂಗಡಿಯಲ್ಲಿ ಹಳದಿ ಬಣ್ಣದ ಹಣ್ಣನ್ನು ಕಟಾವು ಮಾಡಲಾಗಿತ್ತು. ಅದನ್ನೂ ಪರಿಶೀಲಿಸಿದಾಗ ಸಿಹಿ ಹೆಚ್ಚಾಗಿತ್ತು. ಹಣ್ಣು ಒಂದೇ ಇದ್ದ ಕಾರಣ ಮತ್ತೆ ಹಣ್ಣನ್ನು ಮಾರುಕಟ್ಟೆಗೆ ತಂದರೆ ಸ್ಯಾಂಪಲ್ ನೀಡುವಂತೆ ಸೂಚನೆ ನೀಡಲಾಗಿದೆ. ಇದರ ಬಗ್ಗೆ ಅನುಮಾನವೂ ಇದೆ. ಸ್ಯಾಂಪಲ್ನ್ನು ತೆಗೆದು ಲ್ಯಾಬಿಗೆ ಕಳುಹಿಸಲಾಗಿದೆ. ವರದಿ ಬಂದರೆ ಕ್ರಮ ಕೈಗೊಳ್ಳಲಾಗುವುದು. ಉಳಿದಂತೆ ಬೇರೆ ಹಣ್ಣಿನ ಸ್ಯಾಂಪಲ್ ಅನ್ನು ಪಡೆದಿದ್ದೇವೆ. ಟಿಶ್ಯೂ ಪೇಪರ್ನಿಂದ ಒರೆಸಿದ್ದೇವೆ. ಬಣ್ಣ ಅಂಟಿಕೊಳ್ಳಲಿಲ್ಲ. ಹಳದಿ ಬಣ್ಣ ಹಣ್ಣಿನ ಬಗ್ಗೆ ಮಾತ್ರ ಸಂಶಯವಿದೆ.
-ಡಾ.ರಾಕೇಶ್, ಅಂಕಿತ ಅಧಿಕಾರಿ, ಆಹಾರ ಸುರಕ್ಷತೆ, ಗುಣಮಟ್ಟ ಇಲಾಖೆ, ಕೋಲಾರ
ಜಿಲ್ಲೆಯಲ್ಲಿ ಕೋಳಿಗಳಲ್ಲಿ ಹಕ್ಕಿಜ್ವರ ಕಾಣಿಸಿಕೊಂಡಿಲ್ಲ. ರೈತರು ಆತಂಕ ಪಡುವ ಅವಶ್ಯ ಇಲ್ಲ. ಹಕ್ಕಿಜ್ವರ ನಿಯಂತ್ರಣಕ್ಕೆ ಎಲ್ಲ ಕ್ರಮ ಕೈಗೊಳ್ಳಲಾಗಿದೆ. ಸುಳ್ಳು ಸುದ್ದಿ ಪ್ರಚಾರ ಆಗಿರಬಹುದು. ಆದರೆ ಕೋಳಿ ಮಾಂಸದ ಬೆಲೆ ಕಡಿಮೆಯಾಗಿಲ್ಲ. ಕಳೆದ ಒಂದು ವಾರದಿಂದ ಬೆಲೆ ಹೆಚ್ಚಾಗುತ್ತಿದೆ. ಇದರಿಂದ ರೈತರು ಆತಂಕಕ್ಕೆ ಒಳಗಾಗುವ ಅವಶ್ಯ ಇಲ್ಲ.
-ಡಾ.ರಮೇಶ್ ಉಪನಿರ್ದೇಶಕ, ಪಶುಪಾಲನ ಮತ್ತು ಪಶುವೈದ್ಯಕಿಯ ಇಲಾಖೆ, ಕೋಲಾರ
ಕಲ್ಲಂಗಡಿ ಹಣ್ಣಿಗೆ ಕೃತಕ ಬಣ್ಣ ಹಾಗೂ ಕೋಳಿಗಳಿಗೆ ಹಕ್ಕಿಜ್ವರ ಬಂದಿದೆ ಎಂದು ಸಾಮಾಜಿಕ ಜಾಲ ತಾಣಗಳಲ್ಲಿ ಸುಳ್ಳು ಸುದ್ದಿ ಪ್ರಚಾರವಾಗುತ್ತಿರುವುದರಿಂದ ರೈತರ ಬೆಳೆಗೆ ಬೆಲೆ ಮತ್ತು ಕೋಳಿ ಸಾಕಣೆದಾರರಿಗೆ ನಷ್ಟವಾಗುವ ಭೀತಿ ಎದುರಾಗಿದೆ. ಎರಡೂ ಇಲಾಖೆಯವರು ಸ್ಯಾಂಪಲ್ ತೆಗೆದುಕೊಂಡು ಸಾರ್ವಜನಿಕರಿಗೆ ಮಾಹಿತಿ ನೀಡಿ ಸಾರ್ವಜನಿಕರಲ್ಲಿ ಇರುವ ಆತಂಕ ದೂರ ಮಾಡಲಿ.
-ಕಾರ್ತಿಕ್ ರೆಡ್ಡಿ ಕಲ್ಲಂಗಡಿ ಬೆಳೆಗಾರ