

ಮೈಸೂರು: ಪ್ರಕೃತಿಯ ಅಸಮತೋಲನ, ಮಾನವ ನಿರ್ಮಿತ ಕೆಲವು ತಪ್ಪುಗಳಿಂದ ಪಕ್ಷಿ ಸಂಕುಲ ಅಳಿವಿನ ಅಂಚಿನಲ್ಲಿದೆ ಎಂದು ಉರುಗ ತಜ್ಞ ಸ್ನೇಕ್ ಶ್ಯಾಂ ವಿಷಾದ ವ್ಯಕ್ತಪಡಿಸಿದರು.
ಸರಸ್ವತಿಪುರಂನಲ್ಲಿರುವ ಟಿ.ಟಿ.ಎಲ್. ಟ್ರಸ್ಟ್ ಹಾಗೂ ಟಿಟಿಎಲ್ ವಾಣಿಜ್ಯ ವ್ಯವಹಾರ ನಿರ್ವಹಣಾ ಕಾಲೇಜು, ಟಿ.ಟಿ.ಎಲ್. ಸ್ವತಂತ್ರ ಪದವಿ ಪೂರ್ವ ಕಾಲೇಜು, ಯುವ ರೆಡ್ ಕ್ರಾಸ್ ಘಟಕ, ರಾಷ್ಟ್ರೀಯ ಸೇವಾ ಯೋಜನೆ ಘಟಕ ಮತ್ತು ಐಕ್ಯುಎಸಿ ವತಿಯಿಂದ ಟಿಟಿಎಲ್ ಕಾಲೇಜು ಆವರಣದಲ್ಲಿ ಮಂಗಳವಾರ ಬಿಸಿಲ ತಾಪಕ್ಕೆ ಬಸವಳಿಯುವ ಪ್ರಾಣಿ-ಪಕ್ಷಿಗಳಿಗೆ ನೀರುಣಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಅನಾದಿ ಕಾಲದಿಂದಲೂ ಮನುಷ್ಯನಿಗೆ ಪ್ರಕೃತಿಯೊಂದಿಗೆ ಅವಿನಾಭಾವ ಸಂಬಂಧವಿದೆ. ಆದರೆ ಮನುಷ್ಯನ ಕೆಲವು ತಪ್ಪುಗಳಿಂದ ಪ್ರಕೃತಿಯಲ್ಲಿ ಅಸಮತೋಲನ ಉಂಟಾಗಿ ಪ್ರಾಣಿ, ಪಕ್ಷಿಗಳಿಗೂ ತೊಂದರೆ ಉಂಟಾಗುತ್ತಿದೆ. ಬೇಸಿಗೆಯ ತಾಪಮಾನದಲ್ಲಿ ಪ್ರಾಣಿ, ಪಕ್ಷಿಗಳು ನೀರಿಲ್ಲದೆ ಕಂಗೆಡುವ ಸ್ಥಿತಿ ಇದೆ. ಪರಿಸರದ ಜತೆಗೆ ಪ್ರಾಣಿ, ಪಕ್ಷಿಗಳ ಸಂರಕ್ಷಣೆ ನಮ್ಮ ಜವಾಬ್ದಾರಿಯಾಗಿದೆ ಎಂದರು
ಭವಿಷ್ಯದ ರೂವಾರಿಗಳಾದ ವಿದ್ಯಾರ್ಥಿಗಳಲ್ಲಿ ಈ ಬಗ್ಗೆ ಅರಿವು ಮೂಡಿಸಿ ಪಕ್ಷಿಗಳಿಗೆ ನೀರುಣಿಸುವ ಕಾರ್ಯಕ್ಕೆ ಮುಂದಾಗಿರುವುದು ಮಾದರಿ ಕಾರ್ಯವೆನಿಸಿದೆ. ವಿದ್ಯಾರ್ಥಿಗಳು ಹಾಗೂ ಯುವ ಸಂಘಟನೆಗಳು ಇದನ್ನು ಆಂದೋಲನದ ಮಾದರಿಯಲ್ಲಿ ಜಿಲ್ಲೆಯ ಎಲ್ಲೆಡೆ ಹಮ್ಮಿಕೊಳ್ಳಬೇಕು. ಆ ಮೂಲಕ ಪ್ರಾಣಿ, ಪಕ್ಷಿಗಳನ್ನು ಪ್ರೀತಿಸುವ ವಾತಾವರಣ ನಿರ್ಮಾಣವಾಗಬೇಕು ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಟಿ.ಟಿ.ಎಲ್. ಕಾಲೇಜಿನ ಪ್ರಾಂಶುಪಾಲರೂ ಅದ ಆಡಳಿತ ಮತ್ತು ನಿಯೋಜನೆ ಅಧಿಕಾರಿ ಡಾ.ಬಿ.ವಿ.ಪ್ರಶಾಂತ್ ಅಧ್ಯಕ್ಷತೆ ವಹಿಸಿದ್ದರು. ಟಿಟಿಎಲ್ ಟ್ರಸ್ಟ್‌ನ ಡಾ.ಗೀತಾ ರಾಮ್‌ದಾಸ್, ಕೆಎಂಪಿಕೆ ಟ್ರಸ್ಟ್ ಅಧ್ಯಕ್ಷ ವಿಕ್ರಂ ಅಯ್ಯಂಗಾರ್, ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಎಸ್.ಭ್ರಮರಾಂಬ, ಉಪನ್ಯಾಸಕ ಪ್ರೊ.ಎನ್.ಎಂ.ರಾಮಚಂದ್ರಯ್ಯ, ರೆಡ್ ಕ್ರಾಸ್ ಯುವ ಘಟಕದ ಸಂಚಾಲಕ ಎಚ್.ಆರ್.ಗಿರೀಶ್, ಪ್ರಜ್ಞಾವಂತ ನಾಗರಿಕ ವೇದಿಕೆ ಅಧ್ಯಕ್ಷ ಕಡಕೊಳ ಜಗದೀಶ್, ಪದಾಧಿಕಾರಿಗಳಾದ ಸುಚಿಂದ್ರ, ಮಿರ್ಲೆ ಪನೀಶ್ ಮತ್ತಿತರರಿದ್ದರು.
ಹಕ್ಕಿಗಳಿಗೆ ನೀರುಣಿಸಲು ಬಟ್ಟಲು ಹಾಗೂ ಸಿಮೆಂಟ್ ತೊಟ್ಟಿಗೆ ನೀರು ಹಾಕುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.