ರಾಮನಗುಡ್ಡೆ ಡ್ಯಾಂಗೆ ಹರಿದು ಬರಲಿದೆ ನೀರು

ಬೂದುಬಾಳು ನೀರಿನ ಘಟಕದಿಂದ ಹಳ್ಳದ ಮೂಲಕ ರಾಮನಗುಡ್ಡೆ ಡ್ಯಾಂಗೆ ನೀರು ಹರಿಸಲು ಹೂಳೆತ್ತುವ ಕಾಮಗಾರಿಗೆ ಶಾಸಕ ಎಂ.ಆರ್ ಮಂಜುನಾಥ್ ಭೂಮಿಪೂಜೆ ನೆರವೇರಿಸಿದರು. ಮಾದಪ್ಪ, ಕರಿಯಪ್ಪ, ವಿಜಯಕುಮಾರ್ ಇತರರು ಇದ್ದರು.
ಬೂದುಬಾಳು ನೀರಿನ ಘಟಕದಿಂದ ಹಳ್ಳದ ಮೂಲಕ ರಾಮನಗುಡ್ಡೆ ಡ್ಯಾಂಗೆ ನೀರು ಹರಿಸಲು ಹೂಳೆತ್ತುವ ಕಾಮಗಾರಿಗೆ ಶಾಸಕ ಎಂ.ಆರ್ ಮಂಜುನಾಥ್ ಭೂಮಿಪೂಜೆ ನೆರವೇರಿಸಿದರು. ಮಾದಪ್ಪ, ಕರಿಯಪ್ಪ, ವಿಜಯಕುಮಾರ್ ಇತರರು ಇದ್ದರು.
Published on

ಹನೂರು: ಬೂದುಬಾಳು ಗ್ರಾಮ ಸಮೀಪದ ನೀರು ಘಟಕದಿಂದ ತಾಲೂಕಿನ ರಾಮನಗುಡ್ಡೆ ಡ್ಯಾಂಗೆ ಹಳ್ಳದ ಮೂಲಕ ನೀರು ಹರಿಸುವ ಕಾರ್ಯದ ಹೂಳೆತ್ತುವ ಕಾಮಗಾರಿಗೆ ಸೋಮವಾರ ಶಾಸಕ ಎಂ.ಆರ್ ಮಂಜುನಾಥ್ ಚಾಲನೆ ನೀಡಿದರು.

ಕ್ಷೇತ್ರ ವ್ಯಾಪ್ತಿಯ ಹುಬ್ಬೆಹುಣಸೆ, ರಾಮನಗುಡ್ಡೆ ಹಾಗೂ ಗುಂಡಾಲ್ ಜಲಾಶಯದ ಅಚ್ಚುಕಟ್ಟು ಪ್ರದೇಶದಲ್ಲಿ ಹೆಚ್ಚಿನ ರೈತರು ಕೃಷಿ ಮಾಡುತ್ತಿದ್ದು, ಬೇಸಿಗೆಯಲ್ಲಿ ಈ ಡ್ಯಾಂಗಳಲ್ಲಿ ನೀರಿನ ಪ್ರಮಾಣ ಕಡಿಮೆಯಾಗುತ್ತಿತ್ತು. ಇದರಿಂದ ಕೃಷಿಗೆ ತೊಡಕಾಗಿತ್ತು. ಅಲ್ಲದೆ ಡ್ಯಾಂಗಳಿಗೆ ನದಿ ಮೂಲದಿಂದ ನೀರು ತುಂಬಿಸುವಂತೆ ರೈತರು ಒತ್ತಾಯಿಸುತ್ತಿದ್ದ ಹಿನ್ನೆಲೆಯಲ್ಲಿ 5 ವರ್ಷದ ಹಿಂದೆ ಕ್ಷೇತ್ರ ವ್ಯಾಪ್ತಿಯ ಈ 3 ಜಲಾಶಯಕ್ಕೆ ಕಾವೇರಿ ನದಿ ಮೂಲದಿಂದ ನೀರು ತುಂಬಿಸುವ ಯೋಜನೆಯಡಿ 132 ಕೋಟಿ ರೂ. ವೆಚ್ಚದಲ್ಲಿ ಕಾಮಗಾರಿ ಕೈಗೊಳ್ಳಲಾಗಿತ್ತು.

