

ಕಳಸ: ಎಳನೀರಿನ ಬಂಗಾರ್ ಪಲ್ಕೆ ಕುದುರೆಮುಖ ರಾಷ್ಟ್ರೀಯ ಉದ್ಯಾನವನದ ಅಂಚಿನಲ್ಲಿರುವ ಜಲಪಾತದಲ್ಲಿ ಗುಡ್ಡ ಕುಸಿದು ಕಣ್ಮರೆಯಾದ ಯುವಕನನನ್ನು ಆರು ದಿನವಾದರೂ ಪತ್ತೆ ಹಚ್ಚಲು ಸಾಧ್ಯವಾಗಿಲ್ಲ.
ಜ.25ರಂದು ಬೆಳ್ತಂಗಡಿ ತಾಲೂಕಿನ ಲಾಯಿಲ ಗ್ರಾಮದ ಕಾಶಿಬೆಟ್ಟುವಿನ ಸನತ್ ಶೆಟ್ಟಿ ಮತ್ತು ಆತನ ಇಬ್ಬರು ಗೆಳೆಯರು ಜಲಪಾತ ನೋಡಲು ಬಂದಿದ್ದರು. ಆ ಸಂದರ್ಭದಲ್ಲಿ ಜಲಪಾತದ ಒಂದು ಬದಿಯ ಗುಡ್ಡ ಕುಸಿದಿತ್ತು. ಸನತ್ ಶೆಟ್ಟಿ ಗೆಳೆಯರು ತಪ್ಪಿಸಿಕೊಂಡಿದ್ದರು. ಸನತ್ ಶೆಟ್ಟಿ ಮಣ್ಣಿನಡಿ ಸಿಲುಕಿದ್ದಾನೆ.
ಸ್ಥಳೀಯರು ಮಣ್ಣಿನ ತೆರವು ಕಾರ್ಯಾಚರಣೆಗೆ ಇಳಿದಿದ್ದರು. ನಂತರ ದಿನಗಳಲ್ಲಿ ಎಸ್ಡಿಆರ್ಎಫ್, ಪೊಲೀಸರು, ಅಗ್ನಿಶಾಮಕ ದಳ, ಧರ್ಮಸ್ಥಳ ವಿಪತ್ತು ನಿರ್ವಹಣಾ ತಂಡಗಳು ಮಣ್ಣು ತೆರವು ಕಾರ್ಯಾಚರಣೆ ನಡೆಸಿದರೂ ಯುವಕನನ್ನು ಪತ್ತೆಹಚ್ಚಲು ಸಾಧ್ಯವಾಗಿಲ್ಲ. ಶನಿವಾರವೂ ಮಣ್ಣು ತೆಗೆದರು. ಬೃಹತ್ ಬಂಡೆಗಳು ಉರುಳಿದ್ದು, ಸ್ಥಳಕ್ಕೆ ಯಾವುದೇ ವಾಹನಗಳು ತೆರಳಲು ಸಾಧ್ಯವಾಗದಿರುವುದರಿಂದ ಬಂಡೆಗಳ ತೆರವು ಮಾಡಲು ಸಾಧ್ಯವಾಗುತ್ತಿಲ್ಲ.