ಬರದನಾಡು ಕೋಲಾರಕ್ಕೆ ಬಂತು ಜಲಕಳೆ: ಕೆರೆ ಕುಂಟೆಗಳು ಭರ್ತಿ

2-klr-10 koodi-
ಕೋಲಾರಮ್ಮ ಕೆರೆಯ ಪೂರ್ವ ಭಾಗದ ಕೋಡಿ ಹರಿಯುತ್ತಿರುವುದು
Published on

ಕೋಲಾರ: ಜಿಲ್ಲೆಯಲ್ಲಿ ಸೋಮವಾರ ರಾತ್ರಿ 49ಮಿಮೀ ನಷ್ಟು ಭರ್ಜರಿ ಮಳೆಯಾಗಿದೆ. ಸಂಜೆ 5ಗಂಟೆಗೆ ಪ್ರಾರಂಭವಾಗಿ ಅರ್ಧ ರಾತ್ರಿ ತನಕ ಸುರಿದ ಬಿರುಸಿನ ಮಳೆಗೆ ಕೋಲಾರ ಸೇರಿ ಹಲವೆಡೆ ತಗ್ಗು ಪ್ರದೇಶಗಳ ಮನೆಗಳಿಗೆ ನೀರು ನುಗ್ಗಿತ್ತು. ಬಹುತೇಕ ಕೆರೆ ಕುಂಟೆಗಳು ಭರ್ತಿಯಾಗಿ ಕೋಡಿಹರಿಯುತ್ತಿದ್ದು, ಕೆಲವೆಡೆ ಮರಗಳು ಧರೆಗುರುಳಿದ್ದವು. ರಸ್ತೆಗಳ ಮೇಲೆ ನೀರು ಹರಿದು ಮಂಗಳವಾರವೂ ಜನರು, ವಾಹನ ಸಂಚಾರಕ್ಕೆ ಅಡಚಣೆಯಾಗಿತ್ತು. ಜಡಿಮಳೆ ಮಂಗಳವಾರ ಮಧ್ಯಾಹ್ನದಿಂದಲೇ ಮುಂದುವರಿದಿದ್ದು, ಯಾವುದೇ ಪ್ರಾಣ, ಬೆಳೆಹಾನಿಯಾದ ಬಗ್ಗೆ ವರದಿಯಾಗಿಲ್ಲ.
ನಗರಕ್ಕೆ ಹೊಂದಿಕೊಂಡಿರುವ ಕೋಲಾರಮ್ಮ(ಅಮಾನಿ)ಕೆರೆಯ ಎರಡೂ ಕಡೆ ಕೋಡಿ ಹರಿಯುತ್ತಿದ್ದು, ನೂರಾರು ಮಂದಿ ಸಾರ್ವಜನಿಕರು ಮುಂಜಾನೆಯಿಂದಲೇ ಆಗಮಿಸಿ ಕೆರೆ ವೀಕ್ಷಿಸಿದರು.

ಆದರೆ ಈ ಕೆರೆ ಕೋಡಿ ಬಳಿ ಗಾಂಧಿನಗರಕ್ಕೆ ಸಂಪರ್ಕಕಲ್ಪಿಸುವ ಸೇತುವೆ ಕುಸಿಯುವ ಭೀತಿ ಎದುರಾಗಿದೆ. ಹಳೆಯದಾದ ಈ ಸೇತುವೆಯ ತಡೆಗೋಡೆಗಳು ನೀರಿನ ರಭಸಕ್ಕೆ ಕೊಚ್ಚಿಹೋಗಿದ್ದು, ಸೇತುವೆಗೆ ಆಧಾರವಾಗಿ ಕೊಟ್ಟಿರುವ ಕಲ್ಲಿನ ಕಂಬಗಳು ಮಾತ್ರ ನಿಂತುಕೊಂಡಿವೆ. ಶಿಥಿಲವಾಗಿರುವ ಈ ಸೇತುವೆ ಯಾವಾಗ ಬೇಕಾದರೂ ಕುಸಿಯುವ ಹಂತ ತಲುಪಿವೆ. ಇದು ಸ್ಥಳಿಯರಲ್ಲಿ ಆತಂಕ ಹೆಚ್ಚಾಗುವಂತೆ ಮಾಡಿದೆ. ಸೇತುವೆಯನ್ನು ಕೂಡಲೇ ದುರಸ್ತಿ ಮಾಡಬೇಕು ಎಂದು ಆಗ್ರಹಿಸಿದ್ದಾರೆ.

