

ಲಕ್ಷ್ಮೇಶ್ವರ: ಪಟ್ಟಣದಲ್ಲಿನ ಸವಳು ನೀರಿನ ಸಾರ್ವಜನಿಕ ನಲ್ಲಿ (ನಳ)ಗಳಿಂದ ಹಲವು ವರ್ಷಗಳಿಂದ ನಿರಂತರವಾಗಿ ನೀರು ಚರಂಡಿ ಪಾಲಾಗುತ್ತಿದ್ದರೂ ಈ ಬಗ್ಗೆ ಸಂಬಂಧಪಟ್ಟ ಪುರಸಭೆ, ಜನಪ್ರತಿನಿಧಿಗಳು ಕಂಡೂ ಕಾಣದಂತೆ ಜಾಣ ಮೌನವಹಿಸಿರುವುದು ದುರ್ದೈವದ ಸಂಗತಿ.
ಪಟ್ಟಣಕ್ಕೆ ತುಂಗಭದ್ರಾ ನದಿಯಿಂದ ಪೂರೈಕೆಯಾಗುವ ಕುಡಿಯುವ ನೀರಿನ ಪೈಪ್ಲೈನ್, ಯಂತ್ರೋಪಕರಣಗಳ ದುರಸ್ತಿಯಿಂದ ವರ್ಷದುದ್ದಕ್ಕೂ 20 ದಿನಕ್ಕೊಮ್ಮೆ ನೀರು ಬರುತ್ತದೆ. ಕುಡಿಯುವ ನೀರು ಸಮರ್ಪಕವಾಗಿ ಕೊಡಲಾಗದ ಪುರಸಭೆ ಸವಳು ನೀರು ಕೊಡುವಲ್ಲಿ ಯಶಸ್ವಿಯಾಗಿದ್ದರೂ ನಲ್ಲಿಗಳ ರಿಪೇರಿ, ನಿರ್ವಹಣೆ, ನಿಯಂತ್ರಣದ ಕೊರತೆಯಿಂದ ನಿತ್ಯ ಹಗಲೂ-ರಾತ್ರಿ ಯಥೇಚ್ಛವಾಗಿ ಪೋಲಾಗುತ್ತಿದೆ.
ಪಟ್ಟಣದಲ್ಲಿನ 90 ಕ್ಕೂ ಹೆಚ್ಚು ಬೋರ್ವೆಲ್ಗಳಿಂದ 23 ವಾರ್ಡ್ಗಳ ಪ್ರಮುಖ ಸ್ಥಳದಲ್ಲಿ ನೂರಾರು ಸಾರ್ವಜನಿಕ ನಲ್ಲಿಗಳ ವ್ಯವಸ್ಥೆ ಮಾಡಲಾಗಿದೆ. ಕ್ಯಾಪ್ ಇಲ್ಲದ, ಒಡೆದ, ಸೋರುವ ನಲ್ಲಿಗಳ ನಿರ್ವಹಣೆ ಇಲ್ಲದ್ದರಿಂದ 27X7 ನೀರು ಹರಿದು ಚರಂಡಿ ಸೇರುತ್ತಿದೆ. ಬೋರ್ವೆಲ್ಗಳನ್ನು ಸಾರ್ವಜನಿಕರೇ ಬೇಕಾದ ರೀತಿ ಳಸಿಕೊಳ್ಳುತ್ತಿದ್ದಾರೆ. ಇದು ಪುರಸಭೆಗೆ ಆರ್ಥಿಕ ಹೊರೆಯಾದರೂ ನೀರು ಸಮರ್ಪಕವಾಗಿ ಕೊಡಲು ವಿಫಲವಾಗಿದ್ದರಿಂದ ಇವುಗಳ ನಿಯಂತ್ರಣ, ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತಿಲ್ಲ. ಇನ್ನಾದರೂ ಪುರಸಭೆಯವರು ಸಾರ್ವಜನಿಕ ನಲ್ಲಿಗಳು, ಬೋರ್ವೆಲ್ಗಳ ನಿರ್ವಹಣೆ, ನಿಯಂತ್ರಣದ ಜವಾಬ್ದಾರಿ ವಹಿಸಬೇಕು. ಇಲ್ಲದಿದ್ದರೆ ಪುರಸಭೆ ಮತ್ತು ಸಾರ್ವಜನಿಕರು ಸ್ವಯಂಕೃತ ಅಪರಾಧದಿಂದ ಭವಿಷ್ಯದಲ್ಲಿ ನೀರಿನ ಸಮಸ್ಯೆ ಎದುರಿಸಬೇಕಾಗುತ್ತದೆ.