ಆದರೆ ಕಾಮಗಾರಿ ಕಾರಣಾಂತರದಿಂದ ಬೂದುಬಾಳು ಗ್ರಾಮದವರೆಗಷ್ಟೇ ಆಗಿತ್ತು. ಇದರಿಂದ ಈ 3 ಡ್ಯಾಂಗಳಿಗೆ ನೀರು ಪೂರೈಕೆ ಸಾಧ್ಯವಾಗಿರಲಿಲ್ಲ. ಬಳಿಕ ಕಾಮಗಾರಿ ಕೈಗೊಂಡ ಹಿನ್ನೆಲೆಯಲ್ಲಿ ಗುಂಡಾಲ್ ಜಲಾಶಯಕ್ಕೆ ನೀರು ಸರಬರಾಜಾಯಿತಾದರೂ ಇನ್ನುಳಿದ ರಾಮನಗುಡ್ಡೆ ಹಾಗೂ ಹುಬ್ಬೆಹುಣಸೆ ಡ್ಯಾಂಗೆ ಕೈಗೊಳ್ಳಬೇಕಿದ್ದ ಪೈಪ್‌ಲೈನ್ ಕಾಮಗಾರಿ ಕೆಲ ಕಾರಣಾಂತದಿಂದ ಸ್ಥಗಿತಗೊಂಡಿತ್ತು. ಇದರಿಂದ ನದಿ ಮೂಲದಿಂದ ನೀರೋದಗಿಸುವ ಕಾರ್ಯ ನನೆಗುದಿಗೆ ಬಿದ್ದಿತ್ತು. ಅಲ್ಲದೆ ಸರ್ಕಾರದಿಂದ ಅನುದಾನ ಸಿಗದ ಪರಿಣಾಮ ಕಾಮಗಾರಿಯನ್ನು ಕೈಗೊಳ್ಳಲು ಸಾಧ್ಯವಾಗಿರಲಿಲ್ಲ.

ನದಿ ಮೂಲದಿಂದ ಕೈಗೊಂಡಿರುವ ಪೈಪ್‌ಲೈನ್ ಕಾಮಗಾರಿ ಬೂದುಬಾಳು ಗ್ರಾಮದಲ್ಲಿ ಸ್ಥಗಿತಗೊಂಡಿದೆ. ಇಲ್ಲಿಂದ ರಾಮನಗುಡ್ಡೆ ಹಾಗೂ ಹುಬ್ಬೆಹುಣಸೆ ಜಲಾಶಯಕ್ಕೆ ನೀರು ಪೂರೈಸಬೇಕಾದರೆ ಪೈಪ್‌ಲೈನ್ ಆಗಬೇಕಿದೆ. ಆದರೆ ಸರ್ಕಾರದಿಂದ ಅನುದಾನ ದೊರೆತಿಲ್ಲ. ಗುಂಡಾಲ್ ಜಲಾಶಯಕ್ಕೆ ನೀರು ಪೂರೈಕೆಯಾಗುತ್ತಿರುವ ಬೂದುಬಾಳು ಬಳಿಯ ನೀರಿನ ಘಕಟದಿಂದ ಹಳ್ಳದ ಮೂಲಕ ರಾಮನಗುಡ್ಡೆ ಡ್ಯಾಂಗೆ ನೀರು ಹರಿಸಬಹುದಾಗಿದೆ. ಈ ಬಗ್ಗೆ ಅಗತ್ಯ ಕ್ರಮವಹಿಸಿದ ಶಾಸಕರು ಹಿರಿಯ ಅಧಿಕಾರಿಗಳನ್ನು ಸ್ಥಳಕ್ಕೆ ಕರೆಯಿಸಿ ಪರಿಶೀಲಿಸಲಾಗಿ ಹಳ್ಳದ ಮೂಲಕ ರಾಮನಗುಡ್ಡೆ ಡ್ಯಾಂಗೆ ನೀರು ಹರಿಸಬಹುದು ಎಂದು ಅಧಿಕಾರಿಗಳು ಸಲಹೆ ನೀಡಿದ್ದರು. ಇದರ ಪರಿಣಾಮ ಸೋಮವಾರ ಬೂದುಬಾಳುವಿನಿಂದ ರಾಮನಗುಡ್ಡೆ ಡ್ಯಾಂಗೆ ಸಂಪರ್ಕ ಕಲ್ಪಿಸುವ ಹಳ್ಳ ಹೂಳೆತ್ತುವ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಲಾಯಿತು.

ರಾಮನಗುಡ್ಡೆ ಡ್ಯಾಂ ಅಚ್ಚುಕಟ್ಟು ಪ್ರದೇಶದಲ್ಲಿ ನೂರಾರು ರೈತರು ಕೃಷಿ ಮಾಡುತ್ತಿದ್ದು, ಅಂತರ್ಜಲ ಮಟ್ಟ ಕುಸಿತದಿಂದ ರೈತರು ತೊಂದರೆಯನ್ನು ಅನುಭವಿಸುತ್ತಿದ್ದರು. ಇದೀಗ ಶಾಸಕರ ಹೋರಾಟದ ಫಲವಾಗಿ ಮುಂದಿನ ದಿನಗಳಲ್ಲಿ ರಾಮನಗುಡ್ಡೆ ಡ್ಯಾಂಗೆ ನೀರು ಹರಿದು ಬರಲಿದೆ.

