ನೀರು ಪೂರೈಕೆ ವಾಲ್‌ನಲ್ಲಿ ನಾಯಿಯ ಕೊಳೆತ ಕಳೇಬರ

water Wall, Dog dead body, Jammaladinni, Muddebihala, Ingalgeri, Vijaya Mahanthesha Kori,
ಮುದ್ದೇಬಿಹಾಳ ತಾಲೂಕಿನ ಜಮ್ಮಲದಿನ್ನಿ ಗ್ರಾಮಕ್ಕೆ ಕುಡಿಯುವ ನೀರು ಪೂರೈಸುವ ಕೊಳವೆಯ ವಾಲ್‌ನಲ್ಲಿರುವ ನಾಯಿಯ ಕೊಳೆತ ಕಳೇಬರ.
Published on

ಮುದ್ದೇಬಿಹಾಳ: ತಾಲೂಕಿನ ಜಮ್ಮಲದಿನ್ನಿ ಗ್ರಾಮಕ್ಕೆ ಶುದ್ಧ ಕುಡಿಯುವ ನೀರು ಪೂರೈಸುವ ಕೊಳವೆಯ ವಾಲ್‌ನಲ್ಲಿ ನಾಯಿ ಸತ್ತು, ಅದರ ಕಳೇಬರ ಕೊಳೆತು ದುರ್ನಾತ ಬೀರಿದರೂ ನಿರ್ಲಕ್ಷೃ ತೋರಿದ ಗ್ರಾಪಂ ಆಡಳಿತ ಮಂಡಳಿ, ಅಧಿಕಾರಿಗಳ ವಿರುದ್ಧ ಗುರುವಾರ ಜನರಿಂದ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.

10-15 ದಿನಗಳ ಹಿಂದೆಯೇ ಜಮ್ಮಲದಿನ್ನಿ ಕ್ರಾಸ್‌ನಲ್ಲಿರುವ ದೊಡ್ಡದಾದ ವಾಲ್‌ನ ಗುಂಡಿಯಲ್ಲಿ ನಾಯಿ ಸತ್ತು ಬಿದ್ದಿದ್ದರೂ ಯಾರೂ ಗಮನಿಸಿಲ್ಲ. ಅದೇ ಕೊಳವೆಯ ಮೂಲಕ ಬರುವ ನೀರನ್ನೇ ಅನೇಕರು ಕುಡಿದಿದ್ದಾರೆ. ಹಲವರಿಗೆ ವಾಂತಿ, ಭೇದಿ ಕಾಣಿಸಿಕೊಂಡಿದ್ದರೂ ಯಾರಿಗೂ ಸಂಶಯ ಬಂದಿಲ್ಲ. ಬೇರೆ ಕಾರಣ ಇರಬಹುದೆಂದು ತಿಳಿದು ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆದುಕೊಂಡಿದ್ದಾರೆ.

ವಾಲ್ ಹತ್ತಿರ ದುರ್ನಾತ ಬರುವುದನ್ನು ಅರಿತ ಕೆಲವರು ಹತ್ತಿರ ಹೋಗಿ ನೋಡಿದಾಗ ನಾಯಿ ಸತ್ತು ಬಿದ್ದಿರುವುದನ್ನು ಗಮನಿಸಿ ಗ್ರಾಮಸ್ಥರಿಗೆ ತಿಳಿಸಿದ್ದಾರೆ. ತಂಡೋಪತಂಡವಾಗಿ ವಾಲ್ ಹತ್ತಿರ ಬಂದು ನೋಡಿದ ಗ್ರಾಮಸ್ಥರು ಈ ಕುರಿತು ಗ್ರಾಮ ವ್ಯಾಪ್ತಿಯ ಇಂಗಳಗೇರಿ ಗ್ರಾಪಂ ಪಿಡಿಒ ವಿಜಯಮಹಾಂತೇಶ ಕೋರಿ ಅವರಿಗೆ ಕರೆ ಮಾಡಿ ತಿಳಿಸಲು ಯತ್ನಿಸಿದರೂ ಅವರು ಕರೆ ಸ್ವೀಕರಿಸದಿರುವುದು ಜನರ ಕೋಪಕ್ಕೆ ಕಾರಣವಾಯಿತು.

