

ಎನ್.ವೆಂಕಟೇಶ್, ಚಿಕ್ಕಬಳ್ಳಾಪುರ: ಪ್ರತಿ ವರ್ಷದಂತೆ ಬೇಸಿಗೆ ಪ್ರಾರಂಭಕ್ಕೆ ಮೊದಲೇ ಜಿಲ್ಲೆಯ ವಿವಿಧೆಡೆ ಜನರ ದಾಹ ನೀಗಿಸುವ ಕಲ್ಲಂಗಡಿ, ತಂಪು ಪಾನೀಯಾ ಅಂಗಡಿಗಳು ತಲೆ ಎತ್ತಿದ್ದು, ಮಾಲೀಕರು ಭರ್ಜರಿ ವ್ಯಾಪಾರದ ನಿರೀಕ್ಷೆಯಲ್ಲಿದ್ದಾರೆ.
ಜಿಲ್ಲೆಯಲ್ಲಿ ನಿಧಾನವಾಗಿ ಉಷ್ಣಾಂಶ ಏರಿಕೆ ಕಾಣುತ್ತಿದ್ದು, ಬೇಸಿಗೆಯ ಕಾವು ಗೋಚರವಾಗುತ್ತಿದೆ. ಇದರ ನಡುವೆ ಮಳೆ ಮತ್ತು ಚಳಿಗಾಲದಲ್ಲಿ ಸಪ್ಪೆ ವಹಿವಾಟನ್ನು ಕಾಣುತ್ತಿದ್ದ ತಂಪು ಆಹಾರ ಪದಾರ್ಥ ಮಾರಾಟ ಅಂಗಡಿಗಳು ಬೇಸಿಗೆಯಲ್ಲಿ ಉತ್ತಮ ವ್ಯಾಪಾರದ ಲೆಕ್ಕಾಚಾರದಲ್ಲಿ ಅಲ್ಲಲ್ಲಿ ತಲೆ ಎತ್ತುತ್ತಿವೆ.
ಈಗಾಗಲೇ ಜಿಲ್ಲಾ ಕೇಂದ್ರದಲ್ಲಿ ಅಣಕನೂರು ಸಮೀಪದ ಬೈಪಾಸ್ ರಸ್ತೆ, ಜೈ ಭೀಮ್ ವಿದ್ಯಾರ್ಥಿ ನಿಲಯ, ವಾಪಸಂದ್ರ, ಬಿ.ಬಿ.ರಸ್ತೆಯಲ್ಲಿ ಕಲ್ಲಂಗಡಿ ಅಂಗಡಿಗಳು ವಹಿವಾಟಿನಲ್ಲಿ ತೊಡಗಿದ್ದು, ತಂಪು ಪಾನೀಯಾ, ಎಳನೀರು, ತಾಟನಿಂಗು ಸೇರಿ ಬಾಯಾರಿಕೆ ನೀಗಿಸುವ ಪಾನೀಯಾಗೆ ಜನ ಮೊರೆ ಹೋಗುತ್ತಿದ್ದಾರೆ. ಮತ್ತೊಂದೆಡೆ ಪ್ರತಿ ವರ್ಷದಂತೆ ಆಂದ್ರ ಸೇರಿದಂತೆ ಹಲವೆಡೆಯಿಂದ ವ್ಯಾಪಾರಿಗಳು ಲೋಡುಗಟ್ಟಲೇ ಹಣ್ಣನ್ನು ತರಿಸಿಕೊಂಡು ದಾಸ್ತಾನಿಟ್ಟಿದ್ದು ವಹಿವಾಟು ನಡೆಸುತ್ತಿದ್ದಾರೆ. ಈಗಾಗಲೇ ಕಲ್ಲಂಗಡಿಗೆ ಬೇಡಿಕೆ ಹೆಚ್ಚಾಗುತ್ತಿದ್ದು, ಅಂಗಡಿಗಳ ಮುಂಭಾಗ ಜನರು ನಿಂತು, ಕಲ್ಲಂಗಡಿ ಸೇವಿಸುವ ದೃಶ್ಯಗಳು ಕಂಡು ಬರುತ್ತಿವೆ. ಜತೆಗೆ ಹಲವು ಕೆ.