ನೀರಿನಲ್ಲೇ ನಡೆದು ಬಂದರು: ಗಾಂಧಿನಗರದಿಂದ ಗದ್ದೆಕಣ್ಣೂರು ಸಂಪರ್ಕ ಕಲ್ಪಿಸುವ ರಸ್ತೆ ಸಂಪರ್ಕ ಕಡಿತವಾಗಿತ್ತು. ರಸ್ತೆ ಮೇಲೆ ನೀರು ಹರಿದು ಸಾರ್ವಜನಿಕರು, ಶಾಲಾ ಮಕ್ಕಳು ನೀರಿನಲ್ಲೇ ನಡೆದು ತೆರಳುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಇನ್ನು ಕೀಲುಕೋಟೆ ಅಂಡರ್​ಪಾಸ್​, ಟೇಕಲ್​ ರಸ್ತೆಯ ಸಹ್ಯಾದ್ರಿ ಕಾಲೇಜು ದಾರಿ ಬಳಿ ನಾಲ್ಕೆ$ದು ಅಡಿ ಎತ್ತರ ನೀರು ರಸ್ತೆ ಮೇಲೆ ಹರಿದಿದ್ದು, ನೀರಿನಲ್ಲೇ ವಾಹನಗಳು ಸಂಚರಿಸುವಂತಾಯಿತು. ಗದ್ದೇ ಕಣ್ಣೂರು ದಾರಿಯ ಅಕ್ಕ ಪಕ್ಕದ ಹತ್ತಾರು ಎಕರೆ ರಾಗಿ, ಟೊಮ್ಯಾಟೊ, ತೊಗರಿ, ಅವರೆ ಸೇರಿದಂತೆ ಹಲವು ಬೆಳೆಗಳು ಜಲಾವೃತವಾಗಿದ್ದವು.

ದೇವಾಲಯಕ್ಕೂ ಜಲದಿಗ್ಬಂಧನ: ಕೋಲಾರದಲ್ಲಿ ಹಾರೋಹಳ್ಳಿ ತೋಟಗಳು, ಸಾರಿಗೆ ನಗರ, ಮಿಲ್ಲತ್​ನಗರ ಸೇರಿ ಹಲವು ತಗ್ಗು ಪ್ರದೆಶಗಳಿಗೆ ನೀರು ನುಗ್ಗಿತ್ತು. ಹಲವೆಡೆ ಮನೆ, ದೇವಾಲಯ, ಸರ್ಕಾರಿ ಕಚೇರಿಗಳು, ಶಾಲೆಗಳು ಸಹ ಜಲ ದಿಗ್ಬಂಧನ ಎದುರಿಸಿದವು. ನಗರದ ಆರ್​ಟಿಒ ಕಚೇರಿ ಪಕ್ಕದ ಗಣೇಶ ದೇವಾಲಯ ನೀರಿನಿಂದ ಆವರಿಸಿತ್ತು. ನಾಗರ ಪಂಚಮಿ ಹಿನ್ನೆಲೆಯಲ್ಲಿ ಮಹಿಳೆಯರು ಮಳೆ ನೀರಲ್ಲೇ ತೆರಳಿ ನಾಗರಕಲ್ಲು, ಅಶ್ವತ್ಥ ಕಟ್ಟೆಗೆ ಪೂಜೆ ಸಲ್ಲಿಸಿದರು.

