

ಚಿತ್ರದುರ್ಗ: ಜನರ ಉತ್ತಮ ಆರೋಗ್ಯಕ್ಕಾಗಿ ಶುದ್ಧ ಕುಡಿಯುವ ನೀರು ಅಗತ್ಯ ಎಂದು ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಹೇಳಿದರು. ಮಂಗಳವಾರ ಚಿತ್ರದುರ್ಗ ತಾಲೂಕಿನ ಕಡ್ಲೆಗುದ್ದು ಮತ್ತು ಮೇಗಳಹಳ್ಳಿ ಗ್ರಾಮಗಳಲ್ಲಿ ಸಿ.ಸಿ. ರಸ್ತೆ ಕಾಮಗಾರಿಗಳಿಗೆ ಚಾಲನೆ ಮತ್ತು ಮೇಗಳಹಳ್ಳಿಯಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಉದ್ಘಾಟಿಸಿ ಮಾತನಾಡಿದರು.
ಮೇಗಳಹಳ್ಳಿಯ ಘಟಕವನ್ನು ಡಿಎಂಎಫ್ ಅನುದಾನದಲ್ಲಿ ನಿರ್ಮಿಸಲಾಗಿದೆ. 183 ಹಳ್ಳಿಗಳಿಗೆ 583 ಕೋಟಿ ರೂ.ವೆಚ್ಚದಲ್ಲಿ ವಿ. ವಿ. ಸಾಗರದಿಂದ ಕುಡಿಯುವ ನೀರು ಪೂರೈಸಲು ರಾಜ್ಯ ಸರ್ಕಾರ ಅನುದಾನ ನೀಡಿದೆ. ಹಂತಹಂತವಾಗಿ ಗ್ರಾಮಗಳಿಗೆ ನೀರು ಸರಬರಾಜು ಮಾಡಲಾಗುತ್ತದೆ ಎಂದರು.
ರಸ್ತೆ ಕಾಮಗಾರಿಗೆ ಚಾಲನೆ:
ಕಡ್ಲೆಗುದ್ದು ಗ್ರಾಮದಲ್ಲಿ ಶಾಸಕರ ಕ್ಷೇತ್ರಾಭಿವೃದ್ಧಿ ನಿಧಿಯಿಂದ 35 ಲಕ್ಷ ರೂ. ವೆಚ್ಚದಲ್ಲಿ ಎಲ್ಲ ರಸ್ತೆಗಳ ಅಭಿವೃದ್ಧಿ ಕಾಮಗಾರಿ ಪೂರ್ಣ ಗೊಳ್ಳುತ್ತಿವೆ. ಮೇಗಳಹಳ್ಳಿಯಲ್ಲಿ ಭದ್ರಾ ಮೇಲ್ದಂಡೆ ಯೋಜನೆಯಡಿ 30 ಲಕ್ಷ ವೆಚ್ಚದ ಸಿ.ಸಿ.ರಸ್ತೆ ಕಾಮಗಾರಿಗೆ ಆರಂಭವಾಗಿದೆ. ಗುಣ ಮಟ್ಟದೊಂದಿಗೆ ಕಾಮಗಾರಿಗಳನ್ನು ಶೀಘ್ರ ಪೂರ್ಣಗೊಳಿಸಲು ಸೂಚಿಸಿರುವುದಾಗಿ ತಿಳಿಸಿದರು.
ಗ್ರಾಪಂ ಸದಸ್ಯರಾದ ಮಂಜಣ್ಣ ತಿಪ್ಪೇಸ್ವಾಮಿ, ಹೊನ್ನಮ್ಮ, ಮಾರುತಿ, ಕುಮಾರ್, ಮುಖಂಡರಾದ ರಾಜಪ್ಪ, ಹನುಮಂತಪ್ಪ, ಮಧು ಮತ್ತಿತರರು ಇದ್ದರು.