ಕಾಡಿನ ಕೆರೆ, ಕಟ್ಟೆಗಳಿಗೆ ಟ್ಯಾಂಕರ್ ಮೂಲಕ ನೀರು

nagarahole3
Published on

ಮೈಸೂರು: ನಾಗರಹೊಳೆ ಅರಣ್ಯ ಪ್ರದೇಶದೊಳಗಿರುವ ಕೆರೆ-ಕಟ್ಟೆಗಳಲ್ಲಿ ನೀರು ಬತ್ತಿ ಹೋಗಿದ್ದು, ಪ್ರಾಣಿ-ಪಕ್ಷಿಗಳು ನೀರಿಗಾಗಿ ಪ್ರಯಾಸಪಡುತ್ತಿವೆ. ಹಾಗಾಗಿ, ವನ್ಯಜೀವಿಗಳ ಬಯಾರಿಕೆ ತಣಿಸಲು ಅರಣ್ಯ ಇಲಾಖೆ ಕಾಡಿನೊಳಗಿರುವ ಕೆರೆ, ಕಟ್ಟೆಗಳಿಗೆ ಟ್ಯಾಂಕರ್ ಮೂಲಕ ನೀರು ತುಂಬಿಸುವ ಕಾರ್ಯಕ್ಕೆ ಮುಂದಾಗಿದ್ದು, ಪ್ರಾಣಿ, ಪಕ್ಷಿಗಳು ನೆಮ್ಮದಿಯ ನಿಟ್ಟುಸಿರುಬಿಟ್ಟಿವೆ.

ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ವ್ಯಾಪ್ತಿಯ ಎಲ್ಲ ವಲಯದಲ್ಲೂ ಬಿಸಿಲಿನ ತಾಪಮಾನ ಹೆಚ್ಚಾದ ಪರಿಣಾಮ ಅರಣ್ಯ ಒಣಗಿಹೋಗುತ್ತಿದೆ. ಇತ್ತ ಕಾಡಿನಲ್ಲಿರುವ ಸಾಕಷ್ಟು ಕೆರೆ-ಕಟ್ಟೆಗಳಲ್ಲಿ ನೀರಿನ ಬವಣೆ ಕಾಣಿಸಿಕೊಂಡಿದೆ. ಇದರಿಂದ ವನ್ಯಜೀವಿಗಳು ನೀರಿಗಾಗಿ ಪರದಾಡುವ ಪರಿಸ್ಥಿತಿ ಹೆಚ್ಚಾಗಿದೆ. ಎಚ್ಚರ ವಹಿಸಿರುವ ಅರಣ್ಯ ಇಲಾಖೆ ಟ್ಯಾಂಕರ್‌ಗಳ ಮೂಲಕ ಕಾಡಿನೊಳಗಿನ ಕೆರೆಕಟ್ಟೆಗಳಿಗೆ ನೀರು ತುಂಬಿಸಿ ಕೆರೆಕಟ್ಟೆಗಳಲ್ಲಿ ನೀರು ಬತ್ತಿಹೋಗಿದಂತೆ ಕ್ರಮವಹಿಸಿದೆ.

ನಾಗರಹೊಳೆ ಅರಣ್ಯದೊಳಗೆ ಕಬಿನಿ ಹಾಗೂ ಲಕ್ಷ್ಮಣತೀರ್ಥ ನದಿ ಹರಿಯುತ್ತಿರುವುದು ಕಾಡಿನ ಅಪಾರ ಜೀವ ಸಂತತಿಗೆ ಅನುಕೂಲವಾಗಿದೆ. ಆದರೆ ಈ ಬಾರಿ ಮಳೆ ಪ್ರಮಾಣ ಕಡಿಮೆಯಾದ ಪರಿಣಾಮ ನದಿ ಪಾತ್ರ ಹಾಗೂ ಭೂಮಿಯಲ್ಲಿ ಅಂತರ್ಜಲ ಕಡಿಮೆಯಾಗಿದೆ. ಬೇಸಿಗೆಯ ಬಿಸಿಲಿನ ತಾಪ ಹೆಚ್ಚಾಗಿದೆ. ಈ ಹಿನ್ನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮ ವಹಿಸಿ ಅಗತ್ಯವಿರುವ ಕೆರೆ, ಕಟ್ಟೆಗಳಿಗೆ ಟ್ಯಾಂಕರ್‌ಗಳ ಮೂಲಕ ನೀರು ತುಂಬಿಸುವ ಕಾರ್ಯಕೈಗೊಳ್ಳಲಾಗಿದೆ ಎಂದು ನಾಗರಹೊಳೆ ಹುಲಿ ಯೋಜನೆ ನಿರ್ದೇಶಕ ಡಾ.ಹರ್ಷಕುಮಾರ್ ಚಿಕ್ಕನರಗುಂದ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net