ಮುಂಗಾರಿಗೆ ಆ.23ರಿಂದ ಕಾಲುವೆಗೆ ನೀರು

Water to the canal from August 23 for Monsoon
ಆಲಮಟ್ಟಿ ಕೆಬಿಜೆನ್ನೆಲ್ ಎಂಡಿ ಕಚೇರಿ ಸಭಾಂಗಣದಲ್ಲಿ ಐಸಿಸಿ ಅಧ್ಯಕ್ಷ, ಅಬಕಾರಿ ಸಚಿವ ಆರ್.ಬಿ.ತಿಮ್ಮಾಪುರ ಸೋಮವಾರ ನೀರಾವರಿ ಸಲಹಾ ಸಮಿತಿ ಸಭೆ ನಡೆಸಿದರು. ಸಚಿವ ಶರಣಬಸಪ್ಪ ದರ್ಶನಾಪುರ, ಶಾಸಕರಾದ ಸಿ.ಎಸ್.ನಾಡಗೌಡ, ಎಚ್.ವೈ.ಮೇಟಿ, ಜೆ.ಟಿ.ಪಾಟೀಲ ಇತರರು ಇದ್ದರು.
Published on

ಆಲಮಟ್ಟಿ: ಆಲಮಟ್ಟಿ ಜಲಾಶಯದಲ್ಲಿ ಪ್ರಸ್ತುತ ಒಳಹರಿವು ಕ್ಷೀಣವಾಗಿದ್ದು, ಮುಂದಿನ ದಿನಗಳಲ್ಲಿ ಸಂಪೂರ್ಣ ಸ್ಥಗಿತವಾಗುವ ಮುನ್ಸೂಚನೆ ಇದೆ. ಈಗಾಗಲೇ ಕಾಲುವೆಗಳಿಗೆ ಹರಿಸುತ್ತಿರುವ ನೀರನ್ನು ಆ.23ರಿಂದ 10 ದಿನಗಳ ಬಂದ್ ಮಾಡಿ ನಂತರ ವಾರಾಬಂದಿ ಪದ್ಧತಿಯಡಿ 14 ದಿನ ಚಾಲೂ ಹಾಗೂ 10 ದಿನ ಬಂದ್ ಪದ್ಧತಿ ಅನುಸರಿಸಿ ನವೆಂಬರ್ 23ರವರೆಗೆ ಮುಂಗಾರು ಹಂಗಾಮಿಗೆ ನೀರು ಪೂರೈಸಲಾಗುವುದು ಎಂದು ಕಷ್ಣಾ ನೀರಾವರಿ ಸಲಹಾ ಸಮಿತಿ ಅಧ್ಯಕ್ಷ, ಅಬಕಾರಿ ಸಚಿವ ಆರ್.ಬಿ.ತಿಮ್ಮಾಪುರ ಹೇಳಿದರು.

ಕೆಬಿಜೆನ್ನೆಲ್ ಎಂಡಿ ಕಚೇರಿ ಸಭಾಂಗಣದಲ್ಲಿ ಸೋಮವಾರ ನೀರಾವರಿ ಸಲಹಾ ಸಮಿತಿ ಸಭೆ ನಡೆಸಿ ನಂತರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ಜು.27ರಂದು ನೀರಾವರಿ ಸಲಹಾ ಸಮಿತಿ ಮರುರಚನೆಯಾಗಿರಲಿಲ್ಲ. ಹೀಗಾಗಿ ಈ ಹಿಂದಿನ ಸಾಲಿನಂತೆ ಈ ವರ್ಷವೂ ಜು.27ರಿಂದ ನ.23ರವರೆಗೆ 120 ದಿನ ನೀರು ಹರಿಸಬೇಕು. ಜಲಸಂಪನ್ಮೂಲ ಸಚಿವ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಂದ ಅನುಮೋದನೆ ಪಡೆದು ಜು.27ರಿಂದ ಇದುವರೆಗೆ ಸತತವಾಗಿ ನೀರು ಹರಿಸಲಾಗಿದೆ ಎಂದರು.

