ಮಾ.1ರ ವರೆಗೂ ಕಾಲುವೆಗಳಿಗೆ ನೀರು

IMG20250219205716.jpg
Published on

ಬೆಳಗಾವಿ: ಮಲಪ್ರಭಾ ಜಲಾಶಯದಿಂದ ಕಾಲುವೆಗಳಿಗೆ ಹರಿಬಿಡಲಾಗಿರುವ ನೀರನ್ನು ಮಾರ್ಚ್ 1ರ ವರೆಗ ವಿಸ್ತರಿಸಲಾಗಿದೆ ಎಂದು ಮಲಪ್ರಭಾ ಯೋಜನಾ ನೀರಾವರಿ ಸಲಹಾ ಸಮಿತಿ ಅಧ್ಯಕ್ಷೆ ಆಗಿರುವ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ತಿಳಿಸಿದ್ದಾರೆ.

ಪ್ರಸ್ತುತ ಎರಡೂ ಹಂಗಾಮುಗಳು ಮುಗಿದಿದ್ದರೂ ನರಗುಂದ ಹಾಗೂ ಬಾದಾಮಿ ಶಾಸಕರು ಹಾಗೂ ರೈತ ಮುಖಂಡರು ನೀರನ್ನು ಕಾಲುವೆಗಳಿಗೆ ಮಾರ್ಚ್ 15ರವರೆಗೆ ಮುಂದುವರಿಸುವಂತೆ ಮನವಿ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ರೈತರ ಹಿತಾಸಕ್ತಿ ಕಾಪಾಡುವ ಉದ್ದೇಶದಿಂದ ಫೆಬ್ರವರಿ 15ಕ್ಕೆ ಸ್ಥಗಿತಗೊಳಿಸಬೇಕಾಗಿದ್ದ ನೀರನ್ನು ಮಾರ್ಚ್ 1ರ ವರೆಗೆ ನೀರಾವರಿ ಕಾಲುವೆಗಳ ಮುಖಾಂತರ ಹರಿಸುವುದನ್ನು ಮುಂದುವರೆಸಲಾಗಿದೆ ಎಂದು ತಿಳಿಸಿದ್ದಾರೆ.

ಅವಶ್ಯಕ ಕುಡಿಯುವ ನೀರಿಗಾಗಿ ಜೂನ್ ಅಂತ್ಯದವರೆಗೆ 15 ಟಿಎಂಸಿ ನೀರನ್ನು ಕಾಯ್ದಿರಿಸಿ ಒದಗಿಸಲು ಸೂಚಿಸಲಾಗಿದೆ. ಜತೆಗೆ ಮಾರ್ಚ್ 1ರೊಳಗಾಗಿ ಸಂಬಂಧಪಟ್ಟ ಜಿಲ್ಲಾಧಿಕಾರಿಗಳು, ಜಿಪಂ, ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳು ಕುಡಿಯುವ ನೀರಿಗಾಗಿ ತಮ್ಮ ವ್ಯಾಪ್ತಿಯಲ್ಲಿ ಬರುವ ಕೆರೆಗಳನ್ನು ತುಂಬಿಸಲು ಕ್ರಮ ಕೈಗೊಳ್ಳಬೇಕು ಸೂಚಿಸಲಾಗಿದೆ. ಪ್ರಸಕ್ತ ಬೇಸಿಗೆ ತೀವ್ರತೆ ಜಾಸ್ತಿಯಾಗಿರುವ ಹಿನ್ನೆಲೆಯಲ್ಲಿ ಕುಡಿಯುವ ನೀರಿಗಾಗಿ ಬೇಡಿಕೆ ಹೆಚ್ಚಾಗುವುದರಿಂದ ಮಿತವಾಗಿ ನೀರು ಬಳಸುವಂತೆ ನವಿಲುತೀರ್ಥದ ಅಧೀಕ್ಷಕ ಅಭಿಯಂತರ ವಿ.ಎಸ್. ಮಧುಕರ ಮನವಿ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net