ಜಿ ಲೆಕ್ಕದಲ್ಲಿ ಕಲ್ಲಂಗಡಿ ಖರೀದಿಸಿ ಮನೆಗಳಿಗೆ ತೆಗೆದುಕೊಂಡು ಹೋಗುತ್ತಿದ್ದಾರೆ. ಇತ್ತೀಚೆಗೆ ಸ್ಟುಡಿಯೋ, ಖಾಸಗೀ ಕಂಪನಿ ಸೇರಿದಂತೆ ಅಂಗಡಿಗಳಲ್ಲಿ ಅತಿಥಿಗಳಿಗಾಗಿ ಟೀ, ಕಾಫಿ, ಹಾಲು ತರಿಸಿ ಕೊಡುವುದರ ಬದಲು ತಂಪು ಪಾನೀಯಾಗಳಿಗೇನೇ ಆದ್ಯತೆ ನೀಡಲಾಗುತ್ತಿದೆ. ಸೇಬು, ಕಿತ್ತಲೆ, ಮೂಸಂಬಿ, ಸಪೋಟಾ, ಖರಬೂಜ, ದಾಳಿಂಬೆ ಸೇರಿ ಬಗೆ ಬಗೆಯ ಪಾನಿಯ ಮಾರಾಟದ ಅಂಗಡಿಗಳಲ್ಲಿ ಹೆಚ್ಚಿನ ಆದ್ಯತೆ ನೀಡಲಾಗಿದೆ. ಮುಂಬರುವ ದಿನಗಳಲ್ಲಿ ಐಸ್‌ಕ್ರೀಮ್ ಮತ್ತು ಐಸ್ ಕ್ಯಾಂಡಿ ಮಾರಾಟಕ್ಕೆ ಮತ್ತೆ ಕಳೆ ಬರಲಿದೆ.
ಎಳನೀರುಗೂ ಹೆಚ್ಚಿದ ಬೇಡಿಕೆ
ಪ್ರಸ್ತುತ ಎಳನೀರು, ಮಜ್ಜಿಗೆಗೂ ಹೆಚ್ಚಿನ ಬೇಡಿಕೆ ಕಂಡು ಬರುತ್ತಿದೆ. ಇದಕ್ಕೆ ವಿಜಯಪುರ, ದೇವನಹಳ್ಳಿ ಸೇರಿ ಹಲವೆಡೆ ಒಳ್ಳೆಯ ಎಳನೀರುಗಳನ್ನು ತಂದು ವ್ಯಾಪಾರಸ್ಥರು ಗ್ರಾಹಕರನ್ನು ಸೆಳೆಯುತ್ತಿದ್ದಾರೆ. ನಂದಿನಿ ಪಾರ್ಲರ್, ಅಂಗಡಿಗಳಲ್ಲಿ ಮಜ್ಜಿಗೆ ಪ್ಯಾಕೇಟ್‌ಗಳು ಭರ್ಜರಿ ವ್ಯಾಪಾರ ನಡೆಸುತ್ತಿದ್ದಾರೆ.
ಸದ್ಯಕ್ಕೆ ಬಿಸಿಲಿನ ಬೇಗೆ ಅಷ್ಟಾಗಿ ಇಲ್ಲ. ಆದರೆ, ಮುಂಬರುವ ದಿನಗಳಲ್ಲಿ ಬಿಸಿಲು ಹೆಚ್ಚಾಗಲಿದ್ದು, ಇದಕ್ಕೆ ಸಾಮಾನ್ಯವಾಗಿ ಕಲ್ಲಂಗಡಿ ಸೇರಿದಂತೆ ಬಗೆಬಗೆಯ ಹಣ್ಣಿನ ಪಾನೀಯಾಗಳನ್ನು ಸೇವಿಸಿ ದಾಹವನ್ನು ನೀಗಿಸಿಕೊಳ್ಳಲಾಗುತ್ತದೆ.
ಕೆಂಪೇಗೌಡ ಗ್ರಾಹಕ, ಚಿಕ್ಕಬಳ್ಳಾಪುರ
ನಿಧಾನವಾಗಿ ದಾಹವನ್ನು ನೀಗಿಸಿಕೊಳ್ಳಲು ಜನರು ತಂಪು ಪಾನೀಯಾಗಳ ಮೊರೆ ಹೋಗಿದ್ದು ಇದಕ್ಕೆ ಕಲ್ಲಂಗಡಿಯ ಲೋಡನ್ನು ತರಿಸಿ, ವಹಿವಾಟು ಕೈಗೊಳ್ಳಲಾಗುತ್ತಿದೆ.
ರಾಜಪ್ಪ ಕಲ್ಲಂಗಡಿ ಹಣ್ಣು ಮಾರಾಟಗಾರ