ಮುಂಗಾರು ಹಂಗಾಮು ಮಳೆ ಆಧಾರಿತವಾಗಿದ್ದು, ರೈತರು ದ್ವಿಋತು ಬೆಳೆಗಳನ್ನು ಮಾತ್ರ ಬೆಳೆಯಬೇಕು. ಅಚ್ಚುಕಟ್ಟು ಪ್ರದೇಶದಲ್ಲಿ ಮಳೆಯಾದಾಗ ಕಾಲುವೆ ಜಾಲಕ್ಕೆ ನೀರು ಪೂರೈಸುವುದನ್ನು ಸ್ಥಗಿತಗೊಳಿಸಲಾಗುವುದು. ಮುಂಗಾರು ಹಂಗಾಮಿನಲ್ಲಿ 5.34 ಲಕ್ಷ ಹೆಕ್ಟೇರ್ ಕ್ಷೇತ್ರಕ್ಕೆ ನೀರಾವರಿ ಸೌಲಭ್ಯ ಕಲ್ಪಿಸಲಾಗುವುದು ಎಂದರು.

ಮುಂದಿನ ದಿನಗಳಲ್ಲಿ ಜಲಾಶಯಕ್ಕೆ ಬರುವ ಒಳಹರಿವನ್ನು ಆಧರಿಸಿ ಕಾಲುವೆಗೆ ನೀರು ಹರಿಸುವ ಬಗ್ಗೆ ಪುನಃ ಕ್ರಮ ಕೈಗೊಳ್ಳಲಾಗುವುದು. ಇದೇ ರೀತಿ ಪರಿಸ್ಥಿತಿ ಮುಂದುವರಿದರೆ 2023-24ನೇ ಸಾಲಿನ ಹಿಂಗಾರು ಹಂಗಾಮಿಗೆ ನೀರು ಪೂರೈಸಲು ಸಾಧ್ಯವಾಗದೆ ಇರಬಹುದು. ನವೆಂಬರ್‌ನಲ್ಲಿ ಎರಡೂ ಜಲಾಶಯಗಳಲ್ಲಿಯ ನೀರಿನ ಸಂಗ್ರಹ ಗಮನದಲ್ಲಿಟ್ಟುಕೊಂಡು ಹಿಂಗಾರು ಹಂಗಾಮಿನ ನೀರಾವರಿ ಸಲಹಾ ಸಮಿತಿ ಸಭೆಯನ್ನು ನವೆಂಬರ್ ಅಂತ್ಯದಲ್ಲಿ ನಡೆಸಲಾಗುವುದು ಎಂದು ಸಚಿವರು ಮಾಹಿತಿ ನೀಡಿದರು.

ಸಭೆಯಲ್ಲಿ ಸಚಿವ ಶರಣಬಸಪ್ಪ ದರ್ಶನಾಪುರ, ಶಾಸಕರಾದ ಸಿ.ಎಸ್.ನಾಡಗೌಡ, ಎಚ್.ವೈ.ಮೇಟಿ, ಅಶೋಕ ಮನಗೂಳಿ, ವಿಠ್ಠಲ ಕಟಕಧೋಂಡ, ಜೆ.ಟಿ.ಪಾಟೀಲ, ಬಸನಗೌಡ ದದ್ದಲ್, ಕರೆಮ್ಮ ನಾಯಕ ಸೇರಿ ಹಲವು ಶಾಸಕರು, ಜಿಲ್ಲಾಧಿಕಾರಿಗಳು, ಅಭಿಯಂತರರು ಇದ್ದರು. *ಅಹವಾಲು ಸ್ವೀಕಾರ
ಐಸಿಸಿ ಸಭೆ ನಂತರ ಸಚಿವ ಆರ್.ಬಿ.ತಿಮ್ಮಾಪುರ ಎಂಡಿ ಕಚೇರಿ ಗೇಟ್ ಮುಂದೆ ನಿಂತಿದ್ದ ರೈತರಿಂದ ನಾನಾ ಅಹವಾಲು ಸ್ವೀಕರಿಸಿದರು.

ವಾರಾಬಂದಿ ಬದಲಾಯಿಸಬೇಕು. ನೀರು ಪೋಲಾಗದಂತೆ ಕ್ರಮ ಕೈಗೊಳ್ಳಬೇಕು, ಕಾಲುವೆ ಕೊನೆ ಅಂಚಿನವರೆಗೂ ನೀರು ಹರಿಸಬೇಕು. ಹಿಂಗಾರು ಹಂಗಾಮಿನ ಬೆಳೆಗಳಿಗೂ ನೀರು ಹರಿಸುವುದು ಸೇರಿದಂತೆ ನಾನಾ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಅಖಂಡ ಕರ್ನಾಟಕ ರೈತ ಸಂಘದ ಜಿಲ್ಲಾ ಘಟಕದ ಪದಾಧಿಕಾರಿಗಳು ಸಚಿವರಿಗೆ ಮನವಿ ಸಲ್ಲಿಸಿದರು.

ಅರವಿಂದ ಕುಲಕರ್ಣಿ ಮಾತನಾಡಿ, ರೈತರು ಭಯೋತ್ಪಾದಕರಲ್ಲ ರೈತರನ್ನು ಹೊರಗಿಟ್ಟು ಐಸಿಸಿ ಸಭೆ ನಡೆಸುವುದು ಸರಿಯಲ್ಲ. ಸಭೆಯಲ್ಲಿ ನಿಜವಾದ ರೈತ ಮುಖಂಡರಿಗೆ ಅವಕಾಶ ನೀಡಬೇಕು ಎಂದು ಒತ್ತಾಯಿಸಿದರು.

ಆರೇಶಂಕರ ಕೆರೆಯಿಂದ ನೀರಾವರಿ ಸೌಲಭ್ಯ ಕಲ್ಪಿಸಲು ಕಾಲುವೆಗಳಿಗೆ ನೀರು ಹರಿಸಬೇಕು ಎಂದು ನಿಡಗುಂದಿ ತಾಲೂಕಿನ ಆರೇಶಂಕರ, ಇಟಗಿ, ಜೀರಲಭಾವಿ ಸೇರಿ ನಾನಾ ಗ್ರಾಮಗಳ ಗ್ರಾಮಸ್ಥರು ವಿನಂತಿಸಿಕೊಂಡರು.

ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯಾಧ್ಯಕ್ಷ ವಾಸುದೇವ ಮೇಟಿ, ರೈತರನ್ನು ಕಡೆಗಣಿಸಿ ಸಭೆ ನಡೆಸಿದ್ದು ಖಂಡನೀಯ. ರೈತರನ್ನು ಹೊರಗಿಟ್ಟು ಚರ್ಚೆ ನಡೆಸುವ ಅವಶ್ಯಕತೆ ಏನಿದೆ? ಸಭೆಗೆ ಕನಿಷ್ಠ 8 ಜನ ರೈತ ನಾಯಕರನ್ನು ಆಹ್ವಾನಿಸಬೇಕು ಎಂದು ಆಗ್ರಹಿಸಿದರು.

ಸಚಿವ ಆರ್.ಬಿ.ತಿಮ್ಮಾಪುರ ಮಾತನಾಡಿ, ಸಭೆಯಲ್ಲಿ ನೀವೇ ಆಯ್ಕೆ ಮಾಡಿ ಕಳುಹಿಸಿದ ಜನಪ್ರತಿನಿಧಿಗಳಿರುತ್ತಾರೆ. ಆದರೂ ರೈತರನ್ನು ಆಹ್ವಾನಿಸುವ ಕುರಿತು ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು. ತಮ್ಮ ಎಲ್ಲ ಬೇಡಿಕೆಗಳನ್ನು ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net