ಗ್ರಾಮಸ್ಥರಿಂದ ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ತಾಲೂಕು ಆರೋಗ್ಯಾಧಿಕಾರಿ ಡಾ.ಸತೀಶ ತಿವಾರಿ ಅವರು, ಆರೋಗ್ಯ ಸಿಬ್ಬಂದಿಯನ್ನು ಗ್ರಾಮಕ್ಕೆ ಕಳಿಸಿಕೊಟ್ಟು ನೀರಿನ ತಪಾಸಣೆ ಮತ್ತು ತೊಂದರೆಗೀಡಾದವರ ಆರೋಗ್ಯ ತಪಾಸಣೆಗೆ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.

ಸಂಜೆ ಸ್ಥಳಕ್ಕೆ ಆಗಮಿಸಿದ ಪಿಡಿಒ ಕೋರಿ ಅವರನ್ನು ಗ್ರಾಮಸ್ಥರು ತೀವ್ರ ತರಾಟೆಗೆ ತೆಗೆದುಕೊಂಡರು. ಪಂಚಾಯಿತಿ ಕಾರ್ಯದರ್ಶಿ ಬಸನಗೌಡ ಬಿರಾದಾರ ಮಾರ್ಗದರ್ಶನದಲ್ಲಿ ಸಂಜೆ ವಾಲ್‌ನಲ್ಲಿರುವ ನಾಯಿಯ ಕಳೇಬರ ತೆಗೆದು ವಾಲ್ ಸ್ವಚ್ಛಗೊಳಿಸಲಾಗಿದೆ. ಕೊಳವೆಯಲ್ಲಿ ಸಂಗ್ರಹವಾಗಿರುವ ನೀರನ್ನು ಯಾರೂ ಬಳಸದಂತೆ ತಿಳಿಸಲಾಗಿದೆ.

ಕೊಳವೆಯಲ್ಲಿನ ಹಳೇ ನೀರು ಹೋಗಿ ಹೊಸ ನೀರು ಬಂದು ಅದನ್ನು ಪ್ರಯೋಗಾಲಯದಲ್ಲಿ ತಪಾಸಣೆ ನಡೆಸಿ ಕುಡಿಯಲು ಸುರಕ್ಷಿತ ಎಂದು ತಿಳಿಸಿದ ನಂತರವೇ ಕೊಳವೆಯಿಂದ ಬರುವ ನೀರು ಕುಡಿಯುವಂತೆ ಸೂಚಿಸಲಾಗಿದೆ.

ಪಿಡಿಒ ಅವರನ್ನು ಕೂಡಲೇ ವರ್ಗಾಯಿಸಬೇಕು: ಯಾವುದೇ ಸಮಸ್ಯೆಗೆ ಗ್ರಾಮಸ್ಥರು ಕರೆ ಮಾಡಿದರೂ ಪಿಡಿಒ ಕೋರಿ ಸ್ಪಂದಿಸುವುದಿಲ್ಲ. ಅವರ ಮೊಬೈಲ್ ಯಾವಾಗಲೂ ಸ್ವಿಚ್ ಆಫ್ ಆಗಿರುತ್ತದೆ. ನಾಯಿಯ ಕಳೇಬರದಿಂದ ಹೊರಬಂದಿರುವ ತ್ಯಾಜ್ಯ ವಾಲ್‌ನ ಸೋರಿಕೆ ಮೂಲಕ ಕೊಳವೆಯಲ್ಲಿ ಸೇರಿರಬಹುದು. ಕೂಡಲೇ ತಪಾಸಣೆ ನಡೆಸಿ ಗ್ರಾಮಸ್ಥರ ಆತಂಕ ದೂರ ಮಾಡಬೇಕು. ಗ್ರಾಮಸ್ಥರ ಸಮಸ್ಯೆಗಳಿಗೆ ಸ್ಪಂದಿಸದ ಪಿಡಿಒ ಅವರನ್ನು ಕೂಡಲೇ ವರ್ಗಾಯಿಸಬೇಕು ಎಂದು ಗ್ರಾಮಸ್ಥರಾದ ಅಶೋಕ ಈಚನಾಳ, ಶೇಖಪ್ಪ ಸಾವಳಗಿ, ಶೇಖಪ್ಪ ತಳವಾರ, ನಿಜಲಿಂಗಪ್ಪ ಮಂಗ್ಯಾಳ, ಶಿವಪ್ಪ ತಳವಾರ, ಸಿದ್ದು ಮುದ್ದೇಬಿಹಾಳ, ಚನ್ನಪ್ಪ ಕಾರಕೂರ, ಆನಂದ ಮಂಗ್ಯಾಳ, ಸುರೇಶ ಮಾಲಗತ್ತಿ ಇನ್ನಿತರರು ಆಗ್ರಹಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net