ಏತ ನೀರಾವರಿ ಮೂಲಕ ಕೆರೆಗಳಿಗೆ ನೀರು

nrp 3 (4)
Published on

ಎನ್.ಆರ್.ಪುರ: ಏತ ನೀರಾವರಿ ಯೋಜನೆ ಮೂಲಕ ರೈತರ ಕೆರೆಗಳಿಗೆ ನೀರು ಹಾಯಿಸಿ, ಕೆರೆ ಅಚ್ಚುಕಟ್ಟು ಹೊಂದಿರುವ ರೈತರು ಕೆರೆ ನೀರನ್ನು ಬಳಸಿಕೊಳ್ಳಬಹುದು ಎಂದು ಕಡಹಿನಬೈಲು ಬಕ್ರೀಹಳ್ಳ ಏತ ನೀರಾವರಿ ಸಹಕಾರಿ ಸಂಘದ ಅಧ್ಯಕ್ಷ ಎಸ್.ಡಿ.ರಾಜೇಂದ್ರ ಹೇಳಿದರು.

ತಾಲೂಕಿನ ಕಡಹಿನಬೈಲು ಗ್ರಾಮದಲ್ಲಿ ಕಡಹಿನಬೈಲು ಬಕ್ರೀಹಳ್ಳ ಏತ ನೀರಾವರಿ ಸಹಕಾರಿ ಸಂಘದ ವಾರ್ಷಿಕ ಸಭೆಯಲ್ಲಿ ಮಾತನಾಡಿ, ಏತ ನೀರಾವರಿ ಯೋಜನೆಯಲ್ಲಿ ರೈತರ ಹೊಲ, ಗದ್ದೆಗಳಿಗೆ, ತೋಟಗಳಿಗೆ ನೇರವಾಗಿ ನೀರು ಹಾಯಿಸುವಂತಿಲ್ಲ. ಏತ ನೀರಾವರಿ ಮೂಲಕ ನೀರನ್ನು ಎತ್ತಿ, ಕಾಲುವೆಗಳ ಮೂಲಕ ರೈತರ ಕೆರೆಗಳಿಗೆ ನೀರು ತುಂಬಿಸುವುದೇ ಇದರ ಮುಖ್ಯ ಉದ್ದೇಶ. ಸರ್ಕಾರ ಏತ ನೀರಾವರಿ ವ್ಯಾಪ್ತಿಯ 58 ಕೆರೆಗಳಿಗೆ ನೀರಿನ ಸಂಗ್ರಹ ಸಾಮರ್ಥ್ಯ ಹೆಚ್ಚಿಸಲು, 14 ಕೆರೆಗಳಿಗೆ ಪೈಪ್‌ಲೈನ್ ಮಾಡಬೇಕಾಗಿದ್ದು, ಇನ್ನುಳಿದ 44 ಕೆರೆಗಳಿಗೆ ಕಾಲುವೆ ದುರಸ್ತಿ, ತೂಬ್ ದುರಸ್ತಿ, ರಿವಿಟ್‌ಮೆಂಟ್, ಗಿಡ ಗಂಟಿಗಳನ್ನು ತೆಗೆಯಲು ಹಾಗೂ ಹೂಳೆತ್ತಲು ಈಗಾಗಲೇ 15 ಕೋಟಿ ರೂ. ಮಂಜೂರಾಗಿದ್ದು, ಶೀಘ್ರದಲ್ಲಿ ಕಾಮಗಾರಿ ಆರಂಭಿಸಲಾಗುವುದು. ಅಲ್ಲಿಯವರೆಗೆ ಹಾಲಿ ಪೈಪ್‌ಲೈನ್‌ಗಳನ್ನು ದುರಸ್ತಿ ಮಾಡಿಸಿ ರೈತರ ಕೆರೆಗಳಿಗೆ ನೀರು ಹಾಯಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.

ಸಂಘದ ಹಿರಿಯ ನಿರ್ದೇಶಕ ಜಿ.ಡಿ.ಸೋಮಣ್ಣಗೌಡ ಮಾತನಾಡಿ, ಈ ಭಾಗದ ಹಲವು ರೈತರ ಪರಿಶ್ರಮದಿಂದ ಈ ಯೋಜನೆ ಸಾಕಾರಗೊಂಡಿದೆ. ಎಲ್ಲ ರೈತರೂ ಈ ಯೋಜನೆಯ ಪಾಲುದಾರರಾಗಬೇಕು. ಯೋಜನೆ ಸೌಲಭ್ಯ ಪಡೆಯಬೇಕು. ಸಹಕಾರ ಸಂಘದ ನಿರ್ವಹಣೆಗೆ ಎಲ್ಲ ಅಚ್ಚುಕಟ್ಟುದಾರ ರೈತರು ಎಕರೆವಾರು ಶುಲ್ಕ ಪಾವತಿಸಬೇಕು ಎಂದರು.

ಉಪಾಧ್ಯಕ್ಷ ಭೀಮನರಿ ಪ್ರಶಾಂತ್, ಕಾರ್ಯದರ್ಶಿ ಬಿ.ಕೆ.ಚಂದ್ರಶೇಖರ್, ನಿರ್ದೇಶಕರಾದ ಎಂ.ಟಿ.ಕುಮಾರ, ಬಿ.ಜೆ.ಲಕ್ಷ್ಮೇಶ್, ಎಂ.ಮಹೇಶ್, ಎಂ.ಇಬ್ರಾಹಿಂ, ರಂಜುಎಲಿಯಾಸ್, ಕೆ.ಕೆ.ಸುನಿ, ಪಿ.ವಿ.ಮತಾಯಿ, ಸುರೇಂದ್ರ, ಉಮಾಸತ್ಯನಾರಾಯಣ, ಇಂಜಿನಿಯರ್ ಸತೀಶ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net