ಈ ಸಂಬಂಧ ಶಾಸಕ ಎಂ.ಆರ್ ಮಂಜುನಾಥ್ ಮಾತನಾಡಿ, ಬೂದುಬಾಳುವಿನಲ್ಲಿನ ನೀರು ಘಟಕದಿಂದ ಪ್ರಸ್ತುತ ಗುಂಡಾಲ್ ಜಲಾಶಯಕ್ಕೆ ನೀರು ಪೂರೈಕೆಯಾಗುತ್ತಿದೆ. ಈ ಘಟಕದಿಂದಲೇ ಹಳ್ಳದ ಮೂಲಕ ರಾಮನಗುಡ್ಡೆ ಡ್ಯಾಂಗೆ ನೀರು ಹರಿಸಬಹುದಿತ್ತು. ಆದರೆ ಹಿಂದಿನ ಅಧಿಕಾರಿಗಳ ನಿರ್ಲಕ್ಷ್ಯದಿಂದ ಈ ಕಾರ್ಯವಾಗಿರಲಿಲ್ಲ.

ಇದನ್ನು ಮನಗಂಡು ಸಂಬಂಧಪಟ್ಟ ಹಿರಿಯ ಅಧಿಕಾರಿಗಳ ಗಮನಕ್ಕೆ ತರಲಾಗಿತ್ತು. ಮಾದಪ್ಪನ ದಯೆಯಿಂದ ಇದೀಗ ಕಡಿಮೆ ವೆಚ್ಚದಲ್ಲಿ ಈ ಕಾರ್ಯದ ಹೂಳೆತ್ತುವ ಕಾಮಗಾರಿಗೆ ಚಾಲನೆ ನೀಡುತ್ತಿರುವುದು ನಿಜಕ್ಕೂ ಸಂತಸ ತಂದಿದೆ. ಮುಂದಿನ ದಿನಗಳಲ್ಲಿ ರಾಮನಗುಡ್ಡೆ ಡ್ಯಾಂಗೆ ನೀರು ಹರಿದು ಬರಲಿದೆ. ಅಂತರ್ಜಲ ಮಟ್ಟ ಹೆಚ್ಚಲಿದೆ. ಇದರಿಂದ ಹಲವು ವರ್ಷಗಳಿಂದ ರೈತರು ಅನುಭವಿಸುತ್ತಿದ್ದ ನೀರಿನ ಬವಣೆ ತಪ್ಪಿದಂತಾಗುತ್ತದೆ. ಹಾಗೆಯೇ ಪೈಪ್‌ಲೈನ್ ಮೂಲಕ ಹುಬ್ಬೆಹುಣಸೆ ಡ್ಯಾಂಗೂ ನೀರು ತುಂಬಿಸಲು ಈಗಾಗಲೇ ಅಗತ್ಯ ಕ್ರಮವಹಿಸಲಾಗಿದೆ. ಇದಕ್ಕೆ ಎಲ್ಲರ ಸಹಕಾರ ಅಗತ್ಯ ಎಂದು ತಿಳಿಸಿದರು.

 ರಾಮನಗುಡ್ಡೆ ಡ್ಯಾಂಗೆ ಹಳ್ಳದ ಮೂಲಕ ನೀರು ತುಂಬಿಸುವಂತೆ ಸಂಬಂಧಪಟ್ಟವರಲ್ಲಿ ಮನವಿ ಮಾಡಲಾಗಿತ್ತು. ಆದರೆ ಈ ಕಾರ್ಯವಾಗಿರಲಿಲ್ಲ. ಇದೀಗ ಈ ಕೆಲಸ ಕಾರ್ಯರೂಪಕ್ಕೆ ತರುತ್ತಿರುವುದು ರೈತರಿಗೆ ಅನುಕೂಲವಾಗಲಿದೆ. ಸಂತಸ ತಂದಿದೆ.

ಚಿನ್ನಮುತ್ತು ಗುಂಡಾಪುರ ಗ್ರಾಮಸ್ಥ

ರಾಮನಗುಡ್ಡೆ ಡ್ಯಾಂಗೆ ನದಿ ಮೂಲದಿಂದ ನೀರು ತುಂಬಿಸುವ ಯೋಜನೆ ಕಾರ್ಯವಾಗದ ಕಾರಣ ಈ ಭಾಗದ ರೈತರು ತೊಂದರೆ ಅನುಭವಿಸುತ್ತಿದ್ದರು. ಇದೀಗ ಡ್ಯಾಂಗೆ ಹಳ್ಳದ ಮೂಲಕ ನೀರು ಹರಿಸಲು ಚಾಲನೆ ದೊರಕಿರುವುದು ಒಳ್ಳೆಯ ಕಾರ್ಯ.

ವಿಜಯಕುಮಾರ್ ಹನೂರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net