

ವಿಜಯವಾಣಿ ಸುದ್ದಿಜಾಲ ಪಡುಬಿದ್ರಿ ಕಾಪು ತಾಲೂಕಿನಲ್ಲಿ ಬುಧವಾರ ರಾತ್ರಿ ಸುರಿದ ಮಳೆಗೆ ಕೆಲವೆಡೆ ಸಂಪರ್ಕ ರಸ್ತೆ ಸಂಚಾರ ಸ್ಥಗಿತಗೊಂಡರೆ, ತಗ್ಗು ಪ್ರದೇಶದಲ್ಲಿ ಮನೆಗಳು ಜಲಾವೃತವಾಗಿ ಜನಜೀವನ ಅಸ್ತವ್ಯಸ್ತವಾಗಿತ್ತು. ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರ: ತಹಸೀಲ್ದಾರ್ ಪ್ರತಿಭಾ ಆರ್. ನೇತೃತ್ವದಲ್ಲಿ ಸ್ಥಳೀಯಾಡಳಿತ, ಗೃಹರಕ್ಷಕ ದಳ ಸಿಬ್ಬಂದಿ ಮತ್ತು ಈಜುಗಾರರ ತಂಡ ನೆರೆಯಿಂದ ಸಂಕಷ್ಟಕ್ಕೊಳಗಾದ ಕುಟುಂಬಗಳನ್ನು ಸ್ಥಳಾಂತರಿಸಿ ಕಾಳಜಿ ಕೇಂದ್ರ ಮತ್ತು ಸಂಬಂಧಿಕರ ಮನೆಗೆ ಸುರಕ್ಷಿತವಾಗಿ ಕಳುಹಿಸಿಕೊಟ್ಟರು. ಕೃಷಿ ಭೂಮಿಗಳು ಮುಳುಗಡೆ: ತಾಲೂಕಿನ ಹೆಜಮಾಡಿ, ಪಡುಬಿದ್ರಿ ರಾಷ್ಟ್ರೀಯ ಹೆದ್ದಾರಿ 66ರ ಕೊಂಬೆಟ್ಟು ಪರಿಸರ, ಪಾದೆಬೆಟ್ಟು ಹೊಯಿಗೆ ತೋಟ, ಪಲಿಮಾರು ಗ್ರಾಮದ ಮೂಡುಪಲಿಮಾರು, ಅಡ್ವೆಬೈಲು ತೋಟ, ಪೂಂಜಮಾರು, ಕಾಪು ಪುರಸಭೆ ವ್ಯಾಪ್ತಿಯ ಮಲ್ಲಾರು, ಕಾಪು, ಉಳಿಯಾರಗೋಳಿ ಹಾಗೂ ಪಾಂಗಾಳ ಪ್ರದೇಶದಲ್ಲಿ ಹಲವು ಮನೆಗಳು ಜಲಾವೃತಗೊಂಡಿದ್ದು ಕೃಷಿ ಭೂಮಿ ಮುಳುಗಡೆಯಾಗಿವೆ. ಇನ್ನಂಜೆ ಮರ್ಕೋಡಿ ರಸ್ತೆ, ಬೆಳಪು ಮೂಳೂರು ರಸ್ತೆ, ಎರ್ಮಾಳು ಅದಮಾರು ರಸ್ತೆ, ಕರಂದಾಡಿ ಕಲ್ಲುಗುಡ್ಡೆ ರಸ್ತೆ ಮುಳುಗಡೆಯಾಗಿ ವಾಹನ ಸಂಚಾರಕ್ಕೆ ಅಡ್ಡಿಯಾಯಿತು. ಕಾಪು ಪಡು ರಾಮನಗರದ ವಸತಿ ಬಡಾವಣೆ, ಬೆಳಪು ಮೂಳೂರು ಜಾರಂದಾಯ ರಸ್ತೆ ಪಕ್ಕದ ಹಲವಾರು ಮನೆಗಳು ಜಲಾವೃತಗೊಂಡಿದ್ದು ಜನಜೀವನ ಅಸ್ತವ್ಯಸ್ತಗೊಂಡಿದೆ. ಎಲ್ಲೂರು ಗ್ರಾಮದ ಕುಂಜೂರು ಶ್ರೀ ದುರ್ಗಾ ದೇವಸ್ಥಾನ ಅಂಗಣಕ್ಕೆ ನೀರು ನುಗ್ಗಿದ್ದು ಭಕ್ತರು ಸಂಕಷ್ಟ ಅನುಭವಿಸಿದರು. ತೆಂಕ ಗ್ರಾಮದ ಎಲ್ಲದಡಿ ಪ್ರದೇಶದಲ್ಲಿ ಕೃಷಿ ಭೂಮಿಗೆ ಮಣ್ಣು ತುಂಬಿಸಿದ ಪರಿಣಾಮ ಕೃತಕ ನೆರೆ ಉಂಟಾಗಿದೆ. ಪರಿಸರದ ಮನೆಗಳು ಜಲಾವೃತವಾಗಿದೆ. ಮನೆಯಲ್ಲಿ ಸಂಗ್ರಹಿಸಿಟ್ಟಿದ್ದ ತೆಂಗಿನ ಕಾಯಿಗಳು ನೆರೆಯಲ್ಲಿ ಕೊಚ್ಚಿಕೊಂಡು ಹೋಗಿವೆ ಎಂದು ಶಿವಪ್ರಸಾದ್ ಶೆಟ್ಟಿ ಅಳಲು ತೋಡಿಕೊಂಡರು. ತಾಲೂಕಿನಲ್ಲಿ ಹರಿಯುತ್ತಿರುವ ಕಾಮಿನಿ ಹೊಳೆ, ಪಾಪನಾಶಿನಿ ನದಿಗಳ ಹೂಳೆತ್ತಿಸಿ ಸ್ವಚ್ಛಗೊಳಿಸಿದರೆ ನೆರೆಯ ಸಮಸ್ಯೆಗೆ ಪರಿಹಾರ ಸಿಗುತ್ತದೆ. ಮುಂದಿನ ದಿನಗಳಲ್ಲಿ ನದಿಗಳ ಸ್ವಚ್ಛತಾ ಕಾರ್ಯಕ್ಕೆ ಕ್ರಮ ವಹಿಸಲಾಗುವುದು ಎಂದು ಕಾಪು ತಹಸೀಲ್ದಾರ್ ಪ್ರತಿಭಾ ಆರ್. ತಿಳಿಸಿದರು. ಗೃಹರಕ್ಷಕ ದಳದ ಸಿಬ್ಬಂದಿ ಕುಮಾರ್, ಮಹೇಶ್ ಮತ್ತಿತರರು ತಹಸೀಲ್ದಾರ್ ಅವರಿಗೆ ರಕ್ಷಣಾ ಕಾರ್ಯಾಚರಣೆಗೆ ಸಾತ್ ನೀಡಿದರು. ಕಂದಾಯ ನಿರೀಕ್ಷಕ ಇಜ್ಜಾರ್ ಸಾಬಿರ್, ಗ್ರಾಮಾಡಳಿತಾಧಿಕಾರಿಗಳಾದ ಶ್ರೀಕಾಂತ್, ಮಥಾಯ್, ಹೆಜಮಾಡಿ ಗ್ರಾಪಂ ಅಧ್ಯಕ್ಷೆ ರೇಷ್ಮಾ ಮೆಂಡನ್ ಸಹಕರಿಸಿದರು.
ತಾಲೂಕು ಆಡಳಿತ ನೆರೆ ಪರಿಸ್ಥಿತಿ ಎದುರಿಸಲು ಸರ್ವ ಸನ್ನದ್ಧವಾಗಿದೆ. ಬೋಟುಗಳನ್ನು ಸಿದ್ಧವಾಗಿಟ್ಟುಕೊಳ್ಳಲಾಗಿದೆ. ನುರಿತ ಈಜುಗಾರರ ತಂಡ ಸದಾ ಸೇವೆಗೆ ಲಭ್ಯವಿದೆ. ತಹಸೀಲ್ದಾರ್ ಕಚೇರಿ ಕಂಟ್ರೋಲ್ ರೂಮ್ 24 ಗಂಟೆಯೂ ಕಾರ್ಯ ನಿರ್ವಹಿಸುತ್ತಿದೆ. ಸಾರ್ವಜನಿಕರು ಯಾವುದೇ ಸಂದರ್ಭದಲ್ಲಿ ಕರೆ ಮಾಡಿ ಸಹಾಯ ಪಡೆಯಬಹುದು. - ಪ್ರತಿಭಾ ಆರ್. ಕಾಪು ತಹಸೀಲ್ದಾರ್ https://www.vijayavani.net/the-art-of-living-must-also-be-taught https://www.vijayavani.net/special-training-for-primary-fishermen-cooperative-societies-of-udupi-district-in-malpe