ನೀರಲ್ಲೇ ಪಾಠ ಕೇಳಿದ ಮಕ್ಕಳು: ಕುರುಬರ ಪೇಟೆಯ ಸರ್ಕಾರಿ ಪ್ರಾಥಮಿಕ ಶಾಲೆಗೆ ನೀರು ನುಗ್ಗಿದ್ದು, ಮಕ್ಕಳು ನೀರಿನಲ್ಲೇ ಕುಳಿತು ಪಾಠ ಕೇಳುವಂತಾಗಿತ್ತು. ಶಾಲೆಯಲ್ಲಿ 67 ಮಕ್ಕಳು ವ್ಯಾಸಂಗ ಮಾಡುತ್ತಿದ್ದು, ಇರುವ 6 ಕೊಠಡಿಗಳಲ್ಲಿ ಎರಡು ಮಾತ್ರ ಸುಸಜ್ಜಿತವಾಗಿವೆ. ಉಳಿದ ನಾಲ್ಕು ಶಿಥಿಲವಾಗಿದ್ದು, ಅನ್ಯ ಮಾರ್ಗವಿಲ್ಲದೆ ಮಕ್ಕಳು ನೀರಿನಲ್ಲಿ ಕುಳಿತು ಪಾಠ ಕೇಳಿದರು.

ನೀರಲ್ಲೇ ಪಾಠ ಕೇಳಿದ ಮಕ್ಕಳು.
ನೀರಲ್ಲೇ ಪಾಠ ಕೇಳಿದ ಮಕ್ಕಳು.

ಮಲೆನಾಡಾದ ಕೋಲಾರ: ಬರದ ನಾಡಾಗಿದ್ದ ಕೋಲಾರ ಕೆ.ಸಿ.ವ್ಯಾಲಿ ನೀರು ಜಿಲ್ಲೆಗೆ ಹರಿಯುತ್ತಿದ್ದಂತೆ ಮಳೆಯ ಪ್ರಮಾಣವೂ ಹೆಚ್ಚಾಗಿ ಮಳೆನಾಡಾಗಿ ಪರಿವರ್ತನೆಯಾಗಿದೆ. ಭಾನುವಾರ ಮತ್ತು ಸೋಮವಾರ 5ಮಿಮೀ ಸಾಧಾರಣ ಮಳೆಯಾಗಬೇಕಿದ್ದ ಕಡೆ 65ಮಿಮೀ ಮಳೆಯಾಗಿದೆ. ಕಳೆದ 7ದಿನಗಳಲ್ಲಿ 20ಮಿಮೀ ಗೆ ಬದಲಾಗಿ 106ಮಿಮೀ ಮಳೆ ಬಂದಿದೆ. ಕಳೆದ ಜುಲೈನಲ್ಲಿ 79ಮಿಮೀ ಸಾಧಾರಣ ಮಳೆಯಾಗಬೇಕಿದ್ದು, 110ಮಿಮೀ ಮಳೆಯಾಗಿದೆ. ಇನ್ನು ಜೂನ್​ ಪ್ರಾರಂಭದೊಂದಿಗೆ ಜಿಲ್ಲೆಗೆ ಕಾಲಿಟ್ಟ ಮುಂಗಾರು ಈ ಬಾರಿ ಆ.2ರವರೆಗೆ 150ಮಿಮೀ ಸಾಧಾರಣ ಮಳೆಯಾಗುವ ಕಡೆ 343ಮಿಮೀ ನಷ್ಟು ಅಧಿಕ ವರ್ಷಧಾರೆಯಾಗಿದೆ. ಇನ್ನು ಜನವರಿಯಿಂದ ಇಲ್ಲಿ ತನಕ ಸಾಧಾರಣವಾಗಿ 267 ಮಿಮೀ ಮಳೆಯಾಗಬೇಕಿತ್ತಾದರೂ 593ಮಿಮೀನಷ್ಟು ಅಧಿಕ ಮಳೆಯಾಗಿದೆ. ಒಟ್ಟಾರೆ ಹೇಳುವುದಾದರೆ ಮಳೆ ಪ್ರಮಾಣ ದ್ವಿಗುಣವಾಗಿದ್ದು, ಮಲೆನಾಡಿನಂತೆ ಜನ ಮಳೆಯಲ್ಲೇ ನೆನೆಯುತ್ತ ಸಂಚರಿಸುವುದು ಕಂಡುಬರುತ್ತಿದೆ.

