ತೊರವಿ ಭಾಗಕ್ಕೂ ಬಹು ಬೇಗ ನೀರು; ಸಚಿವ ಎಂ.ಬಿ. ಪಾಟೀಲ

TORAVI CONGRESS MEETING
ವಿಜಯಪುರ ನಗರ ಹೊರವಲಯದ ತೊರವಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ರಾಜು ಆಲಗೂರ ಪರ ಸಚಿವ ಎಂ.ಬಿ. ಪಾಟೀಲ ಮತ ಯಾಚಿಸಿದರು.
Published on

ವಿಜಯಪುರ: ತೊರವಿ ಭಾಗಕ್ಕೂ ನೀರಾವರಿ ಸೌಲಭ್ಯ ಕಲ್ಪಿಸಲು ಯೋಜನೆ ರೂಪಿಸಲಾಗಿದ್ದು ಆ ಮೂಲಕ ತವರಿನ ಋಣ ತೀರಿಸುವುದಾಗಿ ಬೃಹತ್ ಮತ್ತು ಮಧ್ಯಮ ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ ಹೇಳಿದರು.

ತೊರವಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ರಾಜು ಆಲಗೂರ ಪರ ಬುಧವಾರ ರಾತ್ರಿ ಪ್ರಚಾರ ಕೈಗೊಂಡು ಅವರು ಮಾತನಾಡಿದರು.

ರಾಜ್ಯ ಸರ್ಕಾರ ಪ್ರತಿಯೊಬ್ಬರ ಮನೆಗೆ ಗ್ಯಾರಂಟಿ ಯೋಜನೆಗಳನ್ನು ತಲುಪಿಸಿದೆ. ಆದರೆ, ಕೇಂದ್ರ ಸರ್ಕಾರ ಬೆಲೆ ಏರಿಕೆ ಮೂಲಕ ಜನರ ಜೀವನಕ್ಕೆ ಬರೆ ಎಳೆದಿದೆ. ಪೆಟ್ರೋಲ್, ಅಡುಗೆ ಅನಿಲ ಬೆಲೆ ಹೆಚ್ಚಳವಾದಾಗ ಗದ್ದಲ ಉಂಟು ಮಾಡುತ್ತಿದ್ದ ಕೇಂದ್ರ ಸಚಿವೆ ಸ್ಮತಿ ಇರಾನಿ ಅವರಂಥವರು ಈಗ ಮೌನ ವಹಿಸಿದ್ದಾರೆ. ಚುನಾವಣೆ ಬಾಂಡ್ ಇವರ ನಿಜವಾದ ಮುಖವಾಡವನ್ನು ಬಯಲು ಮಾಡಿದೆ ಎಂದು ಹೇಳಿದರು.

ನಾವು ಕೊಟ್ಟ ಭರವಸೆ ಈಡೇರಿಸಿ ಮತ ಕೇಳಲು ಬಂದಿದ್ದೇವೆ. ಸಬ್ ಕಾ ಸಾಥ್ ಸಬ್‌ಕಾ ವಿಕಾಸ್ ಎಂದವರು ಈಗ ದೇಶದಲ್ಲಿ ಬಿರುಕು ಮೂಡಿಸುತ್ತಿದ್ದಾರೆ. ಈ ಸಲ ಅವರಿಗೆ ಪ್ರಸ್ತಾಪಿಸಲು ಯಾವುದೇ ವಿಷಯಗಳಿಲ್ಲ. ಯಾವ ಗಾಳಿಯೂ ಇಲ್ಲ. ನಿಮ್ಮೂರಿನ ಮಗನಾದ ರಾಜು ಆಲಗೂರ ಅವರಿಗೆ ಮತ ನೀಡಿ ಎಂದು ಮನವಿ ಮಾಡಿದರು.

ರಾಜು ಆಲಗೂರ ಮಾತನಾಡಿ, ಪಕ್ಷಾತೀತವಾಗಿ ಗ್ರಾಮದವರು ತಮಗೆ ಬೆಂಬಲಿಸಬೇಕು. ಲೋಕಸಭೆಯಲ್ಲಿ ನಿಮ್ಮ ಭರವಸೆಗೆ ತಕ್ಕಂತೆ ಧ್ವನಿಯಾಗಿ ಕೆಲಸ ಮಾಡುತ್ತೇನೆ. ಕಾಂಗ್ರೆಸ್ಸಿನ ಅಭಿವೃದ್ಧಿ ಕಾರ್ಯಗಳು ನಮ್ಮ ಬೆನ್ನಿಗಿವೆ. ಜಿಲ್ಲೆಯಲ್ಲಿ ಪಕ್ಷದ ಪರ ಅಲೆ ಇದೆ. ಕಳೆದ 25 ವರ್ಷಗಳ ನಂತರ ಈಗ ಬದಲಾವಣೆ ಗಾಳಿ ಬೀಸಿದೆ. ತೊರವಿ ಗ್ರಾಮಸ್ಥರು ಕಾಂಗ್ರೆಸ್ಸಿಗೆ ಸಂಪೂರ್ಣ ಬೆಂಬಲ ನೀಡಿ ಎಂದು ಮನವಿ ಮಾಡಿದರು.

ಮುಖಂಡ ಎನ್.ಎಸ್. ಬಿರಾದಾರ ಪ್ರಾಸ್ತಾವಿಕ ಮಾತನಾಡಿದರು. ಮುಖಂಡರಾದ ಅಬ್ದುಲ್‌ಹಮೀದ್ ಮುಶ್ರೀಫ್, ನರಸಿಂಗ್ ಮಹಾರಾಜರು, ಭೀಮು ಮಹಾರಾಜರು, ಸುರೇಶಗೌಡ ಪಾಟೀಲ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net