

ಹುಬ್ಬಳ್ಳಿ: ಇಲ್ಲಿಯ ಕುಸುಗಲ್ ರಸ್ತೆಯ ಲಕ್ಷ್ಮೀ ಎಸ್ಟೇಟ್ ಬಡಾವಣೆ ಕ್ರಾಸ್ ನಿಂದ ಸನ್ ಸಿಟಿ ಹೆರಿಟೇಜ್ ಲೇಔಟ್ ಕ್ರಾಸ್ ಮಧ್ಯದ ಮುಖ್ಯ ರಸ್ತೆಯಲ್ಲಿ ಕುಡಿಯುವ ನೀರಿನ ಪೈಪ್ ಲೈನ್ ಒಡೆದು ವರ್ಷ ಕಳೆದರೂ ದುರಸ್ತಿಯಾಗುತ್ತಿಲ್ಲ.
ಸದಾ ಜಿನುಗುವ ನೀರಿನಿಂದ ಸಮೀಪದಲ್ಲಿ ಹೊಂಡ ನಿರ್ಮಾಣವಾಗಿದೆ. ಇದು ಹಂದಿ, ನಾಯಿಗಳ ಅಡ್ಡೆಯಾದಂತಾಗಿದೆ. ಅಲ್ಲದೇ ಸೊಳ್ಳೆಗಳ ತಾಣವಾಗಿದೆ.
ಇದೇ ಗಲೀಜು ನೀರು ಒಡೆದ ಪೈಪ್ಲೈನ್ ಮೂಲಕ ಮನೆಗಳ ನಲ್ಲಿಯಲ್ಲಿ ಬರುತ್ತಿದೆ. ಈ ಬಗ್ಗೆ ಮಹಾನಗರ ಪಾಲಿಕೆಗೆ ದೂರು ನೀಡಿದರೆ ಎಲ್ ಆ್ಯಂಡ್ ಟಿ ಕಂಪನಿಗೆ ಹೇಳಿ ಎನ್ನುತ್ತಾರೆ. ಎಲ್ ಆಂಡ್ ಟಿ ಕಂಪನಿಯ ಅಧಿಕಾರಿಗಳ ಗಮನಕ್ಕೆ ತಂದರೆ ಪಾಲಿಕೆಗೆ ತಿಳಿಸಿ ಎಂದು ಜಾರಿಕೊಳ್ಳುತ್ತಿದ್ದಾರೆ.
ಇಬ್ಬರ ನಡುವೆ ಬಡಾವಣೆಯ ಸಮಸ್ಯೆ ಮಾತ್ರ ಹಾಗೇ ಉಳಿದಿದೆ. ಕುಡಿಯುವ ನೀರಿನ ವಾಲ್ವ ಇಲ್ಲಿದ್ದು, ಇದು ಭೂಮಿಗೆ ಸಮತಟ್ಟಾಗಿದೆ. ದನಕರುಗಳು ನೀರು ಕುಡಿಯಲು ಬರುತ್ತವೆ. ಅಲ್ಲದೇ ಮಕ್ಕಳು ಆಯ ತಪ್ಪಿ ಬಿದ್ದರೆ ಅಪಾಯ ಇದ್ದೇ ಇದೆ ಎಂದು ಸ್ಥಳಿಯರು ದೂರಿದ್ದಾರೆ.
ಕುಡಿಯುವ ನೀರು ವ್ಯಯ ಆಗುವುದಷ್ಟೇ ಅಲ್ಲ ಸುತ್ತಲಿನ ವಾತಾವರಣ ಸಹ ಕೆಡಿಸಿದೆ. ಮನೆಗಳಿಗೆ ಕಲುಷಿತ ನೀರು ಸರಬರಾಜು ಆಗುತ್ತಿದೆ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಸಮಸ್ಯೆ ನಿವಾರಣೆ ಮಾಡಬೇಕು. ಸ್ವಚ್ಛ ಪರಿಸರ ನಿಮಿರ್ಸಬೇಕು ಎಂದು ಸ್ಥಳಿಯರಾದ ಶಿವಕುಮಾರ, ಲೋಕೇಶ, ಶ್ರೀನಿವಾಸ, ಹಾವೇರಿ, ರುದ್ರಪ್ಪ, ಶಿವಳ್ಳಿ ಇತರರು ಆಗ್ರಹಿಸಿದ್ದಾರೆ.