ಬೂದಿಕೋಟೆಯಲ್ಲಿ ಮನೆಗೋಡೆ ಕುಸಿತ

ಬೂದಿಕೋಟೆ: ಬಂಗಾರಪೇಟೆ ತಾಲೂಕಿನಾದ್ಯಾಂತ ಎರಡು ಮೂರು ದಿನಗಳಿಂದ ಉತ್ತಮ ಮಳೆಯಾಗುತ್ತಿದ್ದು ಹಲವು ಕೆರೆಗಳು ಕೋಡಿ ಹರಿದಿವೆ. ಮುತ್ತೇನಹಳ್ಳಿ ಗ್ರಾಮದಲ್ಲಿ ಮನೆಯ ಗೋಡೆ ಕುಸಿದಿದೆ. 

ಬೂದಿಕೋಟೆ ಹೋಬಳಿ ಮುತ್ತೇನಹಳ್ಳಿಯಲ್ಲಿ ಮಳೆಗೆ ಮನೆ ಗೋಡೆ ಕುಸಿದು ಬಿದ್ದಿದೆ.
ಬೂದಿಕೋಟೆ ಹೋಬಳಿ ಮುತ್ತೇನಹಳ್ಳಿಯಲ್ಲಿ ಮಳೆಗೆ ಮನೆ ಗೋಡೆ ಕುಸಿದು ಬಿದ್ದಿದೆ.


ತಾಲೂಕಿನ ಬೂದಿಕೋಟೆಯ ಮಾರ್ಕಂಡೇಯ ಡ್ಯಾಂ, ಕಾಮಸಮುದ್ರ ಗ್ರಾಮದ ವೃಷಭಾವತಿ ಕೆರೆ ಸೇರಿ ಬಹುತೇಕ ಕೆರೆಗಳು ಮತ್ತೊಮ್ಮೆತುಂಬಿ ಕೋಡಿ ಬಿದ್ದಿದೆ.
ಮಾರ್ಕಂಡೇಯ ಡ್ಯಾಂ ನೀರಿನ ಹೊರ ಹರಿವು ಹೆಚ್ಚಾದ ಕಾರಣ ಯರಗೋಳ್​ ಡ್ಯಾಂನಲ್ಲಿ ನೀರಿನ ಸಂಗ್ರಹ ಹೆಚ್ಚಾಗಿದೆ. ಕೋಡಿ ತುಂಬಿ ಹರಿಯಲು ಮೂರು ಅಡಿ ಮಾತ್ರ ಬಾಕಿ ಉಳಿದಿದೆ.
ಸೋಮವಾರ ರಾತ್ರಿ ಸುರಿದ ಮಳೆಗೆ ಬೂದಿಕೋಟೆ ಹೋಬಳಿ ವ್ಯಾಪ್ತಿಯ ಮುತ್ತೇನಹಳ್ಳಿಯ ಚೈತ್ರಾ ಎಂಬುವವರ ಮನೆ ಗೋಡೆ ಕುಸಿದಿದೆ. ಅದೃಷ್ಟವಶಾತ್​ ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ. 
ಬಂಗಾರಪೇಟೆ ಪಟ್ಟಣದಿಂದ ಹರಟಿ ಮಾರ್ಗದ ಯಳಬುರ್ಗಿ ರಸ್ತೆಗೆ ಅಡ್ಡಲಾಗಿ ನಿರ್ಮಿಸಿದ್ದ ಮೋರಿ ಕುಸಿದು ಬಿದ್ದಿದ್ದು ಭಾರಿ ಗಾತ್ರದ ವಾಹನಗಳ ಸಂಚಾರಕ್ಕೆ ತೊಂದರೆಯುಂಟಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net